Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಅವ್ಯವಹಾರಗಳ ತನಿಖೆ: ಸಚಿವ ಡಿ. ಸುಧಾಕರ್  

11:07 PM Dec 13, 2024 | Team Udayavani |

ಬೆಳಗಾವಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದಲ್ಲಿ 2022-23ನೇ ಸಾಲಿನಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಯುತ್ತಿದೆ. ಈ ಸಂಬಂಧ ಈಗಾಗಲೇ ಕೆಲವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ ಹೇಳಿದರು.

Advertisement

ವಿಧಾನಪರಿಷತ್‌ದಲ್ಲಿ ಕಾಂಗ್ರೆಸ್‌ ಸದಸ್ಯ ಐವನ್‌ ಡಿ’ಸೋಜಾ ಅವರ ಪ್ರಶ್ನೆಗೆ ಉತ್ತರಿಸಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 10.50 ಕೋಟಿ ರೂ ಕೊಡಲಾಗಿದ್ದು ಅದರಲ್ಲಿ 3.88 ಕೋಟಿ ರೂ. ವೆಚ್ಚವಾಗಿದೆ. ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತಿಸಲು ಕಾಯ್ದೆ ರೂಪಿಸಲಾಗಿದೆ. ಇದಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು ರಾಜ್ಯ ಸರಕಾರವು ಅಧಿಸೂಚನೆ ಸಹ ಪ್ರಕಟಿಸಿದೆ ಎಂದರು. ಇದಕ್ಕೂ ಮುನ್ನ ಐವನ್‌ ಅವರು ಪ್ರಾಧಿಕಾರದಲ್ಲಿ ಸುಮಾರು 525 ಕೋಟಿ ರೂ. ಅವ್ಯವಹಾರವಾಗಿದೆ. ಇದುವರೆಗೆ ಯಾರ ಮೇಲೂ ಎಫ್‌ಐಆರ್‌ ದಾಖಲು ಮಾಡಿಲ್ಲ. ಯಾವ ಕಾರಣಕ್ಕೆ ತನಿಖೆ ನಡೆಸಿಲ್ಲ ಎಂದು ಪ್ರಶ್ನಿಸಿದರು.

ಕರಾವಳಿಗೆ ಹೈಕೋರ್ಟ್‌ ಸಂಚಾರ ಪೀಠ ಇಲ್ಲ
ಕರಾವಳಿ ಜಿಲ್ಲೆಗಳು ಮತ್ತು ಕೊಡಗು ಜಿಲ್ಲೆಯ ವ್ಯಾಪ್ತಿಗೆ ಪ್ರತ್ಯೇಕ ಹೈಕೋರ್ಟ್‌ ಪೀಠ ಸ್ಥಾಪಿಸುವ ವಿಚಾರ ಸದ್ಯಕ್ಕೆ ಸರಕಾರದ ಮುಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾನಾಯಕ ಎನ್‌.ಎಸ್‌. ಬೋಸರಾಜು ಹೇಳಿದರು.

ಐವನ್‌ ಅವರ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ವ್ಯಾಪ್ತಿಗೆ ಬರುವ ಪ್ರದೇಶಗಳ ವ್ಯಾಜ್ಯಗಳನ್ನು ಈಗಿರುವ ಉಚ್ಚ ನ್ಯಾಯಾಲಯದಲ್ಲಿಯೇ ಸಮರ್ಥವಾಗಿ ನಿರ್ವಹಿಸ ಲಾಗುತ್ತಿದೆ. ಆಯಾ ರಾಜ್ಯಗಳ ಹೈಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಗಳು ರಾಜ್ಯಪಾಲರ ಅನುಮೋದನೆಯೊಂದಿಗೆ ಸಂಚಾರಿ ಪೀಠ ಸ್ಥಾಪಿಸುವ ಅಧಿಕಾರ ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿಚಾರ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next