ದಾವಣಗೆರೆ: ಅಹಿಂದ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯ ಅವರೇ ಮುಂದಿನ ಮೂರುವರೆ ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 537ನೇ ದಾಸಶ್ರೇಷ್ಠ ಶ್ರೀಕನಕ ದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿ, ಮುಂದಿನ ಮೂರುವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರುವವರೆಗೆ ನಾವೆಲ್ಲರೂ ಸೇರಿ ಅವರ ಕೈ ಬಲ ಪಡಿಸಬೇಕು ಎಂದು ಮನವಿ ಮಾಡಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆಗೆ ಪುಷ್ಟಿ ನೀಡುವಂತೆ ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಿದ್ದರಾಮಯ್ಯ ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿರಬೇಕು. ಅವರು ಮುಖ್ಯಮಂತ್ರಿಯಾಗಿದ್ದರೆ ಎಲ್ಲರಿಗೂ ನೆಮ್ಮದಿ. ಹಾಗಾಗಿ ನಾವು ಅಂದರೆ ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳ ಸ್ವಾಮೀಜಿಯವರು ಸೇರಿ ಅವರಿಗೆ ಅನ್ನದಾತ, ಅಧಿಕಾರಭವ ಎಂಬ ಆಶೀರ್ವಾದ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.
ಸಿದ್ದರಾಮಯ್ಯ ಅವರ ಸಂಪುಟವೇ ಒಂದು ಅನುಭವ ಮಂಟಪದಂತೆ. ಅವರ ಸಂಪುಟದಲ್ಲಿ ಎಲ್ಲ ಜಾತಿ, ಧರ್ಮದವರು ಇರುತ್ತಾರೆ. ಸಿದ್ದರಾಮಯ್ಯ ಅವರು ದಲಿತರು, ಹಿಂದುಳಿದವರು, ಶೋಷಿತರ ಪರವಾಗಿ ಇದ್ದಾರೆ. ಹಾಗಾಗಿ ನಾವು ಅವರ ಪರವಾಗಿಯೇ ಇರುತ್ತೇವೆ. ಯಾರು ನಮ್ಮ ಪರವಾಗಿ ಇರುತ್ತಾರೆ. ಅವರ ಪರ ನಾವು ಇರುತ್ತೇವೆ ಎನ್ನುವ ಮೂಲಕ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್, ಭೋವಿ ಸಮಾಜದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತಿಗೆ ಪೂರಕ ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ನಾನು ಕನಕದಾಸರು, ಬಸವಣ್ಣ, ಬುದ್ಧ, ಗಾಂಧಿ, ಅಂಬೇಡ್ಕರ್, ನಾರಾಯಣ ಗುರೂಜಿ ಮುಂತಾದವರ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದಕ್ಕಾಗಿ ನಿಮ್ಮ ಎಲ್ಲರ ಬೆಂಬಲ ಇರಬೇಕು ಎಂದು ಮನವಿ ಮಾಡಿದರು.