ಕಾಸರಗೋಡು: ಪೆರಿಯ ಕಲ್ಯೋಟ್ನಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣದಲ್ಲಿ 10 ಮಂದಿಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಿ ಕೊಚ್ಚಿಯ ಪ್ರತ್ಯೇಕ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಇತರ ನಾಲ್ವರಿಗೆ ಐದು ವರ್ಷ ಸಜೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ಸಿ.ಪಿ.ಎಂ. ಕಾರ್ಯಕರ್ತರಾದ ಎ. ಪೀತಾಂಬರನ್, ಸಜಿ ಯಾನೆ ಸಜಿ ಸಿ. ಜಾರ್ಜ್, ಕೆ.ಎಂ. ಸುರೇಶ, ಅಬು ಯಾನೆ ಕೆ. ಅನಿಲ್ ಕುಮಾರ್, ಜಿಜಿನ್, ಕುಟ್ಟು ಯಾನೆ ಆರ್ ಶ್ರೀರಾಗ್, ಅಪ್ಪು ಯಾನೆ ಎ. ಅಶ್ವಿನ್, ಮಣಿ ಯಾನೆ ಸುಭಾಷ್, ಅಪ್ಪು ಯಾನೆ ಟಿ. ರಂಜಿತ್, ವಿಷ್ಣು ಸುರ ಯಾನೆ ಸುರೇಂದ್ರನ್ಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದೆ.
14ನೇ ಆರೋಪಿ ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, 20ನೇ ಆರೋಪಿ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್, 21ನೇ ಆರೋಪಿ ರಾಘವನ್ ನಾಯರ್ ವೆಳುತ್ತೋಳಿ, 22ನೇ ಆರೋಪಿ ಕೆ.ವಿ. ಭಾಸ್ಕರನ್ಗೆ 5 ವರ್ಷಗಳ ಸಜೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ವಿಶೇಷ ನ್ಯಾಯಾಧೀಶ ಜ| ಶೇಷಾದ್ರಿ ನಾಥನ್ ಅವರು ಶುಕ್ರವಾರ ಮಧ್ಯಾಹ್ನ ಶಿಕ್ಷೆ ಘೋಷಿಸಿದರು. ದಂಡದ ಮೊತ್ತವನ್ನು ಮೃತ ಶರತ್ಲಾಲ್ ಹಾಗೂ ಕೃಪೇಶ್ ಅವರ ಮನೆಯವರಿಗೆ ನೀಡುವಂತೆ ನ್ಯಾಯಾಲಯ ತಿಳಿಸಿದೆ. ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳಿದ್ದು, 10 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
2019 ಫೆಬ್ರವರಿ 17ರಂದು ರಾತ್ರಿ 7.30ಕ್ಕೆ ಪೆರಿಯ ಬಳಿಯ ಕಲ್ಯೋಟ್ ಕುರಂಗರ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ಲಾಲ್ ಮತ್ತು ಕೃಪೇಶ್ ಅವರನ್ನು ತಡೆದು ನಿಲ್ಲಿಸಿ ಕಡಿದು ಕೊಲೆಗೈಯಲಾಗಿತ್ತು. ಆರಂಭದಲ್ಲಿ ಬೇಕಲ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಕ್ರೈಂಬ್ರಾಂಚ್ಗೆ ವಹಿಸಲಾಗಿದ್ದರೂ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಕೊಲೆಯಾದವರ ಕುಟುಂಬ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಅದರಂತೆ ಸಿಬಿಐ ಡಿವೈಎಸ್ಪಿ ಟಿ.ಪಿ. ಅನಂತಕೃಷ್ಣನ್ ನೇತೃತ್ವದ ತಂಡ ತನಿಖೆ ನಡೆಸಿ 2021 ಡಿ. 3ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2023ರ ಫೆ. 2ರಿಂದ ಕೊಚ್ಚಿ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು. 292 ಮಂದಿ ಸಾಕ್ಷಿಗಳ ಪೈಕಿ 154 ಮಂದಿಯ ವಿಚಾರಣೆ ನಡೆದು 20 ತಿಂಗಳ ಬಳಿಕ ತೀರ್ಪು ನೀಡಿದೆ.