Advertisement

Indian scientists: ಜಗತ್ತಿಗೆ ಭಾರತೀಯ ವಿಜ್ಞಾನಿಗಳ ಕೊಡುಗೆ

01:27 PM Feb 27, 2024 | Team Udayavani |

ಅಧ್ಯಯನದ ಒಂದು ವಿಶ್ಲೇಷಣಾತ್ಮಕ ಕ್ಷೇತ್ರವಾದ ವಿಜ್ಞಾನವು ಪ್ರಕೃತಿಯ ನಿಯಮಗಳನ್ನು ಅಧ್ಯಯನ ಮಾಡಿ, ಅವುಗಳ ಮೇಲಾಧಾರಿತ ಅನ್ವೇಷಣೆಗಳನ್ನು ನಡೆಸುತ್ತದೆ. ವಿಜ್ಞಾನದ ಅಧ್ಯಯನ ವಿಧಾನವು ವಿಷಯ ಸಂಗ್ರಹ, ಸೂಕ್ಷ್ಮ ಪರಿಶೀಲನೆ, ಪರೀಕ್ಷೆ ಮತ್ತು ಪ್ರಯೋಗಗಳ ಮೂಲಕ ನಡೆಸಲ್ಪಟ್ಟು, ಅಂತಿಮವಾಗಿ ಆ ವಿಷಯದಲ್ಲಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಇದು ವೈಜ್ಞಾನಿಕತೆ ಎಂಬ ನಾಮದಿಂದ ಕರೆಯಲ್ಪಡುತ್ತದೆ.

Advertisement

ಭಾರತೀಯ ವೈಜ್ಞಾನಿಕ ಪರಂಪರೆಯು ವಿಶ್ವದ ಪ್ರಾಚೀನ ವೈಜ್ಞಾನಿಕ ಜ್ಞಾನ ಮತ್ತು ಅನುಭವಗಳ ಹಿನ್ನೆಲೆಯಲ್ಲಿ ಅದ್ಭುತ ಆಧಾರಗಳನ್ನು ಹೊಂದಿದ್ದು, ಪ್ರಾಚೀನ ಕಾಲದಿಂದಲೂ ಅಧ್ಯಯನ ಮತ್ತು ಪ್ರಯೋಗಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿದೆ. ಭಾರತೀಯ ವೈಜ್ಞಾನಿಕ ಇತಿಹಾಸವು ವೇದಗಳಲ್ಲಿ ಪ್ರಾರಂಭವಾಗಿದೆ. ಗಣಿತ, ಜ್ಯೋತಿಷ್ಯ, ಚಿಕಿತ್ಸೆ, ವಿಮಾನಶಾಸ್ತ್ರ ಮತ್ತು ಅನೇಕ ಪ್ರಾಕೃತಿಕ ವಿಜ್ಞಾನಗಳ ಉಲ್ಲೇಖಗಳಿವೆ.

ಅನೇಕ ಕ್ಷೇತ್ರಗಳಲ್ಲಿ ಭಾರತೀಯ ವಿಜ್ಞಾನಿಗಳು ಉನ್ನತ ಸಾಧನೆಗಳನ್ನು ಮಾಡಿದ್ದಾರೆ. ಗಣಿತದಲ್ಲಿ ಶೂನ್ಯವನ್ನು ಒಳಗೊಂಡ ದಶಮಾಂಶ ಪದ್ಧತಿಯನ್ನು ಕಂಡುಹಿಡಿದು, ಸೂರ್ಯ ಮತ್ತು ಚಂದ್ರನ ಗತಿಯ ಬಗ್ಗೆ ವಿವರಣೆ ನೀಡಿ ದ್ದಾರೆ. ಭಾರತೀಯ ವೈಜ್ಞಾನಿಕ ಪರಂಪರೆಯು ಸಂಸ್ಕೃತಿಯ ಭಾವನೆ, ಆಧುನಿಕ ವಿಜ್ಞಾನ, ತತ್ತ್ವಶಾಸ್ತ್ರ ಮತ್ತು ತಾಂತ್ರಿಕ ಜ್ಞಾನವನ್ನು ಸಮನ್ವಯಿಸಿ ಮುಂದುವರಿಸಿದೆ.

