Advertisement

Church: ಕರಾವಳಿಯ ಚರ್ಚ್‌ಗಳಲ್ಲಿ ಬಲಿಪೂಜೆ, ಪ್ರಾರ್ಥನೆ ಸಲ್ಲಿಕೆ

11:35 PM Dec 31, 2024 | Team Udayavani |

ಮಂಗಳೂರು: ಕರಾವಳಿಯ ಚರ್ಚ್‌ಗಳಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆ ಮಂಗಳವಾರ ವಿಶೇಷ ಆರಾಧನೆ ಹಾಗೂ ಬಲಿಪೂಜೆಗಳು ನಡೆದವು. ಕಳೆದ ವರ್ಷದಲ್ಲಿ ದೇವರು ಕರುಣಿಸಿದ ಆಶೀರ್ವಾದಗಳನ್ನು ಸ್ಮರಿಸಲಾಯಿತು. ವಿವಿಧ ಅವಘಡಗಳಿಂದ ಪಾರು ಮಾಡಿದ ದೇವರಿಗೆ ಸ್ತುತಿ ಸ್ತೋತ್ರ ಸಮರ್ಪಿಸಲಾಯಿತು.

Advertisement

ಕೊಡಿಯಾಲ್‌ಬೈಲ್‌ನಲ್ಲಿರುವ ಬಿಪಷ್‌ ಹೌಸ್‌ನಲ್ಲಿ ಪವಿತ್ರ ಸಂಸ್ಕಾರದ ಆರಾಧನೆ ನಡೆಸಿದ ಬಳಿಕ ಪ್ರವಚನ ನೀಡಿದ ಮಂಗಳೂರು ಬಿಪಷ್‌ ರೈ|ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು, ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ವರ್ಷದಲ್ಲಿ ಹೊಸ ಭರವಸೆಯಿಂದ ಬದುಕು ನಡೆಸಬೇಕು. ಹೊಸ ವರುಷ ಎಲ್ಲರಿಗೂ ಆನಂದದಾಯಕವಾಗುವ ಜತೆಗೆ ನವೋಲ್ಲಾಸ ತರಲಿ ಎಂದು ಆರ್ಶಿàವಚನ ನೀಡಿದರು.

ಮಂಗಳೂರು ಧರ್ಮಪ್ರಾಂತದ ವಂ| ಮ್ಯಾಕ್ಸಿಂ ರೊಸಾರಿಯೋ ಪ್ರವಚನ ನೀಡಿದರು. ಮಂಗಳೂರು ಕ್ರೆçಸ್ತ ಧರ್ಮಪ್ರಾಂತದ ಕೋಶಾಧಿಕಾರಿ ವಂ| ಜಗದೀಶ್‌ ಪಿಂಟೋ, ಚಾನ್ಸಿಲರ್‌ ವಂ| ವಿಕ್ಟರ್‌ ಜಾರ್ಜ್‌ ಉಪಸ್ಥಿತರಿದ್ದರು.

ಹೊಸ ವರ್ಷಕ್ಕೆ ಸಿದ್ಧತೆಯಾಗಿ ಮಂಗಳೂರು ಕ್ರೆçಸ್ತ ಧರ್ಮಪ್ರಾಂತದ ರೊಸಾರಿಯೋ ಕೆಥೆಡ್ರಲ್‌, ಮಿಲಾಗ್ರಿಸ್‌, ಉರ್ವ, ಬಿಜೈ, ಬೆಂದೂರ್‌ವೆಲ್‌, ಕುಲಶೇಖರ, ಶಕ್ತಿನಗರ, ಬಿಕರ್ನಕಟ್ಟೆ, ಕೂಳೂರು, ಅಶೋಕನಗರ, ವಾಮಂಜೂರು, ಪಾಲ್ದನೆ, ಬೋಂದೆಲ್‌, ಬಂಟ್ವಾಳ, ಪುತ್ತೂರು, ಮೊಗರ್ನಾಡು, ವಿಟ್ಲ, ಮೂಡುಬಿದಿರೆ, ಬೆಳ್ತಂಗಡಿ, ಮುಡಿಪು, ಕಾಸರಗೋಡು ಸೇರಿದಂತೆ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಆರಾಧನೆಯೊಂದಿಗೆ ಬಲಿಪೂಜೆ ನಡೆಯಿತು.

