Advertisement

UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌

03:11 PM Nov 23, 2024 | Team Udayavani |

ಕಾಲ ಇನ್ನಿಲ್ಲದಂತೆ ಓಡುತ್ತಿದೆ. ಕಾಲದ ಜತೆ ನಾವೂ ದಾಪುಗಾಲಿಡುತ್ತಿದ್ದೇವೆ.. ಮೊದಲು ಹಳ್ಳಿ ಹಳ್ಳಿಯಲ್ಲೂ ಅವಿಭಕ್ತ ಕುಟುಂಬ ಇರ್ತಾ ಇತ್ತು… ಅಜ್ಜ, ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಅವರ ಮಕ್ಕಳು, ಮಾವ, ಅತ್ತೆ.. ಹೀಗೆ ಸಂಬಂಧಗಳ ಕೊಂಡಿ ಉದ್ದ ಇತ್ತು….

Advertisement

ಆದರೆ ಈಗ ಚಿಕ್ಕ ಕುಟುಂಬ, ಚೊಕ್ಕ ಕುಟುಂಬ ಅನ್ನೋ ಕಾನ್ಸೆಪ್ಟ್‌ ಅಡಿಯಲ್ಲಿ ಗಂಡ -ಹೆಂಡತಿ, ಮಗ -ಮಗಳು ಇಷ್ಟೇ ಕುಟುಂಬ ಅನ್ಕೊಂಡಿದೆ. ಮೊದಲು ಮನೆಯಲ್ಲಿ ಒಬ್ಬ ಹಿರಿತಲೆಯ ಮಾತಿಗೆ ಅಷ್ಟೇ ಬೆಲೆ ಇರ್ತಿತ್ತು, ಯಾವೊಬ್ಬ ಮನೆ ಸದಸ್ಯನೂ ಆ ಮಾತನ್ನು ಮೀರಿ ನಡೀತಾ ಇರ್ಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ಪ್ರತಿಯೊಬ್ಬರು ಅವರವರ ಮಟ್ಟಿಗೆ ಹಿರಿತಲೆಯವರು ಹಾಗಾಗಿ ಕೇಳುವವರೆಲ್ಲಿ, ಎಲ್ಲಾ ಹೇಳುವವವರೇ.

ಮೊದಲೆಲ್ಲಾ ಬೇಸಿಗೆ ರಜೆ ಅಂದ್ರೆ ಅಜ್ಜಿ ಮನೆಗೆ ಹೋಗುವ ಒಂದು ಜಾಲಿ ಟ್ರಿಪ್‌!… ಒಂದೂವರೆ ತಿಂಗಳು ಆಡಿದ ಆಟಗಳೆಷ್ಟೋ… ಬಾಯಿ ಚಪ್ಪರಿಸಿ ತಿಂದ ಆ ಗುಡ್ಡಗಾಡಿನ ಹಣ್ಣುಗಳೆಷ್ಟೋ, ಪ್ರಸ್ತುತ ಆ ಪರಿಸ್ಥಿತಿ ಈವಾಗ ಮಸುಕಾಗಿದೆ…. ಅಜ್ಜಿ ಮನೆಯೇ ಇಲ್ಲವಾಗಿದೆ, ಮಕ್ಕಳ ಜಗಳದಿಂದ ಅಜ್ಜ -ಅಜ್ಜಿಗೆ ಒಂದೊಂದು ಕಡೆ ವಾಸ ಅನ್ನುವಂತಾಗಿದೆ.. ಒಂದೊಮ್ಮೆ ಅಜ್ಜಿ ಮನೆ ಇದ್ದರೂ, ಮೊಮ್ಮಕ್ಕಳಿಗೆ ಅಲ್ಲಿ ಹೋಗಲು ಮನಸ್ಸಿಲ್ಲ. ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌ !!

