Advertisement

Udupi: ಆಹಾರ ಉದ್ದಿಮೆ ಪರವಾನಿಗೆ ಪಡೆಯಲು ಹರಸಾಹಸ

02:31 PM Dec 15, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿ ಇಲ್ಲದಿರುವುದರಿಂದ ಆಹಾರ ಉದ್ಯಮೆದಾರರು ತಮ್ಮ ಪರವಾನಿಗೆ ನವೀಕರಣ ಹಾಗೂ ಹೊಸ ಪರವಾನಿಗೆ ಪಡೆಯಲು ಹರಸಾಹಸ ಪಡಬೇಕಾಗಿದೆ. ಈಗಾಗಲೇ ವರ್ಷಾಂತ್ಯ ಸಮೀಪಿಸುತ್ತಿದ್ದು, ಉದ್ದಿಮೆಗಳನ್ನು ನವೀಕರಣ ಮಾಡ ಬಯಸುವವರು ದಿನಂಪ್ರತಿ ಕಚೇರಿಗೆ ಅಲೆದಾಡುವಂತಾಗಿದೆ. ಇದರ ಜತೆಗೆ ಸಿಬಂದಿ ಕೊರತೆ ಇರುವುದರಿಂದ ಕೆಲಸಗಳು ನಡೆಯುತ್ತಿಲ್ಲ.

Advertisement

ಉಡುಪಿಗೆ ಪೂರ್ಣಪ್ರಮಾಣದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಅವರು ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಉಡುಪಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಎಲ್ಲ ಅರ್ಜಿಗಳ ವಿಲೇವಾರಿ ಅಸಾಧ್ಯ.

ನಿಯಮಾವಳಿ ಉಲ್ಲಂಘನೆ ವ್ಯಾಪಕ
ಆಹಾರ ಗುಣಮಟ್ಟ, ಕೃತಕ ಬಣ್ಣಗಳ ಬಳಕೆ, ತೈಲಗಳ ದೀರ್ಘ‌ಕಾಲೀನ ಮರುಬಳಕೆ ಸಂಬಂಧಿಸಿ ಸರಕಾರ ಕೆಲವೊಂದು ನಿಷೇಧಗಳನ್ನು ವಿಧಿಸಿದೆ. ಆದರೂ ಪ್ರವಾಸಿ ತಾಣಗಳು ಸೇರಿ ಹಲವಾರು ಕಡೆಗಳಲ್ಲಿ ರಾಜಾರೋಷವಾಗಿ ನಿಯಮಗಳ ಉಲ್ಲಂಘನೆ ನಡೆಯುತ್ತಿದೆ. ಇದರ ಬಗ್ಗೆ ದೂರುಗಳೂ ಬರುತ್ತಿವೆ. ಆದರೆ, ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೆ ಇವುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಭೇಟಿ ನೀಡುವ ಪ್ರಶ್ನೆಯೇ ಇಲ್ಲ!
ಆಹಾರ ಉತ್ಪಾದನೆ, ಮಾರಾಟ ಹಾಗೂ ತಪಾಸಣೆ ಹೀಗೆ ಎಲ್ಲ ಆಹಾರ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸುವ ಜತೆಗೆ ಗ್ರಾಹಕರಿಂದ ದೂರುಗಳು ಕೇಳಿಬಂದರೆ ಅಧಿಕಾರಿ ನೇತೃತ್ವದ ತಂಡ ಘಟನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕಾಗುತ್ತದೆ. ಹೊಸ ಉದ್ಯಮ ಸ್ಥಾಪನೆಗೆ ಪರವಾನಿಗೆ ನೀಡುವ ಮುನ್ನವೂ ತಪಾಸಣೆ ಕಡ್ಡಾಯವಾಗಿದೆ. ಆದರೆ, ಜಿಲ್ಲಾಮಟ್ಟದ ಅಧಿಕಾರಿಯೇ ಇಲ್ಲದಿರುವುದರಿಂದ ಈ ಕೆಲಸಗಳು ನಡೆಯುತ್ತಿಲ್ಲ.

ಪ್ರಭಾವವಿದ್ದರೆ ಮಾತ್ರ ಪರವಾನಿಗೆ
ಕಾನೂನಿನ ಪ್ರಕಾರ 12 ಲ.ರೂ. ಒಳಗಿನ ಉದ್ದಿಮೆಗಳಾದರೆ ಇಲಾಖೆಯ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು, ಅದಕ್ಕಿಂತ ದೊಡ್ಡ ಉದ್ಯಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿ ಭೇಟಿ ನೀಡಿದ ಬಳಿಕವೇ ಪರವಾನಿಗೆ ನವೀಕರಣ ಮಾಡಬೇಕು. ಆದರೆ, ಈಗ ಪ್ರಭಾವ ಇದ್ದವರು, ಹಣ ಬಲ ಇದ್ದವರು ಕುಳಿತಲ್ಲಿಂದಲೇ ಪರವಾನಿಗೆ ನವೀಕರಣ ಮತ್ತು ಹೊಸ ಪರವಾನಿಗೆ ಪಡೆಯುತ್ತಿದ್ದಾರೆ! ಇದು ವ್ಯವಸ್ಥೆಯೇ ಸೃಷ್ಟಿಸಿದ ದುರಂತ!

Advertisement

ಪರವಾನಿಗೆ ಮುಗಿದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ನವೀಕರಣಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಬೇಕು.

ಸೂಕ್ತ ಕ್ರಮ
ಆಹಾರ ಸುರಕ್ಷತೆ ವಿಭಾಗಕ್ಕೆ ಈಗಾಗಲೇ ಖಾಲಿ ಇರುವ ಹುದ್ದೆಗಳಲ್ಲಿ ಕೆಲವೊಂದು ಭರ್ತಿಯಾಗಿವೆ. ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಆಹಾರ ಸುರಕ್ಷತೆ, ಗುಣಮಟ್ಟ ಅಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ.
-ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next