ಭಾರತದ ಜ್ಞಾನಿಗಳು ತಮ್ಮ ಅರಿವಿನ ವ್ಯಾಪ್ತಿಯ ವಿಚಾರಗಳನ್ನು ಕಥೆಗಳ ಮೂಲಕ ಜನ ಸಾಮಾನ್ಯರಿಗೂ ಅರ್ಥವಾಗುವಂತಹ ಭಾಷೆಯಲ್ಲಿ ಸರಳೀಕೃತಗೊಳಿಸಿ ಸಾದರಪಡಿಸಿದರು. ಜ್ಞಾನ ಯಾರ ಸೊತ್ತು ಅಲ್ಲ, ಎಲ್ಲರಿಗೂ ಸೇರಬೇಕಾದದ್ದು ಎಂಬ ಉದಾರತೆ ನಮ್ಮವರದ್ದಾದ ಕಾರಣ, ವಿಚಾರವನ್ನು ಸ್ಪಷ್ಟವಾಗಿ ತಿಳಿಯಪಡಿಸಿ, ನಾನೇ ಆವಿಷ್ಕರಿಸಿದ್ದು ಎನ್ನುವ ತಲೆಯ ಮೇಲಿನ ಕಿರೀಟವನ್ನು ಸಹಜವಾಗಿ ತೊರೆದರು.

ಹಾಗಾಗಿ ಭಾರತೀಯರು ಹಾಕಿದ ತಳಹದಿಯನ್ನು ಪಾಶ್ಚಿಮಾತ್ಯರು ಬೆಳೆಸಿ, ಅದರ ಕೀರ್ತಿಯನ್ನು ತಮ್ಮದಾಗಿಸಿದರು. ಭಾರತೀಯರು ಮೇಲ್ನೋಟಕ್ಕೆ ಕಾಣುವ ಈ ವಾಸ್ತವವನ್ನು ಅರಿತರೂ, ನೈಜ ವಿಜ್ಞಾನಿಗಳನ್ನು ಗೌರವಿಸದೆ ಪಾಶ್ಚಾತ್ಯರನ್ನೇ ಪಠ್ಯಪುಸ್ತಕಗಳ ಮೂಲಕ ಪ್ರಶಂಸಿಸುತ್ತಿರುವುದು ವಿಷಾದನೀಯ.

Advertisement

ಭಾರತೀಯ ವಿಜ್ಞಾನಿಗಳ ಕೊಡುಗೆ

ಭಾಸ್ಕರಾಚಾರ್ಯರು 1150ರಲ್ಲಿಯೇ ಗುರುತ್ವಾಕರ್ಷಣೆ ಬಲವನ್ನು ಅನ್ವೇಷಿಸಿ, ಗ್ರಹಗಳ ಚಲನೆ, ಅವುಗಳ ನಡುವಿನ ಆಕರ್ಷಣೆಯ ಬಗ್ಗೆ ಹೇಳಿದ್ದರು. ಸೊನ್ನೆಯನ್ನು ಕಂಡುಹಿಡಿಯುವ ಮೂಲಕ ಸೂರ್ಯ ಚಂದ್ರರ ನಿಖರ ದೂರವನ್ನು ಆರ್ಯಭಟ ಅಳೆಯುತ್ತಾರೆ. ವರಾಹಮಿಹಿರ ಸಾವಿರದ ಐನೂರು ವರ್ಷಕ್ಕೂ ಮೊದಲೇ ಮಂಗಳ ಗ್ರಹದಲ್ಲಿ ನೀರು, ಕಬ್ಬಿಣವಿದೆ ಎನ್ನುವುದನ್ನು ಅರಿತಿದ್ದರು. ಯಾವುದೇ ಉಪಕರಣಗಳಿಲ್ಲದೆ ಭೂಮಿ, ಚಂದ್ರ, ಸೂರ್ಯರ ಗತಿಯನ್ನು ಕರಾರುವಕ್ಕಾಗಿ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಹೇಳಿದ್ದರು. ಮಾತ್ರವಲ್ಲದೆ ಅಂತರ್ಜಲದ ಮಟ್ಟ, ಮಣ್ಣಿನ ಗುಣಮಟ್ಟವನ್ನು ನೋಡಿ ನೀರನ್ನು ಅಳೆಯೋದನ್ನು ಜಗತ್ತಿಗೆ ಹೇಳಿಕೊಟ್ಟರು.

