Advertisement

Grant: ರಸ್ತೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ 2 ಸಾವಿರ ಕೋ.ರೂ.: ಮುಖ್ಯಮಂತ್ರಿ

03:51 AM Dec 18, 2024 | Team Udayavani |

ಬೆಳಗಾವಿ: ರಸ್ತೆಗಳ ಅಭಿವೃದ್ಧಿಗೆ ಎಲ್ಲ ಕ್ಷೇತ್ರಗಳಿಗೂ ಪಕ್ಷಾತೀತವಾಗಿ 2 ಸಾವಿರ ಕೋಟಿ ರೂ. ವಿತರಣೆ ಮಾಡುತ್ತೇವೆ. ಆದ್ದರಿಂದ ನಮ್ಮ ಶಾಸಕರು ಎದೆ ಎತ್ತಿ ಮಾತನಾಡುವ ಮೂಲಕ ವಿಪಕ್ಷದವರ ಬಾಯಿ ಮುಚ್ಚಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಹಾನಿ ಸರಿಪಡಿಸಲು ಅಪೆಂಡಿಕ್ಸ್‌ನಲ್ಲಿ 4 ಸಾವಿರ ಕೋಟಿ ರೂ., ಗ್ರಾಮೀಣ ರಸ್ತೆ ಹಾಳಾಗಿರುವುದಕ್ಕೆ 2 ಸಾವಿರ ಕೋಟಿ ರೂ. ಸಹಿತ ನಗರ, ಪಟ್ಟಣ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಮುಂದಿನ ವರ್ಷದಿಂದ ರಾಜ್ಯದ ಆರ್ಥಿಕ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ. ಆಗ ಇನ್ನಷ್ಟು ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎಂದರು.

ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ ಪರವಾಗಿದ್ದಾರೆ. ಇದು ಖಚಿತ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು. ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ. ಸದ ನದ ಒಳಗೆ ಮತ್ತು ಹೊರಗೆ ನಮ್ಮ ಅಭಿವೃದ್ಧಿಯ ದಾಖಲೆಗಳು, ಅಂಕಿ-ಅಂಶಗಳನ್ನು ಮನೆ ಮನೆ ತಲುಪಿಸಿ. ಎದೆ ಎತ್ತಿ ಮಾತನಾಡಿ ಎಂದು ಪಕ್ಷದ ಶಾಸಕರಿಗೆ ಕರೆ ನೀಡಿದರು.

ಬಿಜೆಪಿ ನೈತಿಕವಾಗಿ ಕುಸಿದಿದೆ, ನಾವು 3ಕ್ಕೆ ಮೂರೂ ಉಪ ಚುನಾವಣೆಯಲ್ಲಿ ಗೆದ್ದಿರುವುದು, ಬಿಜೆಪಿ ಕೈಯಲ್ಲಿದ್ದ ಎರಡು ಸೀಟುಗಳನ್ನು ಕಾಂಗ್ರೆಸ್‌ ಗೆದ್ದಿರುವುದು, ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಸಿಎಂ ಹೇಳಿದರು. ವಕ್ಫ್ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ. ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಚಿವ ಜಮೀರ್‌ ಸಮರ್ಥವಾಗಿ ಉತ್ತರ ನೀಡುತ್ತಾರೆ. ಪರಿಷತ್‌ನಲ್ಲಿ ಈಗಾಗಲೇ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜನ ಸಂಪರ್ಕ ಸಭೆ ಹೆಚ್ಚಿಸಿ
ನಮ್ಮ ಸಚಿವರು ಮತ್ತು ಶಾಸಕರು ಅವರವರ ಉಸ್ತುವಾರಿಯ ಜಿಲ್ಲೆಗಳಲ್ಲಿ, ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಬಗೆಹರಿಸಿ. ಹಣಕ್ಕೆ ಸಮಸ್ಯೆ ಇಲ್ಲ. ಹಣ ಇದೆ. ಜನರ ಕೆಲಸ ಮಾಡಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next