Advertisement
ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುನ್ನ ಕುಲಾವಿ ಎಂಬಂತೆ ಎರಡು ವರ್ಷಗಳ ಹಿಂದೆಯೇ ರಾಜರಾಜೇಶ್ವರಿ ನಗರ-ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಆರಂಭವಾದ ಮುಂದಿನ ಸಿಎಂ ಕೂಗು ಇನ್ನೂ ನಿಂತಿಲ್ಲ, ನಿಲ್ಲುವ ಲಕ್ಷಣವೂ ಇಲ್ಲ. ಅಧಿಕಾರಕ್ಕೆ ಬರುವ ಬಗ್ಗೆ ಅತಿಯಾದ ಆತ್ಮ ವಿಶ್ವಾಸ ಹೊಂದಿರುವ ಕಾಂಗ್ರೆಸ್‌ನಲ್ಲಿ ನಾಯಕರು ಪಕ್ಷದ ಗೆಲುವಿಗೆ ಶ್ರಮಿಸುವುದಕ್ಕಿಂತ ಮುಖ್ಯ ಮಂತ್ರಿ ಹುದ್ದೆಗಾಗಿ ಹೋರಾಟ ಮಾಡುತ್ತಿರುವುದು ಗುಟ್ಟೇನಲ್ಲ.
Related Articles
Advertisement
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲದೆ ಬಿ.ಕೆ.ಹರಿಪ್ರಸಾದ್, ಡಾ| ಜಿ.ಪರಮೇಶ್ವರ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಅವರೂ ಸಿಎಂ ರೇಸ್‌ನಲ್ಲಿ ರುವವರೇ. ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಪ್ರಬಲ ಆಕಾಂಕ್ಷಿ ಗಳು. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂದಾದರೆ ಎಂ.ಬಿ.ಪಾಟೀಲ್ ಅನಂತರದಲ್ಲಿ ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಸರದಿ ಬರಬಹುದು.
ಇವರೆಲ್ಲರ ಹಿಂದೆಯೂ ಒಂದೊಂದು ಪ್ರಬಲ ಸಮು ದಾಯವೂ ಇದೆ. ಈ ಎಲ್ಲ ಸಮುದಾಯ ಕಾಂಗ್ರೆಸ್ ಕೈ ಹಿಡಿದರೆ ಮಾತ್ರ ಅಧಿಕಾರ ಸಿಗಲು ಸಾಧ್ಯ. ಹೀಗಾಗಿ ಈಗಲೇ ಒಬ್ಬರನ್ನು ಸಿಎಂ ಎಂದು ಘೋಷಿಸಿದರೆ ಕೆಲವು ವರ್ಗದ ಮತ ಕೈ ತಪ್ಪ ಬಹುದು ಎಂಬ ಆತಂಕ ಕಾಂಗ್ರೆಸ್ ಹೈಕಮಾಂಡ್‌ಗೂ ಇದೆ. ಇದೇ ಕಾರಣಕ್ಕೆ ಮುಂದಿನ ಸಿ ಎಂ ಸಿದ್ದರಾಮಯ್ಯ ಎಂದು ಘೋಷಿಸ ಬೇಕು ಎಂದು ಅವರ ಆಪ್ತರು ಒಂದು ಹಂತದಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದರಾದರೂ ರಾಹುಲ್ ಗಾಂಧಿಗೆ ಆ ಬಗ್ಗೆ ಮನಸ್ಸು ಇದ್ದರೂ ಸೋನಿಯಾಗಾಂಧಿ ಸಹಿತ ಹಿರಿಯ ನಾಯಕರ ವಿರೋಧ ವ್ಯಕ್ತವಾಗಿದ್ದರಿಂದ ಬೇಡಿಕೆ ಅಲ್ಲಿಗೆ ನಿಲ್ಲುವಂತಾಗಿದೆ.
