Advertisement

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

08:01 PM Dec 21, 2024 | Team Udayavani |

ಪುತ್ತೂರು: ನಗರದ ಎರಡು ಕಡೆ ನಡೆದ ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಕಳ್ಳಿಯರನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನೀರುಮಾರ್ಗ ನಿವಾಸಿ ವಿದ್ಯಾ, ಬೆಂಗಳೂರು ರಾಜಾಜಿನಗರದ ಜ್ಯೋತಿ ಮತ್ತು ಯಶೋಧಾ ಬಂಧಿತರು.

Advertisement

ಗ್ರಾಹಕರ ಸೋಗಿನಲ್ಲಿ ಬಂದು ಕಳವು
ಪುತ್ತೂರು ಕೋರ್ಟ್‌ ರಸ್ತೆಯಲ್ಲಿನ ಜುವೆಲರ್ನಿಂದ ಡಿ.13ರಂದು ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆ 77 ಸಾವಿರ ರೂ. ಮೌಲ್ಯದ 9 ಗ್ರಾಂ ತೂಕದ 3 ಚಿನ್ನದ ಉಂಗುರಗಳನ್ನು ಕಳವು ಮಾಡಿದ ಘಟನೆ ನಡೆದಿತ್ತು. ಈ ಕುರಿತು ಸಂಸ್ಥೆಯ ಮಾಲಕ ಶಿವಪ್ರಸಾದ್‌ ಭಟ್‌ ಸಿಸಿ ಕೆಮರಾ ದೃಶ್ಯಾವಳಿ ಆಧರಿಸಿ ಡಿ. 19ರಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮಂಗಳೂರು ನೀರುಮಾರ್ಗ ನಿವಾಸಿ ವಿದ್ಯಾ ಎಂಬಾಕೆಯನ್ನು ಬಂಧಿಸಿ ಕಳವು ಮಾಡಿದ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾಗ್‌ನಿಂದ ಚಿನ್ನಾಭರಣ ಕಳವು
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ, ಡಿ. 19ರಂದು ಪುತ್ತೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಗೋಳ್ತಮಜಲು ಗ್ರಾಮದ ಸರಸ್ವತಿ ಅವರ ಗಮನವನ್ನು ಇಬ್ಬರು ಅಪರಿಚಿತ ಮಹಿಳೆಯರು ಬೇರೆಡೆ ಹರಿಸುವಂತೆ ಮಾಡಿ ಅವರ ಬ್ಯಾಗ್‌ನಿಂದ 25 ಸಾವಿರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದರು. ಈ ಕುರಿತು ಸರಸ್ವತಿ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆಂಗಳೂರು ರಾಜಾಜಿನಗರದ ಜ್ಯೋತಿ ಮತ್ತು ಯಶೋಧಾಳನ್ನು ಬಂಧಿಸಿ ಕಳವು ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿದ್ದಳು
ಜುವೆಲರ್ನಿಂದ ಚಿನ್ನದ ಉಂಗುರಗಳನ್ನು ಕಳವು ಮಾಡಿದ್ದ ಆರೋಪಿ ವಿದ್ಯಾ ಪಕ್ಕದ ಅಂಗಡಿಗೆ ತೆರಳಿ ಅಲ್ಲಿಯೂ ಕಳ್ಳತನಕ್ಕೆ ಯತ್ನಿಸಿದ್ದು ಈ ವೇಳೆ ಅಂಗಡಿಯ ಮಾಲಕರಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಳು. ಈ ವೇಳೆ ಅಂಗಡಿ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ವಿಚಾರಣೆ ನಡೆಸಿದಾಗ ಸ್ಥಳೀಯ ಅಂಗಡಿಯೊಂದರಿಂದ ಚಿನ್ನದ ಉಂಗುರಗಳನ್ನು ಕಳವು ಮಾಡಿರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ.

ಅಸಲಿ ಕಿಸೆಗೆ: ನಕಲಿ ಜುವೆಲರ್ಗೆ
ಈ ಮಹಿಳೆ ಅಸಲಿ ಚಿನ್ನವನ್ನು ತನ್ನ ಕಿಸೆಗೆ ಹಾಕಿ ತನ್ನ ಕೈಯಲ್ಲಿದ್ದ ನಕಲಿ ಚಿನ್ನವನ್ನು ಜುವೆಲರ್ನ ಉಂಗುರದ ಟ್ರೇಯಲ್ಲಿ ಇಟ್ಟು ಜಾಗ ಖಾಲಿ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಆರೋಪಿ ವಿದ್ಯಾ ಅಂಗಡಿಯಲ್ಲಿ ಉಂಗುರಗಳನ್ನು ವೀಕ್ಷಣೆ ಮಾಡಿ ಒಂದೊಂದು ಉಂಗುರವನ್ನು ಬೆರಳಿಗೆ ಹಾಕುತ್ತಿದ್ದಳು. ಆ ವೇಳೆ ತನ್ನ ಬೆರಳಲ್ಲಿದ್ದ ನಕಲಿ ಉಂಗುರವನ್ನು ಅಂಗಡಿ ಮಾಲಕನ ಕಣ್ಣು ತಪ್ಪಿಸಿ ಅಲ್ಲಿರಿಸಿ ಅಸಲಿಯನ್ನು ತನ್ನ ಕೈಯಲ್ಲಿ ಉಳಿಸುತ್ತಿದ್ದಳು. ಇದು ಅಂಗಡಿ ಮಾಲಕರ ಗಮನಕ್ಕೂ ಬಂದಿಲ್ಲ. ಕೆಲವು ದಿನ ಕಳೆದು ಚಿನ್ನವನ್ನು ಪರಿಶೀಲಿಸುತ್ತಿದ್ದಾಗ ಟ್ರೇಯಲ್ಲಿ ನಕಲಿ ಉಂಗುರ ಇರುವುದು ಬೆಳಕಿಗೆ ಬಂದಿದೆ. ಈ ವೇಳೆ ಸಿಸಿ ಕೆಮರಾ ಪರಿಶೀಲಿಸಿದಾಗ ಅಸಲಿ ನಕಲಿ ಮಾಡುತ್ತಿದ್ದ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next