ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದಿರುವ ಸ್ಥಿರತೆಯನ್ನು ಅನುಸರಿಸಿ ವಿದೇಶಿ ಹೂಡಿಕೆದಾರರು ಮುಂಚೂಣಿ ಶೇರುಗಳ ಭರಾಟೆಯ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 110 ಅಂಕಗಳ ಜಿಗಿತವನ್ನು ಸಾಧಿಸಿತು. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,400 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ನಿನ್ನೆ ಮಂಗಳವಾರದ ವಹಿವಾಟಿನಲ್ಲಿ 26.09 ಅಂಕಗಳ ನಷ್ಟವನ್ನು ಕಂಡಿದ್ದ ಸೆನ್ಸೆಕ್ಸ್ ಇಂದು ಬುಧವಾರ ಬೆಳಗ್ಗೆ 10.40ರ ಹೊತ್ತಿಗೆ 35.37 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,701.17 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 8.30 ಅಂಕಗಳ ಮುನ್ನಡೆಯೊಂದಿಗೆ 11,397.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬಜಾಜ್ ಫಿನಾನ್ಸ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಎಸ್‌ಬಿಐ, ರಿಲಯನ್ಸ್ ಶೇರುಗಳು ಇಂದು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಾಟಾ ಸ್ಟೀಲ್, ಬಜಾಜ್ ಫಿನಾನ್ಸ್, ರಿಲಯನ್ಸ್, ಬಜಾಜ್ ಫಿನ್ ಸರ್ವ್, ಎಸ್ ಬಿ ಐ; ಟಾಪ್ ಲೂಸರ್‌ಗಳು : ಭಾರ್ತಿ ಏರ್‌ಟೆಲ್ , ಎಚ್‌ಪಿಸಿಎಲ್, ಎಚ್‌ಸಿಎಲ್ ಟೆಕ್, ವಿಪ್ರೋ, ಮಾರುತಿ ಸುಜುಕಿ.
ಡಾಲರ್ ಎದುರು ರೂಪಾಯಿ ಇಂದು 6 ಪೈಸೆಯಷ್ಟು ಚೇತರಿಸಿಕೊಂಡು 68.62 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.