ಜೆಡಿಎಸ್ ಅಸ್ತ್ರ: ಕಾಂಗ್ರೆಸ್ ನಂತೆ ಜೆಡಿಎಸ್ ನಲ್ಲೂ ಮುಂದಿನ ಸಿಎಂ ಜಪ ಮುಂದುವರಿದಿದೆ. ಎಚ್.ಡಿ. ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯಲ್ಲಿ ಮುಸ್ಲಿಂ, ದಲಿತ, ಮಹಿಳೆ ಅಸ್ತ್ರ ಬಿಡುತ್ತಿದ್ದಾರೆ. ಇದು ರಾಜಕೀಯ ವಲಯಗಳಲ್ಲಿ ಅಚ್ಚರಿಗೂ ಕಾರಣವಾಗಿದೆ. ಯಾಕೆಂದರೆ ಹಿಂದಿರುವ ಲೆಕ್ಕಾಚಾರವೇ ಬೇರೆ. ಎಚ್. ಡಿ.ದೇವೇಗೌಡರ ಕುಟುಂಬ ಪಟ್ಟು ಅರಿತವರಿಗಷ್ಟೇ ಈ ಬಾಣ ಎಲ್ಲಿ ನಾಟಬಹುದು ಎಂಬ ಅಂದಾಜು ಸಿಗಲು ಸಾಧ್ಯ. ಎಲ್ಲರಿಗಿಂತ ಹೆಚ್ಚಾಗಿ ಪೂರ್ವಾಶ್ರಮದ ದೇವೇಗೌಡರ ಆಪ್ತ ಸಿದ್ದರಾಮಯ್ಯ ಅವರಿಗೆ ಏನಾಗಬಹುದು ಎಂಬುದು ಗೊತ್ತಿದೆ.
ಹಿಂದಿನ ಬಾರಿಯ ಉಪ ಮುಖ್ಯಮಂತ್ರಿಗಿಂತ ಈ ಬಾರಿ ದೊಡ್ಡದಾದ ಸಿಎಂ ಹುದ್ದೆ ಕೊಡುವುದಾಗಿ ಕುಮಾರಸ್ವಾಮಿ ಘೋಷಿಸುತ್ತಿದ್ದಾರೆ. ಸಿ.ಎಂ.ಇಬ್ರಾಹಿಂ ಮುಖ್ಯಮಂತ್ರಿ ಯಾಕಾಗಬಾರದು, ನಮಗೆ ಬಹುಮತ ಬಂದರೆ ದಲಿತ ಸಿಎಂ ಮಾಡಲು ಸಿದ್ಧ, ಮಹಿಳೆಯೊಬ್ಬರು ಉಪ ಮುಖ್ಯಮಂತ್ರಿ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಇದರ ಹಿಂದೆ ಜೆಡಿಎಸ್‌ನಲ್ಲಿರುವವರು ಬೇರೆ ಪಕ್ಷಕ್ಕೆ ಹೋಗಬಾರದು, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇರುವ ಪ್ರಭಾವಿಗಳು ನಮ್ಮತ್ತ ಬಂದರೂ ಬರಲಿ ಎಂಬ ತಂತ್ರಗಾರಿಕೆ ಅಡಗಿರಲೂಬಹುದು.
ಆದರೆ ಜೆಡಿಎಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ನಿಭಾಯಿಸುವ ಸಾಮರ್ಥ್ಯ ಉಳ್ಳವರು ಎಚ್.ಡಿ.ಕುಮಾರಸ್ವಾಮಿ ಮಾತ್ರ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಜೆಡಿಎಸ್ ಅಧಿಕಾರಕ್ಕೆ ಬಂದರೆ ನಮ್ಮಲ್ಲಿ ಎಚ್.ಡಿ.ಕುಮಾರಸ್ವಾಮಿಯವರೇ ಮುಂದಿನ ಸಿಎಂ, ದಲಿತ, ಮುಸ್ಲಿಂ ಆಮೇಲೆ ಎಂದೂ ಹೇಳಿಯೂ ಬಿಟ್ಟಿದ್ದಾರೆ. ಹೀಗಾಗಿ ಜೆಡಿಎಸ್‌ನಲ್ಲಿ ಮುಖ್ಯಮಂತ್ರಿ ವಿಚಾರದಲ್ಲಿ ಗೊಂದಲ, ಸಂಘರ್ಷಕ್ಕೆ ಆಸ್ಪದ ಇರಲಾದರು.