ಅಜ್ಜಿಯ ಹಳೆಯ ಅಭಿರುಚಿ ಮಕ್ಕಳಿಗೆ ಒಗ್ಗುತ್ತಿಲ್ಲ. ಆವಾಗಿನ ಕಾಲ ಮೊಬೈಲ್, ದೂರದರ್ಶನ, ಇಂಟರ್ನೆಟ್‌ ಇಲ್ಲದ ಕಾಲವದು. ದೂರದ ಊರುಗಳಲ್ಲಿ ನೆಲೆಸಿರುವ ಬಂಧುಗಳಿಂದ ಅಂಚೆ ಕಾಗದದ ಮೂಲಕ ವ್ಯವಹಾರ. ಏಳನೇ ಕ್ಲಾಸ್ನವರೆಗೂ ಓದಿದ್ರೂ ತಪ್ಪಿಲ್ಲದೆ ಕಾಗುಣಿತ ಬರೆಯುವ ಚಾಣಕ್ಯತೆ ಇದ್ದಂತಹ ಜನರು. ಈಗ ಪದವಿ ಕಲಿತ ಜಾಣ ಜನರಿಗೂ ತಪ್ಪಿಲ್ಲದೆ ಬರೆಯುವ ಜ್ಞಾನ ಇಲ್ಲದ್ದು ವಿಪರ್ಯಾಸ ! ಏನಿದ್ದರೂ ಇಂಟರ್ನೆಟ್‌ ಅವಲಂಬಿತ ಯುವಜನತೆ. ‌

Advertisement

ಮೊದಲೆಲ್ಲಾ,ಕಟ್ಟುನಿಟ್ಟಾಗಿ ಸರಿಯಾಗಿ ಮೂರು ತಿಂಗಳು ಸುರಿಯುವ ಮಳೆ, ಮೊದಲ ಮಳೆಯ ಸ್ಪರ್ಶದಿಂದ ಮಣ್ಣಿನಿಂದ ಹೊರಸೂಸುವ ಆ ಸುವಾಸನೆಗೆ, ಆ ಚಿಟಪಟ ಮಳೆಯಲ್ಲಿ ಮಿಂದು ತೊಯ್ದು ತೊಪ್ಪೆಯಾಗಿ, ಮರುದಿನ ಜ್ವರ ಹಿಡಿದು, ಮನೆಯವರ ಬೈಗುಳ ತಿಂದು, ಮತ್ತೆ ಜ್ವರ ಕಮ್ಮಿ ಆಗಿ, ಮಳೆಯಲಿ ಕುಣಿದ ನೆನಪು…

ಈಗ ಆ ಅನುಭವ ನಮೆಗೆಲ್ಲಿ ಬಿಡಿ. ಮಳೆ ಬರುವುದೇ ಅನಿರೀಕ್ಷಿತ ಅನ್ನುವ ಹಾಗೆ, ಮಳೆಗಾಲ ಅಲ್ಲದಿದ್ದರೂ ಮಳೆ ಸುರಿಯುವ ಈ ಪರಿ. ಮನೆಯ ಟೆರೇಸ್‌ ಮೇಲೋ, ಬಾಲ್ಕಾನಿ ಮೇಲೋ ಕುಳಿತು ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಸ್ಟೇಟಸ್‌ ಹಾಕಿ ವೀಕ್ಷಿಸಿದವರೆಷ್ಟು ಅನ್ನೋದನ್ನು ನೋಡುತ್ತಾ ಮಳೆಯನ್ನು ಆಸ್ವಾದಿಸೋದನ್ನೆ ಬಿಟ್ಟಿದೇವೆ.. (ನಾನೂ ಹೊರತಾಗಿಲ್ಲ)

