Advertisement

UV Fusion: ಜೀವನದಿ ಕಾವೇರಿ

04:06 PM Nov 20, 2024 | Team Udayavani |

ಅಕ್ಟೋಬರ್‌ ತಿಂಗಳು ಬಂತೆಂದರೆ ಸಾಕು ಎಲ್ಲೆಡೆ ದಸರಾ ಸಡಗರ. ಇಡೀ ಕರುನಾಡೇ ದಸರಾ ಸಂಭ್ರಮದಲ್ಲಿದ್ದರೆ ಕೊಡಗಿನ ಜನತೆ ಮಾತ್ರ ಮಡಿಕೇರಿ ದಸರಾ ಸಡಗರದ ಜತೆ ಜತೆಗೆ ಅವರ ಮನಸ್ಸು ತಾಯಿ ಕಾವೇರಿಯ ಕಡೆಗೆ ವಾಲಿರುತ್ತದೆ.

Advertisement

ಕರ್ನಾಟಕದ ಜೀವನದಿ ಕಾವೇರಿ ತಾಯಿಯ ಜನ್ಮಸ್ಥಳ ಕೊಡಗಿನ ತಲಕಾವೇರಿ. ಬ್ರಹ್ಮಗಿರಿ ಬೆಟ್ಟದಿಂದ ನೀರಿನ ರೂಪದಲ್ಲಿ ಜನ್ಮ ಪಡೆಯುವ ತಾಯಿ ಕಾವೇರಿ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ ರಾಜ್ಯದಲ್ಲೂ ಹರಿದು ಜೀವನದಿಯಾಗಿದ್ದಾಳೆ. ಈ ತಾಯಿ ಜುರಾಸಿಕ್‌ ಅಂತ್ಯದ ಕ್ರಿಟೇಷಿಯಸ್‌ ಕಾಲದ ಆರಂಭದ ಸಮಯದಲ್ಲಿ ಕೊಡಗಿನ ಜನತೆಗೆ ವರ್ಷ-ವರ್ಷ ತಾನು ತೀರ್ಥರೂಪದಲ್ಲಿ ದರ್ಶನ ನೀಡುವುದಾಗಿ ಭರವಸೆ ನೀಡಿದ್ದಳು ಎಂಬುದು ಪ್ರತೀತಿ. ಅಂದಿನಿಂದ ಇಂದಿನವರೆಗೂ ಕಾವೇರಿ ತಾಯಿ ತನ್ನ ಮಾತಿಗೆ ತಪ್ಪದೆ ಪ್ರತೀ ವರ್ಷವೂ ಅದನ್ನು ನಡೆಸಿಕೊಂಡು ಬಂದಿದ್ದಾಳೆ.

ತಾಯಿ ಕಾವೇರಮ್ಮ ತನ್ನ ಮಕ್ಕಳಿಗೆ ನಿರಾಶೆಯಾಗದ ಹಾಗೆ ಪ್ರತೀ ವರ್ಷ ಅಕ್ಟೋಬರ್‌ನಲ್ಲಿ ಬರುವ ತುಲಾ ಸಂಕ್ರಮಣದ ದಿನ ತುಲಾ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಬಂದು ತನ್ನ ಭಕ್ತರಿಗೆ ಆಶೀರ್ವಾದ ನೀಡುವಳು. ಇಲ್ಲಿನ ಇನ್ನೊಂದು ವಿಶೇಷವೆಂದರೆ ತೀಥೋìದ್ಭವದ ದಿನ ಹೆಚ್ಚಿನ ಭಕ್ತರು ಭಾಗಮಂಡಲದ ಭಗಂಡೇಶ್ವರ ದೇಗುಲದಿಂದ ತಲಕಾವೇರಿಯ ವರೆಗೆ ಪಾದಯಾತ್ರೆ ಮೂಲಕ ತಲುಪುತ್ತಾರೆ.

ಈ ಕುರಿತಾಗಿ ಈಗಾಗಲೇ ಇನ್‌ಸ್ಟಾಗ್ರಾಂ, ಫೇಪ್‌ಬುಕ್‌, ವಾಟ್ಸಪ್‌ನಲ್ಲಿ “ಕಾವೇರಿ ನಡಪ್‌’ ಅನ್ನುವ ಹಲವಾರು ರೀಲ್ಸ್‌, ಫೋಟೋಗಳು  ಸೆಪ್ಟೆಂಬರ್‌ ತಿಂಗಳಿನಿಂದಲೇ ಹರಿದಾಡಲು ಪ್ರಾರಂಭವಾಗಿದೆ.

Advertisement

ವಿದ್ಯಾಭ್ಯಾಸ, ಉದ್ಯೋಗ ಹೀಗೆ ಹಲವಾರು ಕಾರಣಗಳಿಂದ ಕೊಡಗಿನಿಂದ ದೂರವಿರುವ ಜನರು ಎಲ್ಲಿದ್ದರೂ ಈ ದಿನದಂದು ಬಿಡುವು ಮಾಡಿಕೊಂಡು ಕಾವೇರಮ್ಮನ ಆಶೀರ್ವಾದ ಪಡೆಯಲು ಬಂದೇ ಬರುತ್ತಾರೆ. ಇದರೊಂದಿಗೆ ವರ್ಷವೂ ಲಕ್ಷಾಂತರ ಭಕ್ತರು ಕಾವೇರಿ ಅಮ್ಮನನ್ನು ನೋಡಿ ಕಣ್ಮನ ತುಂಬಿಕೊಳ್ಳಲು ಆಗಮಿಸುತ್ತಾರೆ. ತೀರ್ಥೋದ್ಭವದ ಸಮಯದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಜಾತ್ರೆಯೇ ನೆರೆದಿರುತ್ತದೆ. ಆ ದಿನ ಕೊಡಗಿನ ಪ್ರತಿಯೊಂದು ಮನೆಯಲ್ಲೂ ಬಾವಿಗೆ ಪೂಜೆ ಸಲ್ಲಿಸಿ ತಾಯಿ ಕಾವೇರಿಯನ್ನು ಬರಮಾಡಿಕೊಳ್ಳುತ್ತಾರೆ. ತಾಯಿ ಕಾವೇರಿಯು ತನ್ನ ಮಕ್ಕಳನ್ನು ಕೈ ಬಿಡದೆ ಸದಾಕಾಲ ಆಶೀರ್ವದಿಸುತ್ತ ಕಾಪಾಡುವಳು.

- ಧನ್ಯ ದೇಚಮ್ಮ ತೊತ್ತಿಯಂಡ

ಸಂತ ಅಲೋಶಿಯಸ್‌ ಪರಿಗಣಿತ

ವಿವಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next