Advertisement

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

12:51 PM Dec 21, 2024 | Team Udayavani |

ಉದಯವಾಣಿ ಸಮಾಚಾರ
ಮಂಡ್ಯ: ಜೀವನದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಅದರಲ್ಲೂ ಪರಿಸರ ಸ್ನೇಹಿ ಮನೆ ನಿರ್ಮಿಸಬೇಕು ಎಂಬ ಕನಸಿರುತ್ತೆ. ಅದಕ್ಕೆ ಮಾದರಿಯಾಗಿ ಸಕ್ಕರೆ ನಾಡಿನ ಅಕ್ಷರ ಜಾತ್ರೆಯಲ್ಲೊಂದು ವಿನೂತನ ಮಾದರಿ ಮನೆ ನಿರ್ಮಿಸಲಾಗಿದೆ. ಅದು ಅಂತಿಥ ಮನೆಯಲ್ಲ ರೈತ ಸ್ನೇಹಿಯಾಗಿರೋ “ತೊಟ್ಟಿ” ಮನೆ . ಮನೆಯ ಮಧ್ಯ ಭಾಗದ ಸುತ್ತಲು ಆಕಾಶ , ಮಳೆ ನೀರು ಬೀಳಲು ಜಾಗವಿದೆ. ಅಂಗಳದ ಸುತ್ತಲೂ ಕೋಣೆಗಳು ನೈಸರ್ಗಿಕ, ಗಾಳಿ, ಬೆಳಕು, ಮನೆಯ ಹಿತ್ತಲಿನಲ್ಲೇ ದಿನಪಯೋಗಿ ಸೊಪ್ಪಿನ ಗಿಡಗಳು, ಮತ್ತು ನೀರು ಸೇದುವ ಬಾವಿ ಇರುವಂತಹ ಇದು ಈ ಬಾರಿಯ ಮಂಡ್ಯ ಸಾಹಿತ್ಯ ಸಮ್ಮೇಳನದ ವಿಶೇಷವಾಗಿ ನೋಡುಗರ ಗಮನ ಸೆಳೆಯುತ್ತಿದೆ.

Advertisement

ಪುರಾತನ ಕಾಲದಲ್ಲಿ ಮನೆಗೆ ಮುಕ್ತವಾಗಿ ಹೆಚ್ಚು ಗಾಳಿ ಬೆಳಕು ಸಾರಾಗವಾಗಿ ಬರಲಿ ಎಂಬ ಉದ್ದೇಶದಿಂದ ವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದ ತೊಟ್ಟಿ ಮನೆಗಳು ಈಗ ನರನ್ನುಆಕರ್ಷಿಸುವಂತೆ ಮಾಡಿದ್ದು ಆಧುನಿಕ ಶೈಲಿಯ ಮನೆಗಳನ್ನೇ ಬದಲಿಸಿ ಹಳೇ ಶೈಲಿಗೆ ಮರುಕಳಿಸುವಂತೆ ಮಾಡುತ್ತಿದೆ. ಇನ್ನು ಸಾಹಿತ್ಯ ಸಮ್ಮೇಳನದ ಅಂಗವಾಗಿ ನಿರ್ಮಿಸಿರುವ ಈ ತೊಟ್ಟಿ ಮನೆ ರೈತ ಸ್ನೇಹಿಯಾಗಿ ಹಲವು ವಿಶೇಷತೆಗಳನ್ನು ಹೊಂದಿದೆ.

ಮನೆಯ ಮಧ್ಯ ಭಾಗದಲ್ಲಿ ತೊಟ್ಟಿ ಮನೆ ನಿರ್ಮಸಲಾಗಿದ್ದುಇಂದಿನ ಆಧುನಿಕ ಯುಗದಲ್ಲಿ ಮಾಯವಾಗಿರುವ ಪುರಾತನ ಕಾಲ ಕೃಷಿ ಹಾಗೂ ಗ್ರಾಮೀಣ ಪ್ರದೇಶದ ಜನರು ಬಳಸುತ್ತಿದ್ದ ಉಪಕರಣಗಳಾದ ಹಸೆಮಣೆ, ಕಳಸ, ತೇವಟೆಗೆ ಮಣೆ, ರೈಲ್‌ ಚೊಂಬು, ತಕ್ಕಡಿ, ತಾಮ್ರದ ತಟ್ಟೆ, ಕೊಳದಪ್ಪಲೆ, ಸೌಟು, ತಾಂಬಟ್ಟಲು, ಟಿಫನ್‌ ಕ್ಯಾರಿರ್ಯ, ಇಡ್ಲಿ ಪಾತ್ರೆ, ದೇಕ್ಷಾ, ಕವಗೋಲು, ವಳಕಲ್ಲು, ಕೃಷಿ ಉಪಕರಣಗಳಾದ ನೇಗಿಲು, ಕುಂಟೆ, ಕೂರಿಗೆ, ಕುಂದಿಗೆ, ಬಿದಿರಿನಿಂದ ತಯಾರಿಸಿದ ಕೃಷಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಇರುವ ಕುಕ್ಕೆ, ವಾಡೆ, ಸೇರು, ಕೊಳಗ, ಇನ್ನಿತರ ಹಲವಾರು ಮಾದರಿಗಳು ನೋಡುಗರ ಕಣ್ಮನ ಸೆಳೆದವು.