ಕಳೆದುಹೋದ ವರ್ಷದಲ್ಲಿ ದೇವರು ನೀಡಿದ ಅವಕಾಶಗಳಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಹೊಸವರ್ಷ ಎಲ್ಲರಿಗೂ ಹರುಷ ತರಲಿ. ಜಾಗತಿಕ ಶಾಂತಿ ಮೊಳಗಲಿ ಎಂದು ಪ್ರಾರ್ಥಿಸಲಾಯಿತು. ಬಲಿಪೂಜೆಯ ಬಳಿಕ ಕೇಕ್‌ ಹಂಚುವ ಮೂಲಕ ಪರಸ್ಪರ ಹೊಸ ವರುಷದ ಶುಭಾಶಯ ವಿನಿಮಯ ಮಾಡಲಾಯಿತು. ಅಲ್ಲದೆ, ಸಂಘ ಸಂಸ್ಥೆಗಳ ವತಿಯಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಲಿಪೂಜೆಗೂ ಮುನ್ನ ಪವಿತ್ರ ಪ್ರಸಾದದ ಆರಾಧನೆ ಎಲ್ಲ ಚರ್ಚ್‌ಗಳಲ್ಲಿ ನೆರವೇರಿತು.

Advertisement

ಉಡುಪಿ: ನೂತನ 2025ರ ವರ್ಷವನ್ನು ಜಿಲ್ಲೆಯ ಕ್ರೈಸ್ತರು ಪ್ರಾರ್ಥನೆ, ಪೂಜೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಸ್ವಾಗತಿಸಿದರು.

ಮಂಗಳವಾರ ಸಂಜೆ ಇಗರ್ಜಿಗಳಿಗೆ ತೆರಳಿದ ಕ್ರೈಸ್ತರು 2024ರ ವರ್ಷದಲ್ಲಿ ಸರ್ವ ರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವುದೊರಂದಿಗೆ ನೂತನ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಿದರು.


ಉಡುಪಿ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷ ರೆ|ಫಾ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ ನಲ್ಲಿ ಮಂಗಳವಾರ ರಾತ್ರಿ ಪವಿತ್ರ ಬಲಿಪೂಜೆ ನೆರವೇರಿಸಿದರು. ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡುವುದರೊಂದಿಗೆ ವಿಶ್ವಶಾಂತಿಗಾಗಿ ನಮ್ಮಿಂದಾಗುವ ಪ್ರಯತ್ನ ಮಾಡುವಂತೆ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದರು.

ಪವಿತ್ರ ಬಲಿಪೂಜೆಯ ಮುಂಚಿತವಾಗಿ ಕಳೆದು ಹೋಗಲಿರುವ 2024ನೇ ವರ್ಷದಲ್ಲಿ ದೇವರು ಮಾಡಿದ ಎಲ್ಲ ರೀತಿಯ ಕ್ರಪಾವರಗಳಿಗೆ ದೇವರಿಗೆ ವಂದನೆ ಅರ್ಪಿಸಿ ಪರಮ ಪ್ರಸಾದದ ವಿಶೇಷ ಆರಾಧನೆಯನ್ನು ನಡೆಸುವುದರೊಂದಿಗೆ 2025ರಲ್ಲಿ ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.

ಮಿಲಾಗ್ರಿಸ್‌ ಕ್ಯಾಥೆಡ್ರಲ್‌ ನ ಪ್ರಧಾನ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತದ ಶ್ರೇಷ್ಠಗುರು ರೆ|ಫಾ|ಮೊನ್ಸಿಂಜೊರ್‌ ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಸಹಾಯಕ ಧರ್ಮಗುರುಗಳಾದ ರೆ| ಫಾ| ಪ್ರದೀಪ್‌ ಕಾಡೋìಜಾ, ರೆ| ಫಾ| ಡಾ| ಜೆನ್ಸಿಲ್‌ ಆಳ್ವಾ ಹಾಗೂ ಇತರ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.

ಜಿಲ್ಲೆಯ ಪ್ರಮುಖದ ಚರ್ಚ್‌ ಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ರೆ| ಫಾ|ಡಾ| ಲೆಸ್ಲಿ ಡಿ’ಸೋಜಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ರೆ| ಫಾ| ಚಾರ್ಲ್ಸ್‌ ಮಿನೇಜಸ್‌, ಕುಂದಾಪುರ ಹೋಲಿ ರೋಸರಿ ಚರ್ಚ್‌ ನಲ್ಲಿ ರೆ| ಫಾ| ಪಾವ್ಲ್ ರೇಗೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ರೆ|ಫಾ| ಆಲ್ಬನ್‌ ಡಿ’ಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನಲ್ಲಿ ರೆ|ಫಾ| ಡೆನಿಸ್‌ ಡೇಸಾ ಅವರ ನೇತೃತ್ವದಲ್ಲಿ ಹೊಸ ವರ್ಷ ಆಚರಣೆ ಪ್ರಯುಕ್ತ ಬಲಿಪೂಜೆ ನಡೆದವು.

ಹೊಸ ವರ್ಷಾಚರಣೆ ಸ್ವಾಗತಿಸುವ ಅಂಗವಾಗಿ ಚರ್ಚ್‌ಗಳಲ್ಲಿ ಯುವ ಸಂಘಟನೆಯಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ,ಕೇಕ್‌ ವಿತರಣೆ ಕೂಡ ನಡೆಯಿತು. ಬಲಿಪೂಜೆ ಯ ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next