Advertisement

ಬಿಜೆಪಿ ಜನಸುರಕ್ಷಾ ಯಾತ್ರೆ ಸಮಾರೋಪ

10:36 AM Mar 07, 2018 | Team Udayavani |

ಮಹಾನಗರ: ಕೊಡಗಿನ ಕುಶಾಲನಗರ ಹಾಗೂ ಉತ್ತರ ಕನ್ನಡದ ಅಂಕೋಲದಿಂದ ಮಾ. 3ರಿಂದ ಆರಂಭಗೊಂಡಿದ್ದ ಮಂಗಳೂರು ಚಲೋ- ಬಿಜೆಪಿ ಜನಸುರಕ್ಷಾ ಯಾತ್ರೆಯು ಮಂಗಳವಾರ ಮಂಗಳೂರು ನಗರವನ್ನು ಪ್ರವೇಶಿಸಿ ಬಳಿಕ ಜ್ಯೋತಿ ಬಳಿಯ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಕೇಂದ್ರ ಮೈದಾನದವರೆಗೆ ಬೃಹತ್‌ ಪಾದಯಾತ್ರೆ ಕೈಗೊಳ್ಳುವ ಮೂಲಕ ನಾಲ್ಕು ದಿನಗಳ ಯಾತ್ರೆಯು ಸಮಾವೇಶದೊಂದಿಗೆ ಅಂತ್ಯಗೊಂಡಿತು.

Advertisement

ಅಂಕೋಲದಿಂದ ಹೊರಟು ಉಡುಪಿ ಮಾರ್ಗವಾಗಿ ಸಾಗಿ ಬಂದ ಜನಸುರಕ್ಷಾ ಯಾತ್ರೆಯು ಕದ್ರಿಯಲ್ಲಿ ಒಟ್ಟು ಸೇರಿತ್ತು. ಕುಶಾಲನಗರದಿಂದ ಪುತ್ತೂರು ಮಾರ್ಗವಾಗಿ ಬಂದ ಯಾತ್ರೆಯು ಪಂಪ್‌ವೆಲ್‌ನಲ್ಲಿ ಒಟ್ಟು ಸೇರಿತ್ತು.

ಬಳಿಕ, ಸಂಜೆ 4ರ ವೇಳೆಗೆ ಈ ಯಾತ್ರೆಯ ನೇತೃತ್ವ ವಹಿಸಿದ್ದ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಪ್ರತಾಪ್‌ಸಿಂಹ, ಶೋಭಾ ಕರಂದ್ಲಾಜೆಯ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ಬಾವುಟ ತೋರಿಸುವ ಮೂಲಕ ಮೆರವಣಿಗೆಗೆ ಜ್ಯೋತಿಯಲ್ಲಿ ಚಾಲನೆ ನೀಡಿದರು. ಸಾವಿರಾರು ಕಾರ್ಯಕರ್ತರ ಘೋಷಣೆಯ ಮಧ್ಯೆ ಮೆರವಣಿಗೆಯು ಕೇಂದ್ರ ಮೈದಾನದತ್ತ ಸಾಗಿತು. 

ಬಿಜೆಪಿ ಪ್ರಮುಖರಾದ ಸಿ.ಟಿ.ರವಿ, ಸುನೀಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಸಂಜೀವ ಮಠಂದೂರು, ಡಾ| ವೈ.ಭರತ್‌, ಡಿ.ವೇದವ್ಯಾಸ ಕಾಮತ್‌, ಹರೀಶ್‌ ಪೂಂಜಾ, ಶಾಸಕ ಎಸ್‌.ಅಂಗಾರ, ಸತ್ಯಜಿತ್‌ ಸುರತ್ಕಲ್‌, ಅರುಣ್‌ ಕುಮಾರ್‌ ಪುತ್ತಿಲ ಮೊದಲಾದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಹಂತಕರಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತರ ಭಾವಚಿತ್ರಗಳನ್ನು ಕಾರ್ಯಕರ್ತರು ಹಿಡಿದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಜತೆಗೆ ರಾಜ್ಯ ಸರಕಾರದ ವಿರುದ್ಧ ಜೋಡಿಸಲಾದ ಹಾಡುಗಳು ಕೇಳಿಬರುತ್ತಿದ್ದವು. ಯಾತ್ರೆಯಲ್ಲಿ ಸಾಗಿದ ವಾಹನಗಳನ್ನು ಪೂರ್ತಿ ಬಿಜೆಪಿಮಯಗೊಳಿಸಲಾಗಿತ್ತು.

