Advertisement

Huge Revenue: ಹೊಸ ವರ್ಷದ ಸಂಭ್ರಮ; ಅಬಕಾರಿ ಇಲಾಖೆಗೆ ಭರ್ಜರಿ ಆದಾಯ!

02:48 PM Jan 01, 2025 | Team Udayavani |

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯು ರಾಜ್ಯ ಸರಕಾರಕ್ಕೆ (ಅಬಕಾರಿ ಇಲಾಖೆ) ಭರ್ಜರಿ ಆದಾಯ ಹರಿದು ಬಂದಿದೆ. ಮಂಗಳವಾರ ಒಂದೇ ದಿನದಲ್ಲಿ ಕೆಎಸ್‌ಬಿಸಿಎಲ್‌ (ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ)ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ.

Advertisement

ಈ ಬಾರಿ ಅಬಕಾರಿ ಇಲಾಖೆ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ರಾಜ್ಯದಲ್ಲಿ ಡಿ.31ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದಲ್ಲೇ ಕೆಎಸ್‌ಬಿಸಿಎಲ್‌ಯಿಂದ ಬರೋಬ್ಬರಿ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 2023 ರ ಡಿ.31ರಂದು 193 ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತು. 2024 ಡಿ.31 ರಂದು 7,305 ಮದ್ಯ ಮಾರಾಟಗಾರರು ಕೆಎಸ್​ಬಿಸಿಎಲ್​​ನಿಂದ ಮದ್ಯ ಖರೀದಿ ಮಾಡಿದ್ದಾರೆ.

ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರುಪಾಯಿ ‌ಆದಾಯ ಸಂಗ್ರಹವಾಗಿದೆ.

ಎರಡು ದಿನ ಮೊದಲೇ ಸಂಗ್ರಹ ಆರಂಭ:
ಶುಕ್ರವಾರದಂದು (ಡಿ.27) ಕೂಡ ಬರೋಬ್ಬರಿ 408.58 ಕೋಟಿ ರುಪಾಯಿ ಮದ್ಯ ಮಾರಾಟವಾಗಿತ್ತು. ಐಎಂಎಲ್ 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327,50 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿತ್ತು. ಬಿಯರ್ 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80,58 ಕೋಟಿ ರುಪಾಯಿ ಆದಾಯ ಗಳಿಕೆಯಾಗಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು  10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರುಪಾಯಿ ಆದಾಯ ಹರಿದು ಬಂದಿತ್ತು.

ಹೊಸ ವರ್ಷ ಸ್ವಾಗತ, ಸಂಭ್ರಮಾಚರಣೆ:
ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಹೊಸ ವರ್ಷ ಆಚರಣೆ ಸಂಭ್ರಮದಿಂದ ನಡೆದಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಲಕ್ಷಾಂತರ ಮಂದಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಕೆಲವೆಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದ್ದು ಬಿಟ್ಟರೆ, ಒಟ್ಟಾರೆಯಾಗಿ ಹೊಸ ವರ್ಷದ ಸ್ವಾಗತ, ಸಂಭ್ರಮಾಚರಣೆ ಶಾಂತಿಯುತವಾಗಿ ನೆರವೇರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next