ಬೆಂಗಳೂರು: ನಕಲಿ ಗ್ರಾಹಕರನ್ನು ಸೃಷ್ಟಿಸಿ ಆನ್ ಲೈನ್ ಇ-ಕಾಮರ್ಸ್ ವೇದಿಕೆ ಮೀಶೋ ಕಂಪನಿಗೆ ಕೋಟ್ಯಂತರ ರೂ. ವಂಚಿಸಿದ್ದ ಗುಜರಾತ್ ಮೂಲದ ಮೂವರು ಆರೋಪಿ ಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್‌ನ ಸೂರತ್ ಜಿಲ್ಲೆಯ ಉತ್ತಮ್ ಕುಮಾರ್(23), ಪಾರ್ಥ್ ಭಾಯ್(24) ಮತ್ತು ಮೌಲಿಕ್(26) ಬಂಧಿತರು.
ಆರೋಪಿಗಳು 2024ರ ಜನವರಿಯಿಂದ ಜುಲೈವರೆಗೆ ಮೀಶೋ ಕಂಪನಿಗೆ ಬರೋಬ್ಬರಿ 5.50 ಕೋಟಿ ರೂ. ವಂಚಿಸಿ ರುವುದು ಗೊತ್ತಾಗಿದೆ. ಆರೋಪಿಗಳಿಂದ 3 ಮೊಬೈಲ್‌ಗಳು, ನಕಲಿ ಸಿಮ್‌ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಗಳ ವಿರುದ್ಧ ಮೀಶೋ ಕಂಪನಿಯ ಸ್ಥಳೀಯ ನೋಡಲ್ ಅಧಿಕಾರಿ ದೂರು ನೀಡಿದ್ದರು ಎಂದು ಕಮಿಷನರ್ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ ಸೈಬರ್ ಕ್ರೈಂ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಮೀಶೋ ಕಂಪನಿಯಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡ ಬ್ಯಾಂಕ್ ಖಾತೆ ವಿವರ ಮತ್ತು ಹಲವಾರು ಮೊಬೈಲ್ ನಂಬರ್‌ಗಳ ಮಾಹಿತಿ ಸಂಗ್ರಹಿಸಿದಾಗ ಒಟ್ಟು 6 ಮಂದಿ ಆರೋಪಿಗಳ ಮಾಹಿತಿ ಸಿಕ್ಕಿತ್ತು. ಸದ್ಯ ಮೂವರು ಪ್ರಮುಖ ಆರೋಪಿಗಳ ಬಂಧಿಸಲಾಗಿದೆ. ಇತರೆ ಮೂವರಿಗಾಗಿ ಶೋಧ ನಡೆಯುತ್ತಿದೆ ಎಂದರು.
ವಂಚನೆ ಹೇಗೆ?: ಮೀಶೋ ಆ್ಯಪ್ ಮೂಲಕ ಗ್ರಾಹಕರು ವಿವಿಧ ವಸ್ತುಗಳನ್ನು ಖರೀದಿಸಬಹುದು. ಈ ರೀತಿ ಖರೀದಿಸಿದ ವಸ್ತುಗಳಿಗೆ ಗ್ರಾಹಕರು ಆನ್ ಲೈನ್ ಅಥವಾ ನಗದು ರೂಪದಲ್ಲಿ ಹಣ ಪಾವತಿಸ ಬಹುದು. ಇದನ್ನೆ ಬಂಡವಾಳ ಮಾಡಿಕೊಂಡ ಅರೋ ಪಿಗಳು ಸೂರತ್‌ನಲ್ಲಿ ಓಂ ಸಾಯಿ ಫ್ಯಾಷನ್ ಎಂಬ ಹೆಸರಿನಲ್ಲಿ ನಕಲಿ ಕಂಪನಿ ತೆರೆದು, ಅದನ್ನು ಸರಬ ರಾಜುದಾರ ಕಂಪನಿ ಎಂದು ಬಿಂಬಿಸಿ ಮೀಶೋ ಕಂಪ ನಿಯಲ್ಲಿ ನೋಂದಾಯಿಸಿದ್ದರು. ನಂತರ ಮೀಶೋ ಆ್ಯಪ್ ಬಳಸಿ ತಾವೇ ಗ್ರಾಹಕರ ಸೋಗಿನಲ್ಲಿ ನಕಲಿ ಹೆಸರು, ವಿಳಾಸ ನೀಡಿ ನಿತ್ಯ ಸರಾಸರಿ 2000ರಿಂದ 2500 ವಿವಿಧ ಉತ್ಪನ್ನಗಳನ್ನು ಬುಕ್ ಮಾಡುತ್ತಿದ್ದರು.
ಈ ರೀತಿ ತಪ್ಪಾಗಿ ನೀಡಿದ ಗ್ರಾಹಕರ ವಿಳಾಸದಿಂದ ಉತ್ಪನ್ನಗಳು ವಾಪಸ್ ತಮ್ಮ ಕಂಪನಿಗೆ ಬರುವಂತೆ ಸಂಚು ರೂಪಿಸಿದ್ದರು. ಹಾಗೆಯೇ ವಾಪಸ್ ಬಂದ ಉತ್ಪನ್ನ ಇರುವ ಪಾರ್ಸಲ್‌ನಲ್ಲಿರುವ ವಸ್ತುವನ್ನು ಬದಲಾಯಿಸಿ, ಮೀಶೋ ಕಂಪನಿಯವರಿಗೆ ಪಾರ್ಸೆಲ್‌ನಲ್ಲಿದ್ದ ವಸ್ತುವು ಬದಲಾಗಿದೆ ಎಂದು ವಿಡಿಯೋ ಮಾಡಿ, ಈ ವಿಡಿಯೋವನ್ನು ಕಂಪನಿಗೆ ಕಳುಹಿಸುತ್ತಿದ್ದರು. ಬಳಿಕ ಆ ಉತ್ಪನ್ನಗಳ ಮೌಲ್ಯದಷ್ಟು ಹಣವನ್ನು ಕ್ಲೈಂ ಮಾಡಿಕೊಳ್ಳುತ್ತಿದ್ದರು. ಈ ರೀತಿ ಕ್ಲೈಂ ಮಾಡಿಕೊಳ್ಳುತ್ತಿದ್ದ ಹಣವನ್ನು ಸ್ವಯಂ ಚಾಲಿತವಾಗಿ ಮೀಶೋ ಕಂಪನಿಯವರಿಂದ ಆರೋಪಿಗಳ ಖಾತೆಗೆ ಪಾವತಿಯಾಗುತ್ತಿತ್ತು. ಆರೋಪಿಗಳ ಪೂರ್ವಪರ ವಿಚಾರಣೆ ನಡೆಸಿದಾಗ 2023ರಲ್ಲಿ ವೈಟ್ ಫೀಲ್ಡ್ ವಿಭಾಗದ ಸೆನ್ ಠಾಣೆಯಲ್ಲಿ ಮೀಶೋ ಕಂಪನಿಯವರು ದಾಖಲಾಗಿದ್ದ ಪ್ರಕರಣದಲ್ಲಿಯೂ ಇದೇ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಪತ್ತೆಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ, ಡಿಸಿಪಿ ಶ್ರೀನಿವಾಸಗೌಡ ಹಾಗೂ ತನಿಖಾಧಿಕಾರಿಗಳಾದ ಹಜರೇಶ್ ಕಿಲ್ಲೇದಾರ್ ಮತ್ತಿತರರು ಉಪಸ್ಥಿತರಿದ್ದರು.