ಹುಬ್ಬಳ್ಳಿ/ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಜನ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದು ಒಂದೆಡೆಯಾದರೆ, ಜ. 1ರಂದು ಪ್ರಮುಖ ದೇಗುಲಗಳಲ್ಲಿ ಜನರ ದಂಡೇ ಹರಿದು ಬಂದಿತ್ತು. ಅಂಜನಾದ್ರಿ, ಶೃಂಗೇರಿ ಶಾರದಾಂಬೆ, ಮಂತ್ರಾಲಯ ರಾಘವೇಂದ್ರ ಸ್ವಾಮಿ ಸನ್ನಿಧಿ, ಕೊಲ್ಲಾಪುರ ಮಹಾಲಕ್ಷ್ಮೀ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಗಳಿಗೆ ಸಾವಿರಾರು ಜನ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದಿದ್ದಾರೆ.
ಆಂಜನೇಯ ಜನ್ಮಭೂಮಿ ಅಂಜನಾದ್ರಿಗೆ ಸುಮಾರು 75 ಸಾವಿರ ಜನ ಭೇಟಿ ನೀಡಿದ್ದರು. ಕಿಷ್ಕಿಂದಾ ಅಂಜನಾದ್ರಿ, ಆನೆಗೊಂದಿ, ಹನುಮನಹಳ್ಳಿ, ಸಾಣಾಪೂರ, ಪಂಪಾ ಸರೋವರ ಸೇರಿದಂತೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಜನ, ವಾಹನ ದಟ್ಟಣೆ ಉಂಟಾಗಿತ್ತು. ವಾಲೀಕಿಲ್ಲಾ ಆದಿಶಕ್ತಿ ದೇಗುಲ, ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೂ ಸಾವಿರಾರು ಭಕ್ತರು ಆಗಮಿಸಿದ್ದರು.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಶ್ರೀಮಠದ ಪೀಠಾ ಧಿಪತಿ ಸುಬುದೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಮಂತ್ರಾಕ್ಷತೆ ನೀಡಿದರು. ಭಕ್ತರ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ವಸತಿ ಗೃಹಗಳನ್ನು ಬಾಡಿಗೆ ದರ 2 ಸಾವಿರದಿಂದ 5 ಸಾವಿರ ರೂ. ವರೆಗೆ ಏರಿಕೆ ಮಾಡಿದ್ದರಿಂದ ಭಕ್ತರು ಪರದಾಡಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಕ್ಷೇತ್ರಗಳಲ್ಲೂ ಭಕ್ತರ ದಂಡೆ ನೆರೆದಿತ್ತು. ಕೊಲ್ಲಾಪುರ ಮಹಾಲಕ್ಷ್ಮೀ ದೇವಸ್ಥಾನಕ್ಕೆ 91 ಸಾವಿರ ಭಕ್ತರು ಭೇಟಿ ನೀಡಿದ್ದರೆ, ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇಗುಲಕ್ಕೂ ಸಾವಿರಾರು ಜನ ಆಗಮಿಸಿ ದರ್ಶನ ಪಡೆದರು.
ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ಚರ್ಚ್‌ಗಳಲ್ಲಿ ಪರಮ ಪ್ರಸಾದದ ಆರಾಧನೆ, ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆ ನಡೆಯಿತು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಭಕ್ತರು ಆಗಮಿಸಿ ಚಾಮುಂಡೇಶ್ವರಿಗೆ ವಿಶೇಷಪೂಜೆ ಸಲ್ಲಿಸಿದರು. ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಬ, ಶ್ರೀರಂಗನಾಥಸ್ವಾಮಿ ದೇವಾಲಯ, ಮೇಲುಕೋಟೆ ಚೆಲುವನಾರಾಯಣಸ್ವಾಮಿ, ಯೋಗಾ ನರಸಿಂಹಸ್ವಾಮಿ ದೇವಾ ಲಯಗಳಲ್ಲೂ ಭಕ್ತರು ನೆರೆದಿದ್ದರು.