ಬ್ಯಾಡಗಿ: ಪ್ರತಿಯೊಬ್ಬ ಪ್ರಜೆಯಲ್ಲಿಯೂ ಏಕತಾ ಮನೋಭಾವನೆ ಇರಬೇಕು. ದೇಶಭಕ್ತಿ ಇಲ್ಲದ ವ್ಯಕ್ತಿ ಮಾತೃಭೂಮಿಯಲ್ಲಿ ಬದುಕಲು ಹಕ್ಕಿಲ್ಲ ಎಂಬುದು ಟಿಪ್ಪು ಸುಲ್ತಾನ್ ಅವರ ಕೊನೆಯ ಮಾತಾಗಿತ್ತು ಎಂದು ಎಲ್‌ಐಸಿ ಅಭಿವೃದ್ಧಿ ಅಧಿ ಕಾರಿ ಎ.ಎಂ.ಖಾಜಿ ಹೇಳಿದರು.
ತಾಲೂಕಾಡಳಿತ, ತಾಲೂಕು ಪಂಚಾಯತ್, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಬಿಇಎಸ್ ವರ್ತಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರು, ದಾರ್ಶನಿಕರು, ರಾಷ್ಟ್ರ ನಾಯಕರ ಜಯಂತಿಗಳ ಮಾದರಿಯಲ್ಲಿಯೇ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗುತ್ತಿದೆ. ಇದರಿಂದ ಸರ್ಕಾರ ರಾಜಧರ್ಮವನ್ನು ಪಾಲಿಸುವ ಮೂಲಕ ದೇಶದ ಸಂವಿಧಾನದ ಆಶಯಗಳನ್ನು ಈಡೇರಿಸುತ್ತಿದೆ ಎಂದರು.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿ ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸುವುದು ಸೂಕ್ತವಲ್ಲ, ಸ್ವಾತಂತ್ರ್ಯ ಹೋರಾಟದ ರಣಕಹಳೆ ಊದುವ ಮೂಲಕ ಮಾತೃಭೂಮಿಯ ಋಣ ತೀರಿಸಿದ್ದಾನೆ. ಅವರ ಸ್ಮರಣೆ ಮಾಡುವಂತಹ ದಿನದಂದು ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸುವುದು ಸೂಕ್ತವಲ್ಲ ಎಂದರು.
ಜಿಪಂ ಸದಸ್ಯ ಅಬ್ದುಲ್ ಮುನಾಫ್ ಎಲಿಗಾರ, ತಹಶೀಲ್ದಾರ್ ಗುರುಬಸವರಾಜ, ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಸದಸ್ಯ ಜಗದೀಶ ಪೂಜಾರ, ಇಒ ಜಯಕುಮಾರ, ಪುರಸಭೆ ಸದಸ್ಯರಾದ ಮುನಾಫ್ ಎರೆಶೀಮಿ, ಮಜೀದ್ ಮುಲ್ಲಾ, ನಜೀರ್ ಅಹಮ್ಮದ ಶೇಖ್, ದುರ್ಗೇಶ ಗೋಣೆಮ್ಮನವರ, ಮಾಜಿ ಉಪಾಧ್ಯಕ್ಷ ಬಾಬುಸಾಬ್ ಬಡಿಗೇರ, ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಖಾದರಸಾಬ್ ದೊಡ್ಮನಿ, ಪ್ರಭು ದೊಡ್ಮನಿ, ಭಾಷಾ ಮುಲ್ಲಾ, ಆರ್.ಜಿ. ಕಳ್ಯಾಳ, ಡಾ| ಎ.ಎಂ. ಸೌದಾಗರ ಇತರರಿದ್ದರು.
ಬಿಜೆಪಿ ನಾಯಕರು ಗೈರು
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ ಹಾಗೂ ಬಿಜೆಪಿ ಚುನಾಯಿತ ಪ್ರತಿನಿಧಿಗಳು ವೇದಿಕೆಯಲ್ಲಿ ಕಾಣಲಿಲ್ಲ, ಕೆಲ ಮುಸ್ಲಿಂ ಮುಖಂಡರನ್ನು ಹೊರತುಪಡಿಸಿ ಸರ್ಕಾರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾತ್ರ ಇದ್ದರು.