ವಕ್ರೀಭವನ, ವಿವರ್ತನೆ ಮತ್ತು ಧ್ರುವೀಕರಣವನ್ನು ಒಳಗೊಂಡ ಪ್ರಯೋಗಗಳನ್ನು ನಡೆಸಿದ ಜಗದೀಶ ಚಂದ್ರ ಬೋಸರನ್ನು ಮರೆಯುವುದುಂಟೆ? ಅವರು ಕಡಿಮೆ ತರಂಗಾಂತರದ ರೇಡಿಯೋ ತರಂಗಗಳಿಗೆ ಮತ್ತು ಬಿಳಿ ಮತ್ತು ನೇರಳಾತೀತ ಬೆಳಕಿಗೆ ಎರಡೂ ಗ್ರಾಹಕಗಳನ್ನು ತಯಾರಿಸಲು ಗಲೇನಾ ಸ್ಫಟಿಕಗಳ ಬಳಕೆಯನ್ನು ಅಭಿವೃದ್ಧಿಪಡಿಸಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರು ಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಿ ಐತಿಹಾಸಿಕ ಸೀಮಾಪುರುಷರಲ್ಲಿ ಒಬ್ಬರಾದರು.

ಹೀಗೆ ಇಂದು ಪಾಶ್ಚಿಮಾತ್ಯರ ಹೆಸರಿಡಿದು ಗುರುತಿಸುವ ಪ್ರತಿಯೊಂದು ವೈಜ್ಞಾನಿಕ ಅನ್ವೇಷಣೆಗಳ ಹಿಂದೆಯೂ ಭಾರತೀಯರು ಸಾಧಿಸಿ ತೋರಿಸಿದ ತತ್ತ್ವವಿದೆ.

ಆಧುನಿಕ ವಿಜ್ಞಾನ

ಸಿ.ವಿ. ರಾಮನ್‌ ಅವರು ಕಂಡುಹಿಡಿದ ಚದುರುವಿಕೆ ಸಿದ್ಧಾಂತವು ರಾಮನ್‌ ಪರಿಣಾಮ ಎಂದೇ ಇಂದು ಪ್ರಸಿದ್ಧವಾಗಿದೆ.  ಭಾರತೀಯ ಪರಮಾಣು ಕಾರ್ಯಕ್ರಮದ ಪಿತಾಮಹ ಎಂದು ಕರೆಯಲ್ಪಡುವ ಹೋಮಿ ಜಹಾಂಗೀರ್‌ ಬಾಬಾ ಕೂಡ ಉಲ್ಲೇಖನೀಯ ವ್ಯಕ್ತಿ. ಶಾಂತಿ ಸ್ವರೂಪ್‌ ಭಟ್ನಾಗರ್‌ ಅವರನ್ನು ಭಾರತದಲ್ಲಿ ಸಂಶೋಧನಾ ಪ್ರಯೋಗಾಲಯಗಳ ಪಿತಾಮಹ ಎಂದೇ ಕರೆಯಲಾಗುತ್ತದೆ.

ಭಾರತದ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ನಾಲ್ಕು ದಶಕಗಳ ಕಾಲ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ನಿರ್ವಾಹಕರಾಗಿದ್ದರು. ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಮಿಲಿಟರಿ ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ, ಅವರು ಭಾರತದ ಮಿಸೈಲ್‌ ಮ್ಯಾನ್‌ ಎಂದು ಪ್ರಖ್ಯಾತರಾದರು.

ಅದಿತಿ ಪಂತ್‌ ಎಂಬ ಭಾರತೀಯ ಸಾಗರಶಾಸ್ತ್ರಜ್ಞೆ 1983ರಲ್ಲಿ ಭಾರತೀಯ ಅಂಟಾರ್ಟಿಕಾ ಕಾರ್ಯಕ್ರಮದ ಭಾಗವಾಗಿ ಭೂವಿಜ್ಞಾನಿ ಸುದೀಪ್ತ ಸೆಂಗುಪ್ತ ಅವರೊಂದಿಗೆ ಅಂಟಾರ್ಟಿಕಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಮಹಿಳೆಯಾಗಿ ಸಾಧನೆಯನ್ನು ಮೆರೆದಿದ್ದಾರೆ.