70 ದಶಕದಲ್ಲಿ ಜನಿಸಿದ್ದ ನಾಗರಿಕರು ಹಳೆಯ ಮನೆ ತೊಟ್ಟಿ ಮನೆಯನ್ನು ನೋಡಿ ತಮ್ಮ ಬಾಲ್ಯದ ಜೀವನವನ್ನು ನೆನೆದು ಪುಳಕಿತರಾದರು. ಸಮ್ಮೇಳನದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪುರಾತನ ವಸ್ತುಗಳನ್ನು ಪರಿಚಯಿಸುವ ಮೂಲಕ ನೈಸರ್ಗಿಕ ಜೀವನ ಶೈಲಿ ಬಗ್ಗೆ ತಿಳಿವಳಿಕೆ ಹೇಳುತ್ತಿರುವುದು ಕಂಡು ಬಂತು. ಸಮ್ಮೇಳನದ ಅಂಗವಾಗಿ ತೊಟ್ಟಿ ಮನೆಯನ್ನು ವಿನೂತನವಾಗಿ ಹಸೆ, ಚಿತ್ತಾರಗಳನ್ನು ಬಿಡಿಸಿ ವಿನ್ಯಾಸಗೊಳಿಸಲಾಗಿತ್ತು.

Advertisement

ಮನೆಯ ಮುಂಭಾಗದಲ್ಲಿ ಮತ್ತು ಒಳಾಂಗಣದಲ್ಲಿ ಒಕ್ಕಣೆ ಮಾಡಲು ಹಿಂಗಾರು ಮತ್ತು ಮುಂಗಾರಿಗೆ ಬಿತ್ತನೆ ಬೀಜಗಳಾದ ರಾಗಿ, ಭತ್ತ, ಅವರೆ, ಸೋರೆಕಾಯಿ, ಮೊದಲಾದ ಧಾನ್ಯಗಳನ್ನು ಪ್ರದರ್ಶಿಸಿದರು. ತೊಟ್ಟಿ ಮನೆ ಮುಂಭಾಗದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಹಳ್ಳಿಕಾರ್‌ತಳಿಯ ಜೋಡೆತ್ತುಗಳನ್ನು ಕಟ್ಟಿ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ರಾಸುಗಳ ಬಗ್ಗೆ
ಪರಿಚಯಿಸಿದರು, ಗ್ರಾಮೀಣ ಪ್ರದೇಶದ ರೈತರಿಗೆ ಸಾಹಿತ್ಯಾ ಸದಭಿರುಚಿಯ ಜೊತೆಗೆ ಕೃಷಿ ಮತ್ತು ಗ್ರಾಮಾಂತರ ಜೀವನದ ಬಗ್ಗೆ ಸಮ್ಮೇಳನದಲ್ಲಿ ತೊಟ್ಟಿ ಮನೆ ಮೂಲಕ ಗಮನ ಸೆಳೆಯಲಾಯಿತು.

ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಾಗಿ ನಿರ್ಮಿಸುವ ತೊಟ್ಟಿ ಮನೆಗಳನ್ನು ಈ ಬಾರಿ ಸಾಹಿತ್ಯ ಸಮ್ಮೇಳನದ ಕೇಂದ್ರ ಬಿಂದುವಾಗಿಸಿ ಪರಿಚಯಿಸಿರುವುದು ಖುಷಿ ತಂದಿದೆ. ನಗರ ಪ್ರದೇಶದಲ್ಲಿ ನೆಲೆಸಿರುವವರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ನೈಸರ್ಗಿಕ ಶೈಲಿಯ ಮನೆಗಳು ನಿರ್ಮಿಸಬೇಕು ಎಂಬುವರಿಗೆ ಇದು ಮಾದರಿಯಾಗಲಿದೆ.
●ಮಹಾದೇವಸ್ವಾಮಿ, ಮಂಡ್ಯ

■ ರಘು ಕೆ.ಜಿ.

Advertisement

Udayavani is now on Telegram. Click here to join our channel and stay updated with the latest news.

Next