ಬೆಳಗಾವಿ: ಸಚಿವರ ಕ್ರಿಯಾಲೋಪಕ್ಕೆ ಸಂಬಂಧಿಸಿ ಚರ್ಚೆಗೆ ಅವಕಾಶ ಕೊಡದೆ ಸಚಿವರ ಉತ್ತರಕ್ಕೆ ಅವಕಾಶ ನೀಡಿದ ಸ್ಪೀಕರ್ ವಿರುದ್ಧ ವಿಪಕ್ಷ ಬಿಜೆಪಿ ಅಸಮಾಧಾನ ಹೊರಹಾಕಿತಲ್ಲದೆ, ಸ್ಪೀಕರ್ ಕೊಠಡಿಗೆ ಧಾವಿಸಿ ಮೇಜು ಕುಟ್ಟಿ ಪ್ರಶ್ನಿಸಿದ ಪ್ರಸಂಗ ನಡೆದಿದೆ.
ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಪ್ರಹಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದ್ದು ವಿಪಕ್ಷ ಸದಸ್ಯರನ್ನು ಕೆರಳಿಸಿತ್ತು. ಒಂದೇ ವಿಷಯದ ಬಗ್ಗೆ ಇಬ್ಬರು ಸಚಿವರು ಹೇಗೆ ಉತ್ತರ ಕೊಡುತ್ತಿದ್ದಾರೆ? ಯಾವ ನಿಯಮದಡಿ ಸದನ ನಡೆಸುತ್ತಿದ್ದೀರಿ ಎಂದು ಶಾಸಕ ಸುನಿಲ್ ಕುಮಾರ್ ಕ್ರಿಯಾಲೋಪ ಎತ್ತಿದರು.
ಇದರತ್ತ ಗಮನ ಕೊಡದ ಸ್ಪೀಕರ್, ಉತ್ತರ ಕೊಡುತ್ತಿದ್ದ ಸಚಿವರತ್ತ ತಿರುಗಿ, ಕಿವಿಗೆ ಹೆಡ್ ಫೋನ್ ಹಾಕಿ ಕುಳಿತರು. ಇದು ಬಿಜೆಪಿಗರನ್ನು ಮತ್ತಷ್ಟು ಕೆರಳಿಸಿತ್ತು. ಸಚಿವರ ಉತ್ತರ ಮುಗಿಯುತ್ತಿದ್ದಂತೆ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಆಕ್ರೋಶಭರಿತರಾದ ಬಿಜೆಪಿ ಶಾಸಕರು ವಿಧಾನಸಭೆಯಿಂದ ನೇರವಾಗಿ ಸ್ಪೀಕರ್ ಕೊಠಡಿಗೆ ನುಗ್ಗಿದರು. ವಿಧಾನಸಭೆಯನ್ನು ನಿಮ್ಮ ಮನೆ ಎಂದುಕೊಂಡಿದ್ದೀರಾ? ಅದಕ್ಕೇನು ನೀತಿ-ನಿಯಮ ಎಂದು ತಿಳಿದುಕೊಂಡಿದ್ದೀರಾ? ಮನಸ್ಸಿಗೆ ಬಂದಂತೆ ನಡೆಸಲು ಇದು ನಿಮ್ಮ ಮನೆ ಅಲ್ಲ ಎಂದು ಮೇಜು ಕುಟ್ಟಿ ಏರುಧ್ವನಿಯಲ್ಲಿ ಪ್ರಶ್ನಿಸುತ್ತಿದ್ದರು. ಅಷ್ಟರಲ್ಲಿ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಸ್ಪೀಕರ್ ಕೊಠಡಿಗೆ ಆಗಮಿಸಿದರು. ನೀವು ಇದೇ ರೀತಿ ಸದನ ನಡೆಸಿದರೆ ನಾವು ಸಹಕರಿಸಲಾಗುವುದಿಲ್ಲ. ಹೇಗೆ ಸದನ ನಡೆಸುತ್ತೀರೋ ನೋಡುತ್ತೇವೆ ಎಂದು ಬಿಜೆಪಿಯ ಶಾಸಕರು ಮಾತು ಮುಂದುವರಿಸಿದ್ದರು. ಏ ನಾವಿದ್ದೇವೆ ಸ್ಪೀಕರ್ ರಕ್ಷಣೆಗೆ ಎಂದ ನರೇಂದ್ರಸ್ವಾಮಿಗೂ ಬಿಜೆಪಿ ಶಾಸಕರಿಗೂ ಸ್ಪೀಕರ್ ಕೊಠಡಿಯಲ್ಲಿ ಜಟಾಪಟಿ ನಡೆಯಿತು. ತಳ್ಳಾಟ-ನೂಕಾಟವೂ ಸಂಭವಿಸಿತು. ಕೊನೆಗೆ ಮಾರ್ಷಲ್‌ಗಳು ಮಧ್ಯಪ್ರವೇಶಿಸಿಪರಿಸ್ಥಿತಿಯನ್ನು ಹತೋಟಿಗೆ ತಂದರು.
ಅಷ್ಟರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಿ ತಿಳಿಗೊಳಿಸಿದರು. ಭೋಜನದ ಅನಂತರ ನಡೆದ ಸಂಧಾನ ಸಭೆಯಲ್ಲಿ ವಿಪಕ್ಷದವರಿಗೂ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಪ್ರಹಾರದ ವಿಷಯವಾಗಿ ಚರ್ಚಿಸಲು ಅವಕಾಶ ನೀಡುವ ಒಪ್ಪಂದಕ್ಕೆ ಬರಲಾಯಿತು.