ಬೆಳಗಾವಿ: ರಾಜ್ಯದಲ್ಲಿನ ಸೈಬರ್ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ಸೈಬರ್ ಸೆಕ್ಯೂರಿಟಿ ವಿಭಾಗ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶಾಂತಿನಗರದ ಶಾಸಕ ಎನ್.ಎ. ಹ್ಯಾರೀಸ್ ಅಪರಾಧ ನಿಯಂತ್ರಣಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪರಮೇಶ್ವರ್ ಉತ್ತರ ನೀಡಿದರು.
ಹೊಸ ಸೈಬರ್ ಸೆಕ್ಯೂರಿಟಿ ವಿಭಾಗಕ್ಕೆ ಪ್ರತ್ಯೇಕ ಡಿಜಿಪಿ, ಎಡಿಜಿಪಿ, ಐಜಿ, 7 ವಲಯಗಳಿಗೆ ಪ್ರತ್ಯೇಕ ಎಸ್ಪಿಗಳನ್ನು ನೀಡಲಾಗುವುದು. ಜತೆಗೆ ನುರಿತ ಸಿಬಂದಿಯನ್ನು ನೇಮಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗುತ್ತಿದೆ. ಅಲ್ಲಿಗೆ ರಾಜ್ಯದ ಸಾವಿರಕ್ಕಿಂತ ಹೆಚ್ಚು ಪೊಲೀಸ್ ಠಾಣೆಗಳಿಂದ ನೇರವಾಗಿ ಮಾಹಿತಿ ಬರಲಿದೆ ಎಂದು ಮಾಹಿತಿ ನೀಡಿದರು.
ಸೈಬರ್ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ 43 ಸೆನ್ ಪೊಲೀಸ್ ಠಾಣೆಗಳನ್ನು ಸೃಜಿಸಲಾಗಿದೆ. ಸೈಬರ್ ಅಪರಾಧ ತಡೆಯಲು ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಅಗತ್ಯ ಇರುವ ಉಪಕರಣ ಖರೀದಿ ಮಾಡಲು 10 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.