Advertisement

ಕಾಸ್ ಚೆಕ್ : ಕೈಕೊಟ್ಟ ತಂತ್ರ

03:17 PM May 11, 2020 | mahesh |

ಅಂಗಡಿಯಲ್ಲಿ 3 ಕುಕ್ಕರ್‌ಗಳಿರುತ್ತವೆ. ಮೂರೂ ಒಂದೇ ಗಾತ್ರದ, ಒಂದೇ ಕಂಪನಿಯ ಕುಕ್ಕರ್‌ಗಳೇ ಆದರೂ, ಅವುಗಳ ಬೆಲೆ ಮಾತ್ರ ಒಂದಕ್ಕಿಂತ ಒಂದು ಭಿನ್ನ. ಕ್ರಮವಾಗಿ 3,000, 6,000 ಮತ್ತು 8,000 ಎಂದಿಟ್ಟುಕೊಳ್ಳೋಣ. ಹೀಗಿದ್ದಾಗ, ಗ್ರಾಹಕರು ಯಾವ ಕುಕ್ಕರ್‌ ಅನ್ನು ಆರಿಸುತ್ತಾರೆ? ಮಾರ್ಕೆಟಿಂಗ್‌ ಮಂದಿಯ ಪ್ರಕಾರ, ಗ್ರಾಹಕರು 6,000 ರೂ. ಬೆಲೆಯ ಕುಕ್ಕರ್‌ ಅನ್ನು ಕೊಳ್ಳುತ್ತಾರೆ. 3,000 ಬೆಲೆಯದ್ದು, ಚೀಪ್‌ ಎಂಬ ಭಾವನೆ ಹುಟ್ಟಿಸುತ್ತದೆ, 8,000 ರೂ. ತುಂಬಾ ಹೆಚ್ಚಾಯಿತು ಅನಿಸುತ್ತದೆ. ಹಾಗಾಗಿ, ಹೆಚ್ಚಿನ ಗ್ರಾಹಕರು, ಅವೆರಡರ ನಡುವಿನ ಬೆಲೆಯ ಕುಕ್ಕರ್‌ ಅನ್ನು ಆರಿಸುತ್ತಾರೆ. ಹೀಗಾಗಿಯೇ, ವಸ್ತುಗಳ ಬೆಲೆ ನಿರ್ಧರಿಸುವಾಗ ಇವೆಲ್ಲಾ ಲೆಕ್ಕಾಚಾರವನ್ನೂ ಮಾಡಲಾಗುತ್ತದೆ. ಆದರೆ, ಈ ಮಾರ್ಕೆಟಿಂಗ್‌ ತಂತ್ರ ಎಲ್ಲಾ ಕಡೆಯೂ ವರ್ಕೌಟ್‌ ಆಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಇಲ್ಲಿದೆ.

Advertisement

ಬರ್ಗರ್‌, ಪಿಜ್ಜಾಗಳನ್ನು ಮಾರುವ ಒಂದು ರೆಸ್ಟೋರೆಂಟಿನಲ್ಲಿ ಒಮ್ಮೆ 50,000 ರೂ. ಬೆಲೆಯ ಬರ್ಗರನ್ನು ಮೆನುವಿಗೆ ಸೇರಿಸಲಾಯಿತು. ಇದೂ ಒಂದು ಮಾರ್ಕೆಟಿಂಗ್‌ ತಂತ್ರವೇ. 50,000 ರೂ. ಬೆಲೆಯ ಬರ್ಗರ್‌ ಎಂಬ ವಿಲಕ್ಷಣ ತಂತ್ರದಿಂದಾಗಿ, ನಗರದೆಲ್ಲೆಡೆ ರೆಸ್ಟೋರೆಂಟಿಗೆ ಪ್ರಚಾರವೂ ಸಿಕ್ಕಿತು. ಇದರಿಂದಾಗಿ ಹೊಸ ಗ್ರಾಹಕರು ಸಿಕ್ಕಿದರಾ? ಗೊತ್ತಿಲ್ಲ, ಆದರೆ, ಇಷ್ಟು ದಿನ ಅಲ್ಲಿಗೆ ತಪ್ಪದೇ ಬರುತ್ತಿದ್ದ ನಿಷ್ಠಾವಂತ ಗ್ರಾಹಕರು, ಬರುವುದನ್ನೇ ನಿಲ್ಲಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಒಂದು ವಿಚಾರ ಬೆಳಕಿಗೆ ಬಂದಿತ್ತು. ಅದುವರೆಗೂ 60 ರೂ. ಬರ್ಗರ್‌ ತಿನ್ನುತ್ತಿದ್ದವರಿಗೆ, 50,000 ರೂ. ಬೆಲೆಯ ಬರ್ಗರ್‌ನಿಂದಾಗಿ ತಾವು ಚೀಪ್‌ ಎಂಬ ಭಾವನೆ ಮೂಡಿತ್ತು. ಈ ಕಾರಣಕ್ಕೇ ಆ ರೆಸ್ಟೋರೆಂಟು, ತನ್ನ ಗ್ರಾಹಕರನ್ನು ಕಳೆದುಕೊಂಡಿತ್ತು. ಅದೇ ಬರ್ಗರ್‌ಗೆ ಇನ್ನೂರು ಅಥವಾ ಮುನ್ನೂರು ರೂಪಾಯಿ ಇರಿಸಿದ್ದರೆ ಹಾಗಾಗುತ್ತಿರಲಿಲ್ಲ ಎನ್ನುವುದು, ಮಾರ್ಕೆಟಿಂಗ್‌ ಪರಿಣತರ ಅಭಿಪ್ರಾಯ.

ಒಂದು ಕಡೆ ಫ‌ಲ ನೀಡಿದ ತಂತ್ರ, ಎಲ್ಲಾ ಕಡೆಯೂ ಸಲ್ಲುವುದಿಲ್ಲ. ಸಮಯ, ಸಂದರ್ಭ, ಗ್ರಾಹಕರನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next