Advertisement

ಪೊಲೀಸ್‌ ಬಂದೋಬಸ್ತ್
ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಅವರ ನೇತೃತ್ವದಲ್ಲಿ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಸಿಬಂದಿ, ಕೆಎಸ್‌ಆರ್‌ಪಿ ಸಿಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಜತೆಗೆ ಕೇಂದ್ರ ಮೈದಾನದ ಪಕ್ಕದಲ್ಲೇ ಪುರಭವನದಲ್ಲಿ ಜೆಡಿಎಸ್‌ ಸಮಾವೇಶ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಸಂಚಾರ ವ್ಯತ್ಯಯ
ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 3ರ ಬಳಿಕ ವಾಹನ ಸಂಚಾರವನ್ನು ಬದಯಿಸಲಾಯಿತು. ಈ ಸಂದರ್ಭದಲ್ಲಿ ಕೊಂಚ ಸಂಚಾರ ವ್ಯತ್ಯಯ ಕಂಡುಬಂತು. ಸಂಚಾರ ಪೊಲೀಸರು ಹೆಚ್ಚಿನ ಟ್ರಾಫಿಕ್‌ ಜಾಮ್‌ ಕಂಡುಬರದಂತೆ ನೋಡಿಕೊಂಡರು. ಮೆರವಣಿಗೆ ಪೂರ್ತಿಯಾಗಿ ಮೈದಾನ ಪ್ರವೇಶಿಸಿದ ಬಳಿಕ ಸಂಚಾರ ಸಹಜ ಸ್ಥಿತಿಗೆ ಮರಳಿತು.

ಬಾಯಾರಿಕೆ ವ್ಯವಸ್ಥೆ
ಮೆರವಣಿಗೆಯಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಬಾಯಾರಿಕೆ ನೀಗಿಸಲು ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಪ್ಲಾಸ್ಟಿಕ್‌ನಲ್ಲಿ ನೀರು, ಮಜ್ಜಿಗೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಕಸದ ಸಮಸ್ಯೆ ಉದ್ಭವಿಸದಂತೆ ಕಾರ್ಯಕರ್ತರು ಕಸ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು.

ಈ ನಡುವೆ ನಗರದಲ್ಲಿ ಒಂದೇ ದಿನ ಬಿಜೆಪಿ ಸಮಾವೇಶದ ಜತೆಗೆ ಜೆಡಿಎಸ್‌ ಪಕ್ಷದ ಸಂವಾದ ಹಾಗೂ ಸಮಾವೇಶ ಕೂಡ ಆಯೋಜಿಸಲಾಗಿತ್ತು. ಈ ಕಾರಣಕ್ಕೆ ನಗರದ ಹಲವು ಕಡೆಗಳಲ್ಲಿ ಜೆಡಿಎಸ್‌ ಬಾವುಟ-ಬಂಟಿಂಗ್‌ ಅಳವಡಿಸಲಾಗಿತ್ತು. ಆದರೆ, ಬಿಜೆಪಿಯು ರಸ್ತೆ ವಿಭಜಕದ ಮೇಲೆ ಬ್ಯಾನರ್‌ ಹಾಕಿದ್ದ ಕಡೆಗಳಲ್ಲಿ ಜೆಡಿಎಸ್‌ನ ಬ್ಯಾನರ್‌ ಕೂಡ ರಾರಾಜಿಸುತ್ತಿದ್ದವು. ಈ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗುತ್ತಿರಬೇಕಾದರೆ, ಕೆಲವು ಕಡೆ ಜೆಡಿಎಸ್‌ನ ಬಾವುಟ ತೆಗೆದು ಹಾಕುತ್ತಿದ್ದ ದೃಶ್ಯವೂ ಕಂಡುಬಂತು. 

ಗಮನ ಸೆಳೆದ ಮೋದಿ.!
ಮೆರವಣಿಗೆಯಲ್ಲಿ ಸಾಗಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ವೇಷಧಾರಿಯೊಬ್ಬರು ಕಾರ್ಯಕರ್ತರ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಮೋದಿ, ಮೋದಿ… ಎಂದು ಘೋಷಣೆ ಕೂಗಿ ಅವರ ಜತೆಯಾಗಿ ಸಾಗಿದರು. ಮತ್ತೂಂದೆಡೆ ಮೈದಾನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನೇ ಹೋಲುವ ವೇಷಧಾರಿಯೂ ಇದ್ದರು.!

Advertisement

Udayavani is now on Telegram. Click here to join our channel and stay updated with the latest news.

Next