ಎಂಜಿನಿಯರಿಂಗ್‌ನಲ್ಲಿ ಇಂದಿಗೂ ಅದ್ಭುತ ಎಂದು ಪರಿಗಣಿಸಲ್ಪಟ್ಟಿರುವ ಸ್ವಯಂಚಾಲಿತ ಸ್ಲೂಸ್‌ ಗೇಟ್‌ಗಳು ಮತ್ತು ಬ್ಲಾಕ್‌ ನೀರಾವರಿ ವ್ಯವಸ್ಥೆಗಳನ್ನು ಕಂಡುಹಿಡಿದ ಕೀರ್ತಿ ಸರ್‌ ಎಂ. ವಿಶ್ವೇಶ್ವರಯ್ಯ ಅವರಿಗಿದೆ. ಪ್ರತೀ ವರ್ಷ, ಅವರ ಜನ್ಮದಿನವಾದ ಸೆಪ್ಟಂಬರ್‌ 15 ಅನ್ನು ಭಾರತದಲ್ಲಿ ಎಂಜಿನಿಯರ್‌ ದಿನವನ್ನಾಗಿ ಆಚರಿಸಲಾಗುತ್ತದೆ.

ಜಗತ್ತನ್ನೇ ತತ್ತರಿಸಿದ ಕೋವಿಡ್‌ ಕಾಲಘಟ್ಟದಲ್ಲಿ ಭಾರತ ಲಸಿಕೆ ಅಭಿವೃದ್ಧಿ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿತ್ತು. ಕೊವಿಡ್‌-19 ಲಸಿಕೆಗಳನ್ನು ಸ್ವತಃ ಸಂಶೋಧಿಸಿ, 90ಕ್ಕೂ ಹೆಚ್ಚು ದೇಶಗಳಿಗೆ 7 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಪೂರೈಸಿದ್ದು ಭಾರತದ ಹಿರಿಮೆಯಲ್ಲವೇ?

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿ ಸೇವೆ ಸಲ್ಲಿಸಲು “ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ಯನ್ನು 1969ರಲ್ಲಿ ಸ್ಥಾಪಿಸಲಾಯಿತು. ಮೊಟ್ಟಮೊದಲನೆದಾಗಿ ಆರ್ಯಭಟ ಉಪಗ್ರಹವನ್ನು ಉಡಾಯಿಸಲಾಯಿತು. ಹೀಗೆ ಆಧುನಿಕ ಜನಾಂಗವೂ ಕೂಡ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಿದೆ ಎಂಬುದು ಹೆಮ್ಮೆಯ ಸಂಗತಿ. ಭವಿಷ್ಯದಲ್ಲಿ ಗಗನಯಾನ ಕಾರ್ಯಕ್ರಮದಡಿಯಲ್ಲಿ ಎರಡು ಮಾನವರಹಿತ ಮಿಷನ್‌ಗಳು ಮತ್ತು ಒಂದು ಮಾನವಸಹಿತ ಮಿಷನ್‌ಗಳನ್ನು ಕೈಗೊಳ್ಳಲು ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಪ್ರಾಚೀನರು ಅನ್ವೇಷಿಸಿ ಉಳಿಸಿ ಹೋದ ಮಾರ್ಗದರ್ಶನದ ಹಾದಿಯಲ್ಲಿ ಆಧುನಿಕ ಜನಾಂಗ ನಡೆಯುತ್ತಲಿದ್ದರೂ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಸದ್ಭಳಕೆ ಮಾಡಿಕೊಂಡು ವಿಜ್ಞಾನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಹಾಗೆಯೇ, ಇತ್ತೀಚಿನ ಬೆಳೆವಣಿಗೆಗಳನ್ನು ರಾಷ್ಟ್ರದ ನೆಲೆಯಲ್ಲಿ ಸೂಕ್ಷ್ಮವಾಗಿ ಅವಲೋಕಿಸುವಾಗ ಭಾರತ ವಿಶ್ವಗುರುವಾಗಿ ಮೆರೆಯುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

-ಪಂಚಮಿ ಬಾಕಿಲಪದವು

ಅಂಬಿಕಾ ಮಹಾವಿದ್ಯಾಲಯ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next