ಬೆಳಗಾವಿ: ”ನಾವೆಲ್ಲಾ ಶೂದ್ರರು… ಎಂದು ಸಿಎಂ ಸಿದ್ದರಾಮಯ್ಯ ಅವರು ಸೋಮವಾರ(ಡಿ9) ಸದನದ ಮೊದಲ ದಿನದ ಕಲಾಪದಲ್ಲಿ ಮಾಡಿದ ಭಾಷಣ ಗಮನ ಸೆಳೆಯಿತು.
ಜಾತಿ ವ್ಯವಸ್ಥೆಯ ಕುರಿತು ಮಾತನಾಡಿದ ಸಿಎಂ ‘ ಅಶೋಕ್ , ಅಶ್ವತ್ಥ ನಾರಾಯಣ, ಯತ್ನಾಳ್… ನಾವೆಲ್ಲಾ ಶೂದ್ರರು ಎಂದು ಮತ್ತೆ ಮತ್ತೆ ಒತ್ತಿ ಹೇಳಿದರು. ಈ ವೇಳೆ ಎದ್ದು ನಿಂತ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ ‘ನಾವು ಶೂದ್ರ ರಾಗಿರುವುದಕ್ಕೆ ಮೀಸಲಾತಿ(ಪಂಚಮಸಾಲಿ)ಕೇಳುತ್ತಿದ್ದೇವೆ’ ಎಂದು ತನ್ನದೇ ಶೈಲಿಯಲ್ಲಿ ಡೈಲಾಗ್ ಹೊಡೆದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು’ ಪರಮೇಶ್ವರ್ ಅವರು ಒಪ್ಪಿಕೊಳ್ಳುತ್ತಾರಾ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಿಎಂ ಸಿದ್ದರಾಮಯ್ಯ ಮಾತು ಮುಂದುವರಿಸಿ, ನಾವು ಒಪ್ಪಿಕೊಂಡೆ ಚರ್ಚೆ ಮಾಡುತ್ತಿದ್ದೇವೆ.. ಎಂದರು.
”ಜಾತಿ ಆಧಾರದ ಮೇಲೇನೆ ಶ್ರೇಷ್ಠತೆ ಕಳಪೆ ತೀರ್ಮಾನವಾಯಿತು. ಬಸವಾದಿ ಶರಣರು ಈ ನಂಬಿಕೆ ಸರಿಯಿಲ್ಲ ಎಂದಿದ್ದರು. ಪ್ರತಿಯೊಬ್ಬರೂ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ , ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಜಾತಿ ವ್ಯವಸ್ಥೆಯ ಪರಿಣಾಮವಾಗಿ ಅಲ್ಪ ಮಾನವರಾಗಿಬಿಡುತ್ತಾರೆ ಎಂದು ಕುವೆಂಪು ಅವರು ಹೇಳಿದ್ದರು.ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದರು ಎಂದು ಸಿಎಂ ಹೇಳಿದರು. ಈ ವೇಳೆ ವಿಪಕ್ಷ ನಾಯಕ ಆರ್. ಆಶೋಕ್ ಅವರು ”ಅದು ನಿಮಗೇ ಹೇಳಿದ್ದು, ಸರ್… ಅಹಿಂದ ಎಲ್ಲ ಮಾಡಬೇಡಿ ಎಂದು ನಿಮಗೆ ಹೇಳಿದ್ದು” ಎಂದು ಕಾಲೆಳೆದರು.
‘ಬಸವಣ್ಣ ಅವರು ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ. ನಿನ್ನ ಮನೆಯ ಮಗನೆದೆನಿಸಯ್ಯ ಎಂದು ಬಸವಣ್ಣ ಹೇಳಿದ್ದರು.ಪಟ್ಟಭದ್ರ ಹಿತಾಸಕ್ತಿಗಳು ಮಾತ್ರ ಜಾತಿ ವ್ಯವಸ್ಥೆಯ ಪರವಾಗಿ ನಿಂತಿದ್ದಾರೆ’ಎಂದು ಸಿಎಂ ಹೇಳಿದರು.
‘ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ನಾವು ಸರಕಾರಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಾವೇನು ವಿಧಾಸಭೆ, ಪಾರ್ಲಿಮೆಂಟ್ ಎಂದು ಕರೆಯುತ್ತೇವಲ್ಲ, ಬಸವಾದಿ ಶರಣರ ಕಾಲದಲ್ಲಿ ಅದು ಅನುಭವ ಮಂಟಪವಾಗಿತ್ತು. ಅದರ ಅಧ್ಯಕ್ಷರಾಗಿದ್ದವರು ಅತ್ಯಂತ ತಳ ಸಮುದಾಯಕ್ಕೆ ಸೇರಿದ್ದ, ಮಹಾನ್ ಜ್ಞಾನಿ ಅಲ್ಲಮ ಪ್ರಭು ಎಂದು ಸಿಎಂ ಹೇಳಿದರು.