ಬಿಜೆಪಿಯಲ್ಲೂ ಆಕಾಂಕ್ಷಿಗಳು: ಇನ್ನು, ಬಿಜೆಪಿಯಲ್ಲಿ ಮುಂದಿನ ಸಿಎಂ ಆಗಲು ಪೈಪೋಟಿಯೇ ಇಲ್ಲ ಅಂತಲ್ಲ. ಬಹಿ ರಂಗವಾಗಿ ಹೇಳಿಕೊಳ್ಳುವ ಧೈರ್ಯವಿಲ್ಲ. ಅಷ್ಟರ ಮಟ್ಟಿಗೆ ಮೋದಿ- ಅಮಿತ್ ಶಾ, ಬಿಜೆಪಿ ವರಿಷ್ಠರು ರಾಜ್ಯ ನಾಯಕರ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಎನ್ನಬಹುದು. ಆದರೂ ಬಿಜೆಪಿ ಸಹ ಮುಂದಿನ ಮುಖ್ಯಮಂತ್ರಿ ಘೋಷಣೆ ಮಾಡಿಲ್ಲ.
ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಬಹುಮತ ಬಂದರೆ ಸಹಜವಾಗಿ ಅವರೇ ಆಯ್ಕೆಯಾಗಬಹುದು ಎಂಬುದು ಮೇಲ್ನೋಟಕ್ಕೆ ಅನಿಸಿದರೂ ಜಗದೀಶ್ ಶೆಟ್ಟರ್, ಆರ್.ಅಶೋಕ್, ಮುರುಗೇಶ್ ನಿರಾಣಿ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು, ಸುನಿಲ್‌ಕುಮಾರ್, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ್, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಇವರೆಲ್ಲರೂ ಆಂತರಿಕವಾಗಿ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಹೊಂದಿರುವವರೇ.
ಬಿಜೆಪಿಯಲ್ಲಿ ಅಧಿಕಾರದ ವಿಚಾರದಲ್ಲಿ ವಿ.ಸೋಮಣ್ಣ ಸೇರಿ ಹಲವರಿಗೆ ನಿರಾಶೆಯೂ ಆಗಿರುವುದು ಸುಳ್ಳಲ್ಲ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಂತೆ ಮಾತನಾಡುವುದು ಕಡಿಮೆ. ಅಧಿಕಾರಕ್ಕೆ ಬಂದ ಅನಂತರ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಬಹುದು.
ಸದ್ಯದ ಮಟ್ಟಿಗೆ ಹೇಳುವುದಾದರೆ ಬಿಜೆಪಿಗೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವುದು ಒಂದಂಶದ ಗುರಿ. ಆದರೆ, ಬಿ.ಎಸ್.ಯಡಿಯೂರಪ್ಪ ಅವರ ಅನಂತರ ಸಿದ್ದರಾಮಯ್ಯ ಎದುರಿಸಲು ರಾಜ್ಯದಲ್ಲಿ ಬಿಜೆಪಿಗೆ ರಾಜ್ಯ ಮಟ್ಟದಲ್ಲಿ ಪ್ರಬಲ ನಾಯಕರಿಲ್ಲ. ಅದೇ ರೀತಿ ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿ ಎದುರಿಸುವ ನಾಯಕರಿಲ್ಲ. ಬಿಜೆಪಿಯನ್ನು ರಾಷ್ಟ್ರ ನಾಯಕರು ಅಧಿಕಾರಕ್ಕೆ ತರಬೇಕು, ಕಾಂಗ್ರೆಸ್ ಅನ್ನು ರಾಜ್ಯ ನಾಯಕರು ಅಧಿಕಾರಕ್ಕೆ ತರಬೇಕಿದೆ.
ದಾವಣಗೆರೆಯ ಸಿದ್ದರಾಮಯ್ಯ ಹುಟ್ಟುಹಬ್ಬ ಸಮಾವೇಶ ರಾಜಕೀಯವಾಗಿ ಲಾಭ ತಂದುಕೊಡುವಷ್ಟು ರಾಹುಲ್‌ಗಾಂಧಿಯವರ ಭಾರತ್ ಜೋಡೋ ಯಾತ್ರೆ ತಂದುಕೊಡಲಾರದು. ಅದೇ ರೀತಿ ನರೇಂದ್ರ ಮೋದಿ ಅವರ ನಾಮಬಲ ತಂದುಕೊಡುವ ಮತ ರಾಜ್ಯ ನಾಯಕರ ಯಾತ್ರೆಗಳಿಂದ ಗಿಟ್ಟುವುದಿಲ್ಲ ಎಂಬುದು ನಿಜ.
ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಇರುವಾಗ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿರುವ ಬಿಜೆಪಿ ಕರ್ನಾಟಕ ವಿಚಾರದಲ್ಲೂ ನೀಲನಕ್ಷೆ ಸಿದ್ಧಪಡಿಸಿಕೊಂಡಿದೆ. ವರಿಷ್ಠರು ಏನೋ ಮಾಡಲಿದ್ದಾರೆ ಎಂಬ ಭರವಸೆಯಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ. ಗುಜರಾತ್ ವಿಧಾನಸಭೆ ಫಲಿತಾಂಶದ ಅನಂತರ ಶುರುವಾಗಲಿದೆ ನೋಡಿ ಅಸಲಿ ಆಟ ಎಂದು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿರುವ ಸಚಿವರೇ ಹೇಳುತ್ತಿದ್ದಾರೆ. ಅದು ಯಾವ ರೀತಿಯ ಆಟ ಎಂಬುದು ಕಾದು ನೋಡಬೇಕಷ್ಟೇ.
ಸಮ್ಮಿಶ್ರ ಕನವರಿಕೆಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೂಮ್ಮೆ ಸಮ್ಮಿಶ್ರ ಸರಕಾರ ರಚನೆಯಾಗಬಹುದಾ ಎಂಬ ಕನವರಿಕೆ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಪಾಳಯದ ಕೆಲವು ನಾಯಕರಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮೇಲ್ನೋಟಕ್ಕೆ ಮುಂದೆ ನಮ್ಮದೇ ಸರಕಾರಎಂದು ಹೇಳಿಕೊಂಡರೂ ಜೆಡಿಎಸ್‌ನ ಪಂಚರತ್ನ ಯಾತ್ರೆಯ ಸ್ಪಂದನೆ ಎರಡೂ ಪಕ್ಷಗಳಿಗೆ ತಲೆಬಿಸಿ ಮಾಡಿದೆ. ಜೆಡಿಎಸ್ ಬಿಟ್ಟು ಯಾರೂ ಸರಕಾರಮಾಡಲಾಗದಂತಹ ಸನ್ನಿ ವೇಶ ಮತ್ತೂಮ್ಮೆ ಎದುರಾಗಬಹುದಾ ಎಂಬ ವ್ಯಾಖ್ಯಾ ನಗಳೂ ಇವೆ. ಎಚ್.ಡಿ.ಕುಮಾರಸ್ವಾಮಿಯವರಿಗೆ ಸ್ವಂತ ಸರಕಾರ ರಚಿಸುವ ಹಠ, ಅದಕ್ಕಾಗಿ ಪರಿಶ್ರಮ ಹಾಕುತ್ತಿದ್ದಾರೆ.ಯಾತ್ರೆ-ಸಮಾವೇಶಕ್ಕೆ ಬಂದ ಜನಸ್ತೋಮ ಮತಗಳಾಗಿ ಪರಿವರ್ತನೆಯಾಗದಿದ್ದರೆ ಸ್ವಂತ ಶಕ್ತಿಯ ಮೇಲೆ ಅಧಿಕಾರ ಪಡೆಯುವುದು ಕಷ್ಟ. ಆದರೆ ಕಾಂಗ್ರೆಸ್ ಅಥವಾ ಬಿಜೆಪಿಯ ಗೆಲುವು ತಡೆಯುವ ಶಕ್ತಿಯಂತೂ ಜೆಡಿಎಸ್‌ಗೆ ಇದ್ದೇ ಇದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ನಾಯಕರಿಗೆ “ಕುಮಾರಣ್ಣ’ನ ಬಗ್ಗೆ ಪ್ರೀತಿ ಜಾಸ್ತಿ. – ಎಸ್.ಲಕ್ಷ್ಮೀನಾರಾಯಣ