ಬೆಂಗಳೂರು: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕನ್ನಡ ಕಲಿತಿದ್ದಾರೆ. ಇವರ ಕನ್ನಡ ಮೇಲಿನ ಪ್ರೀತಿಗೆ ಕಾರಣ ವಿಕ್ರಾಂತ್ ರೋಣ.
ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣ ಸಿನಿಮಾದಲಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಒಂದು ಸಾಂಗ್ ಹಾಗೂ ಕೆಲವೊಂದಿಷ್ಟು ದೃಶ್ಯಗಳಿಗೆ ಈ ಬೆಡಗಿ ಬಣ್ಣ ಹಚ್ಚಿದ್ದಾರೆ. ತಮ್ಮ ಪಾತ್ರದ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿರುವ ಅವರು ಇದೀಗ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.
ಈ ಬಗ್ಗೆ ನಾಯಕ ನಟ ಸುದೀಪ್ ಸೇರಿದಂತೆ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಾಕ್ವೆಲಿನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ ತಮ್ಮ ಪಾತ್ರಕ್ಕಾಗಿ ಕನ್ನಡ ಕಲಿತು ಡೈಲಾಗ್ ಡೆಲಿವರಿ ಮಾಡಿರುವ ಜಾಕ್ವೆಲಿನ್ ಅವರ ಬಗ್ಗೆ ನಿರ್ದೇಶಕರು ಗೌರವಯುತ ಮಾತುಗಳನ್ನಾಡಿದ್ದಾರೆ. ಡಬ್ಬಿಂಗ್ ನಲ್ಲಿ ಮತ್ತೆ ಸಿಗೋಣ ಎಂದು ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.
ಇನ್ನು ಸುದೀಪ್ ಕೂಡ ಟ್ವೀಟ್ ಮಾಡಿದ್ದು, ‘ಸಿನಿಮಾದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿ ಹಾಡಿಗೆ ಇನ್ನಷ್ಟು ಎನರ್ಜಿಯನ್ನು ತಂದುಕೊಟ್ಟಿರುವುದಕ್ಕೆ ಧನ್ಯವಾದಗಳು. ನೀವು ಡಾನ್ಸ್ ಮಾಡುವುದನ್ನು ನೋಡಿ ನನಗೂ ಡಾನ್ಸ್ ಮಾಡಲು ಪ್ರೇರಣೆ ಸಿಕ್ಕಿದೆ. ನಮ್ಮ ಚಿತ್ರದಲ್ಲಿ ನೀವು ಭಾಗಿಯಾಗಿರುವುದಕ್ಕೆ ಧನ್ಯವಾದಗಳು ಜಾಕ್ವೆಲಿನ್ ಎಂದಿದ್ದಾರೆ.
ಸಿನಿಮಾ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಜಾಕ್ವೆಲಿನ್, ವಿಕ್ರಾಂತ್ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಪ್ರಯತ್ನವಾಗಿದೆ. ನಾನು ಈ ಸಿನಿಮಾ ಭಾಗವಾಗಿದ್ದು ಖುಷಿಯ ವಿಚಾರವಾಗಿದೆ. ಸಿನಿಮಾದಲ್ಲಿ ನಾನು ಇರುವ ದೃಶ್ಯಗಳು ಮತ್ತು ಹಾಡು ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ.
ವಿಕ್ರಾಂತ್ ರೋಣ ಈ ಹಾಡಿಗೆ ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅದ್ಭುತವಾದ ಸೆಟ್ ಹಾಕಿದ್ದರು. 250 ಮಂದಿ ನೃತ್ಯ ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ಕೊರಿಯಾಗ್ರಾಫರ್ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಜಾಕ್ವೆಲಿನ್ ಹಾಡಿನ ಜತಗೆ ಒಂದಷ್ಟು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಜಾಕ್ ಮಂಜು ಹೇಳಿದ್ದಾರೆ.