ಮೊದಲು ಮಾನವೀಯತೆ ಎಲ್ಲಾರ ಮನೆಮಾತಾಗಿತ್ತು… ಕಷ್ಟದಲ್ಲಿರೋರಿಗೆ ಸಹಾಯ ಮಾಡೋ ಗುಣ ಇರ್ತಿತ್ತು. ಹಾಗಾಗಿ ನೆರೆಹೊರೆಯವರಲ್ಲಿನ ಬಾಂಧವ್ಯ ಚೆನ್ನಾಗಿತ್ತು. ಈಗ ಸಹಾಯ ಬಿಡಿ, ಕನಿಷ್ಠ ಅನುಕಂಪ ತೋರಿಸೊ ಜನರು ಸಿಗೋದು ಅಪರೂಪ. ತೋರಿಸಿದರೂ ಅನುಮಾನ ವ್ಯಕ್ತಪಡಿಸುವವರು ಜಾಸ್ತಿ. ಸಹಾಯ ಮಾಡಿದರೆ, ಅವರೇಕೆ? ಏನು ಲಾಭ? ಅಂತ ಯೋಚನೆ ಮಾಡೋ ಜನ ಜಾಸ್ತಿ. ಹಾಗಾಗಿ ಮಾನವೀಯತೆ ಅನ್ನೋದು ಮರೀಚಿಕೆ ಆಗುತ್ತಿದೆಯಾ ಅನ್ನೋ ಬೇಸರ ಮೂಡುತ್ತಿದೆ. ಮೊದಲು ಹಿರಿಯ -ಕಿರಿಯ ಅನ್ನೋ ಭೇದ ಇಲ್ಲದೆ ಒಟ್ಟಾಗಿ ಕಲೆತು ಬಾಳ್ವೆ ಮಾಡುವ ಪರಿಪಾಠ ಇತ್ತು. ಕಿರಿಯರ ವಿಚಾರಗಳಿಗೆ, ಹಿರಿಯರ ಪ್ರೋತ್ಸಾಹ, ಸಲಹೆ ಇರ್ತಿತ್ತು.

ಬದಲಾದ ಕಾಲ ಘಟ್ಟದಲ್ಲಿ, ಆ ನಲ್ನುಡಿ, ಪ್ರೋತ್ಸಾಹ ಕಿರಿಯರಿಗೆ ಸಿಗುವುದು ವಿರಳವಾಗಿದೆ ಅನ್ನೋದು ನನ್ನ ವಾದ. ಕಿರಿಯರೆನ್ನುವ ತಾತ್ಸಾರ ಇದಕ್ಕೆ ಕಾರಣ ಇರಬಹುದು. ಅಥವಾ ತನಗೆ ಸಿಗುವ ಸ್ಥಾನಮಾನ ಕಡಿಮೆ ಅದರೆ ಅನ್ನೋ ಹಿಂಜರಿಕೆ ಇರಬಹುದು. ಮುಂದೆ ಅದೇ ಕಿರಿಯರು ಹಿರಿಯರಾಗಲಿದ್ದಾರೆ ಅನ್ನೋದು ವಾಸ್ತವ. (ಇದಕ್ಕೆ ವ್ಯತಿರಿಕ್ತ ಜನರು ಕೂಡ ಇದ್ದಾರೆ. )

ಹಾಗಾದರೆ ಕಾಲ ಬದಲಾಗೋದು ಬೇಡ್ವಾ….? ಆಧುನಿಕರಣಗೊಳ್ಳೋದು ಬೇಡ್ವಾ…? ಖಂಡಿತ ಬೇಕು… ಆದರೆ ನಮ್ಮ ಆಚಾರ, ಆಚರಣೆಗಳನ್ನು ಮರೆತು ಖಂಡಿತಾ ಬದಲಾವಣೆ ಬೇಡಾ ಅನ್ನೋದು ನನ್ನ ವಾದ. ಜ್ಞಾನಿಗಳಾಗೋ ಭರದಲ್ಲಿ, ಮಾನವರಾಗೋದನ್ನು ಮರೆಯದಿರೋಣ. ಮಾನವೀಯತೆಗೊಂದಿಷ್ಟು ಜಾಗ ಇರಲಿ. ಅದರೊಡನೆ ನಮ್ಮತನ ಜೋಪಾನ. ಎಲ್ಲದಕ್ಕೂ ಕಾಲನೇ ಉತ್ತರಿಸಲಿ. ಕಾಲಾಯ ತಸ್ಮೈಯೇ ನಮಃ

 ಹರ್ಷಿತಾ

ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next