Advertisement

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

10:29 AM Jan 07, 2025 | Team Udayavani |

ಗದಗ: ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಅಂಗವಾಗಿ ಕಳೆದ ವರ್ಷ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಅಭಿಮಾನಿಗಳು ಯಶ್ ಅವರ ಕಟೌಟ್ ನಿಲ್ಲಿಸುವ ವೇಳೆ ಕಟೌಟ್‌ಗೆ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ಸಾವಿಗೀಡಾದ ದುರ್ಘಟನೆ ಒಂದು ವರ್ಷ ಕಳೆದಿದ್ದು, ಇನ್ನೂ ಮಾಸದ ನೆನಪಾಗಿ ಹಾಗೆಯೇ ಉಳಿದಿದೆ.

Advertisement

2024ರ ಜನವರಿ 8ರ ಸೋಮವಾರದಂದು ಬೆಳಿಗ್ಗೆ ರಾಕಿಂಗ್ ಸ್ಟಾರ್ ಜನ್ಮದಿನವನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದ ಸೂರಣಗಿ ಗ್ರಾಮದ 10ಕ್ಕೂ ಹೆಚ್ಚು ಯುವಕರು ರವಿವಾರ ಮಧ್ಯರಾತ್ರಿ 12ರಿಂದ 12.30ರ ಸುಮಾರಿಗೆ 20 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ಯತ್ನದಲ್ಲಿದ್ದರು.

ಈ ವೇಳೆ ಯುವಕರು ಕಟೌಟ್‌ನ್ನು ಮೇಲಕ್ಕೇತ್ತುವ ಭರದಲ್ಲಿ ಕಟೌಟ್ ವಿದ್ಯುತ್ ತಂತಿಗೆ ತಾಗಿದ್ದರಿಂದ ನಡೆದ ದುರ್ಘಟನೆಯಲ್ಲಿ ಗ್ರಾಮದ ಹನುಮಂತ ಮಜ್ಜೂರಪ್ಪ ಹರಿಜನ(21), ಮುರಳಿ ನೀಲಪ್ಪ ನಡುವಿನಮನಿ(20), ನವೀನ ನೀಲಪ್ಪ ಗಾಜಿ(19) ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಗ್ರಾಮದ ರುದ್ರಭೂಮಿಯಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಮೂವರು ಅಭಿಮಾನಿಗಳು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಶೂಟಿಂಗ್ ಸ್ಥಳದಿಂದ ನೇರವಾಗಿ ಸೂರಣಗಿ ಗ್ರಾಮಕ್ಕೆ ಧಾವಿಸಿದ್ದ ನಟ ಯಶ್ ಆವರು ವಿದ್ಯುತ್ ಅವಘಡದಲ್ಲಿ ಮೃತರಾದ ಹನುಮಂತ ಹರಿಜನ, ಮುರಳಿ ನಡುವಿನಮನಿ ಹಾಗೂ ನವೀನ ಗಾಜಿ ಅವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದರಲ್ಲದೇ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು.

ದುರ್ಘಟನೆ ಬೆನ್ನಲ್ಲೆ ಸೂರಣಗಿ ಗ್ರಾಮಕ್ಕೆ ಧಾವಿಸಿದ್ದ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ| ಚಂದ್ರು ಲಮಾಣಿ ಹಾಗೂ ಅಂದಿನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಕುಟುಂಬಸ್ಥರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಅವರು ಮೃತರ ಕುಟುಂಬದದೊಂದಿಗೆ ನಾವಿದ್ದೇವೆ ಎಂದು ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದ್ದರು.

Advertisement

ಮೃತ ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದ ಯಶ್

ನಟ ಯಶ್ ಅವರು ತಮ್ಮ ಜನ್ಮದಿನದಂದು ಮೃತಪಟ್ಟ ಮೂವರು ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡ ಐವರು ಅಭಿಮಾನಿಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಿದ್ದರು. ಅಲ್ಲದೇ, ಆದ್ದರಿಂದ ನಮ್ಮ ಮೇಲೆ ಅಭಿಮಾನ ತೋರಿಸಲು ಹೋಗಿ, ನಿಮ್ಮ ಪ್ರಾಣಕ್ಕೂ, ನಿಮ್ಮ ಕುಟುಂಬಕ್ಕೂ ಹಾನಿ ಉಂಟು ಮಾಡಿಕೊಳ್ಳಬೇಡಿ. ಇದರಿಂದ ನಾವು ಖುಷಿಯಾಗಿರುವುದಿಲ್ಲ. ನಮ್ಮ ಮೇಲೆ ಪ್ರೀತಿ, ಗೌರವ ಇದ್ರೆ, ಮೊದಲು ನೀವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದಿದ್ದರು.

ಪ್ರಸಕ್ತ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನವನ್ನು ಗದಗ ನಗರದ ಬುದ್ದಿಮಾಂದ್ಯ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತಿದೆ. ಅಭಿಮಾನಿಗಳು ಅಂದಾಭಿಮಾನ ಪ್ರದರ್ಶಿಸಬಾರದು. ನಟ ಯಶ್ ಅವರು ಪ್ಲೆಕ್ಸ್, ಬ್ಯಾನರ್ ಹಾಕದಂತೆ ಮನವಿ ಮಾಡಿದ್ದಾರೆ.
– ಮಂಜುನಾಥ ದಾಮೋದರ, ಯಶ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಗದಗ

Advertisement

Udayavani is now on Telegram. Click here to join our channel and stay updated with the latest news.

Next