Advertisement

ಚಿಣ್ಣರ ಸುವ್ವಾಲಿ

11:55 AM Jun 21, 2019 | Lakshmi GovindaRaj |

ಪ್ರತಿವರ್ಷ ಕನ್ನಡ ಚಿತ್ರರಂಗದಲ್ಲಿ ಚಿಣ್ಣರ ಕುರಿತಾದ ಕಥಾಹಂದರ ಹೊಂದಿರುವ ಒಂದಷ್ಟು ಚಿತ್ರಗಳು ಬರುತ್ತಲೇ ಇರುತ್ತವೆ. ಕೆಲವು ಚಿತ್ರಗಳು ಚಿಣ್ಣರ ಬದುಕಿನ ಕುರಿತಾಗಿದ್ದರೆ, ಕೆಲವು ಮಕ್ಕಳ ಸಾಹಸಗಾಥೆಯನ್ನು ಹೇಳುತ್ತವೆ. ಈ ಬಾರಿ ಕೂಡ ಅಂಥದ್ದೇ ಒಂದು ಚಿತ್ರ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು ಸುವ್ವಾಲಿ.

Advertisement

ಅನಾಥಾಲಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಸುಮಾರು ಒಂದೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಶ್ರೀರಾಮ್‌ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರ ಫೋಕಸ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ.

ಇನ್ನೊಂದು ವಿಶೇಷವೆಂದರೆ, ಬಹುತೇಕ ಮಕ್ಕಳೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಈಗಷ್ಟೇ ಪಿ.ಯು.ಸಿ. ಓದುತ್ತಿರುವ ವಿದ್ಯಾರ್ಥಿ ಹಾರ್ದಿಕಾ ನಿರ್ದೇಶನ ಮಾಡಿದ್ದಾರೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಾಗಿರುವ ಸುವ್ವಾಲಿ ಚಿತ್ರದ ಆಡಿಯೋ ಮತ್ತು ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು.

ಜಿಲ್ಲಾ ಪಂಚಾಯತಿ ಸದಸ್ಯ ಜಿ. ಮರಿಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು, ಲಹರಿ ಮ್ಯೂಸಿಕ್‌ ಸಂಸ್ಥೆಯ ಮುಖ್ಯಸ್ಥ ವೇಲು, ನಿರ್ಮಾಪಕ ಎಂ.ಜಿ ರಾಮಮೂರ್ತಿ, ಎನ್‌.ಎಂ.ಸುರೇಶ್‌, ಉಮೇಶ್‌ ಬಣಾಕಾರ್‌, ಕೆ.ಎಂ ವೀರೇಶ್‌ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಆಡಿಯೋ ಮತ್ತು ಟೀಸರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಶ್ರೀರಾಮ್‌ ಬಾಬು, “ನಾನು ನೋಡಿದ ಒಂದಷ್ಟು ಅನಾಥಾಲಯದ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಅನಾಥಾಶ್ರಮದಲ್ಲಿನ ಸಮಸ್ಯೆಗಳ ವಿರುದ್ಧ ಅಲ್ಲಿನ ಮಕ್ಕಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಾರೆ. ಕೆಲ ವ್ಯಕ್ತಿಗಳು ನೀಡುವ ಭರವಸೆಯನ್ನು ನಂಬಿದ ಅನಾಥಾಲಯದಿಂದ ಹೊರಬರುವ ಆರು ಜನ ಮಕ್ಕಳಿಗೆ ವಾಸ್ತವ ಜಗತ್ತಿನ ಅರಿವಾಗುತ್ತದೆ.

Advertisement

ಇದೇ ವೇಳೆ ಒಂದು ಭಾಷಣ ಕೇಳುವ ಹುಡುಗರು ನೇರವಾಗಿ ಪ್ರಧಾನ ಮಂತ್ರಿಗಳನ್ನೇ ಭೇಟಿ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಕೊನೆಗೂ ಆ ಮಕ್ಕಳಿಗೆ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಯಿತೆ? ಇಲ್ಲವೇ? ಎಂಬುದೇ “ಸುವ್ವಾಲಿ’ ಚಿತ್ರದ ಕ್ಲೈಮ್ಯಾಕ್ಸ್‌. ಸುಮಾರು 27 ದಿನಗಳ ಕಾಲ “ಸುವ್ವಾಲಿ’ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಅದರಲ್ಲಿ 21 ದಿನ ರಾತ್ರಿಯೇ ಶೂಟಿಂಗ್‌ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ನಿರ್ದೇಶಕಿ ಹಾರ್ದಿಕ ಮಾತನಾಡಿ, “ಈ ಹಿಂದೆ ಕೆಲ ಕಿರುಚಿತ್ರಗಳ ನಿರ್ದೇಶನ ಮಾಡಿದ್ದು, ಆ ಅನುಭವದ ಮೇಲೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಆರು ಜನ ಮಕ್ಕಳು ತಮಗಾಗುತ್ತಿರುವ ತೊಂದರೆಗಳನ್ನು ಸರಿಪಡಿಸಿಕೊಳ್ಳಲು ಅನಾಥಾಲಯದಿಂದ ಹೊರಬಂದಾಗ ಏನೆಲ್ಲಾ ಸಂಕಷ್ಟ, ಸವಾಲುಗಳನ್ನು ಎದುರಿಸುತ್ತಾರೆ ಎನ್ನುವುದು ಚಿತ್ರದ ಕಥೆಯ ಒಂದು ಎಳೆ. ಮೊದಲ ಬಾರಿಗೆ ಈ ಚಿತ್ರ ನಿರ್ದೇಶನ ಮಾಡಿದ್ದು ಒಳ್ಳೆ ಅನುಭವ ಕೊಟ್ಟಿದೆ’ ಎಂದರು.

“ಸುವ್ವಾಲಿ’ ಚಿತ್ರಕ್ಕೆ ಲೋಕಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ರಾಜೇಶ್‌ ಕೃಷ್ಣನ್‌, ನವೀನ್‌ ಸಜ್ಜು, ಮೇಘನಾ ಕುಲಕರ್ಣಿ ಮೊದಲಾದವರು ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಆಡಿಯೋ ಮತ್ತು ಟೀಸರ್‌ ಬಿಡುಗಡೆಯ ಮೂಲಕ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ “ಸುವ್ವಾಲಿ’ ಚಿತ್ರತಂಡ, ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next