ಮುಂಬೈ: ನಗರದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಸಂಚಾರಿ ಪೊಲೀಸರು 17,800 ವಾಹನ ಚಾಲಕರಿಗೆ ದಂಡ ವಿಧಿಸಿ 89.19 ಲಕ್ಷ ರೂಪಾಯಿ ದಂಡದ ಮೊತ್ತವನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಹೊಸ ವರ್ಷವನ್ನು ಆಚರಿಸಲು ಗೇಟ್ವೇ ಆಫ್ ಇಂಡಿಯಾ, ಮರೈನ್ ಡ್ರೈವ್, ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ ಮತ್ತು ಜುಹು ಚೌಪಾಟಿ ಸೇರಿದಂತೆ ಮುಂಬೈನ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಈ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಇ-ಚಲನ್ ಮೂಲಕ 89,19,750 ರೂಪಾಯಿ ದಂಡವನ್ನು ಸಂಚಾರ ಪೊಲೀಸರು ವಸೂಲಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ಯಾವುದೇ ಅಹಿತಕರ ನಡೆಯದಂತೆ ಎಂಟು ಹೆಚ್ಚುವರಿ ಆಯುಕ್ತರು, 29 ಡೆಪ್ಯುಟಿ ಕಮಿಷನರ್ಗಳು, 53 ಸಹಾಯಕ ಆಯುಕ್ತರು, 2184 ಇನ್ಸ್ಪೆಕ್ಟರ್ಗಳು ಮತ್ತು 12,000 ಕ್ಕೂ ಹೆಚ್ಚು ಕಾನ್ಸ್ಟೆಬಲ್ಗಳು ಹೊಸ ವರ್ಷದ ಮುನ್ನಾದಿನ ನಗರದ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಈ ನಡುವೆ ಕುಡಿದು ವಾಹನ ಚಲಾಯಿಸುವುದು, ಸುಗಮ ಸಂಚಾರಕ್ಕೆ ಅಡ್ಡಿಪಡಿಸುವುದು, ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದು, ಸಿಗ್ನಲ್ ಜಂಪ್ ಮಾಡುವುದು ಮತ್ತು ಏಕಮುಖ ರಸ್ತೆಗೆ ಪ್ರವೇಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಿತಿ ಮೀರಿದ ವೇಗದ ಚಾಲನೆ, ಸೀಟ್ ಬೆಲ್ಟ್ ಧರಿಸದೆ ವಾಹನಗಳನ್ನು ಚಲಾಯಿಸುವುದು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Video: ಚಿಂದಿ ಆಯುವ ಮಕ್ಕಳ ಕೈಯಲ್ಲಿ 500 ರ ಕಂತೆ ಕಂತೆ ನೋಟು… ವಿಡಿಯೋ ವೈರಲ್