Advertisement

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

02:55 PM Jan 03, 2025 | Team Udayavani |

ನಮ್ಮ ಸಿನಿಮಾ ಅದ್ಭುತ ಎಂದು ಬೆನ್ನುತಟ್ಟಿಕೊಂಡು ಊರೆಲ್ಲಾ ಸುತ್ತಾಡಿದರೂ ಅಂತಿಮವಾಗಿ ಆ ಚಿತ್ರದ ಫ‌ಲಿತಾಂಶ ಬರೆಯುವವನು ಪ್ರೇಕ್ಷಕ ಮಾತ್ರ. ಅದೇ ಕಾರಣಕ್ಕೆ ಸಿನಿಮಾದಲ್ಲಿ ಗೆಲುವು ಅನ್ನೋದು “ಸಸ್ಪೆನ್ಸ್‌-ಥ್ರಿಲ್ಲರ್‌’ ಸಿನಿಮಾದಂತೆ. ನೀವು 100 ಕೋಟಿ ಸಿನಿಮಾ ಎಂದು ಖುಷಿಯಿಂದ ರಿಲೀಸ್‌ ಮಾಡಿದ ಚಿತ್ರವನ್ನು ಮಧ್ಯಾಹ್ನದ ಪ್ರದರ್ಶನದ ವೇಳೆಗೆ ಸೈಲೆಂಟಾಗಿ ಸೈಡಿಗೀಡುವ ಸಾಮರ್ಥ್ಯ ಇರುವುದು ಪ್ರೇಕ್ಷಕನಿಗೆ ಮಾತ್ರ. ನಮ್ಮದು ಚಿಕ್ಕ ಸಿನಿಮಾ ಎಂದು ಭಯ ಭಯದಲ್ಲೇ ಬಿಡುಗಡೆ ಮಾಡಿದ ಅದೆಷ್ಟೋ ಸಿನಿಮಾಗಳನ್ನು ವಿಶ್ವ ತಿರುಗಿ ನೋಡುವಂತೆ ಎತ್ತಿ ಹಿಡಿಯುವುದು ಕೂಡಾ ಇದೇ ಪ್ರೇಕ್ಷಕ ಮಹಾಪ್ರಭು.

Advertisement

ಈಗ ಹೊಸ ವರ್ಷ ಬಂದಿದೆ. ಸಾಲು ಸಾಲು ಸಿನಿಮಾಗಳು ರೆಡಿಯಾಗಿವೆ. ಇನ್ನೊಂದಿಷ್ಟು ಸಿನಿಮಾಗಳು ಶೂಟಿಂಗ್‌ಗೆ ಹೊರಡಲು ಮುಹೂರ್ತವಿಟ್ಟಾಗಿದೆ. ಈ ವರ್ಷ ಪ್ರೇಕ್ಷಕ ಸಿನಿಮಾ ಮಂದಿಯಿಂದ ಏನು ಬಯಸುತ್ತಾನೆ, ಸಿನಿಮಾದವರ ಪ್ಲ್ರಾನ್‌ ಹೇಗಿರಬೇಕು, ಕಥೆ, ಮೇಕಿಂಗ್‌, ಪ್ರಚಾರ… ಹೀಗೆ ಅನೇಕ ವಿಚಾರದ ಬೇರೆ ಬೇರೆ ಕ್ಷೇತ್ರದ ಸಿನಿಮಾ ಅಭಿಮಾನಿಗಳು ಮಾತನಾಡಿದ್ದಾರೆ. ಇವರ್ಯಾರು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿವರು ಅಲ್ಲ. ಆದರೆ, ಕಾಸು ಕೊಟ್ಟು ಸಿನಿಮಾ ನೋಡಿ ಖುಷಿಯಾದರೆ ಜೈ ಅನ್ನುವ, ಚೆನ್ನಾಗಿಲ್ಲ ಎಂದಾದರೆ ರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನ್ನುವ ಖಡಕ್‌ ಮಂದಿ ಇವರು.

ಈ ವರ್ಷದ ಮೊದಲ ಸುಚಿತ್ರಾ ಸಿನಿಮಾ ಪುರವಣಿಯಲ್ಲಿ ಅವರ ಅನಿಸಿಕೆ ಹಂಚಿಕೊಳ್ಳಲಾಗಿದೆ. ಇವರ ಮಾತುಗಳು ಸಿನಿಮಾ ಮಂದಿಗೆ ಒಂದೊಳ್ಳೆಯ ಸಲಹೆಯಾಗಬಹುದು.

ಫ್ಯಾಮಿಲಿ ಆಡಿಯನ್ಸ್‌ನ ಮರೆಯಬೇಡಿ..

ಪುನೀತ್‌ ರಾಜ್‌ಕುಮಾರ್‌ ಅವರ ಸಿನಿಮಾ ಬರುತ್ತದೆ ಎಂದಾಗ ನಾವೆಲ್ಲ ಮನೆಮಂದಿ ಧೈರ್ಯವಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತಿದ್ದೆವು. ಅದಕ್ಕೆ ಕಾರಣ ಫ್ಯಾಮಿಲಿ ಕಂಟೆಂಟ್‌. ಆದರೆ, ಇತ್ತೀಚೆಗೆ ಫ್ಯಾಮಿಲಿ ಮಂದಿ ಖುಷಿಯಿಂದ ನೋಡುವ ಸಿನಿಮಾಗಳು ಕಡಿಮೆಯಾಗಿವೆ. ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂಬ ಬಯಕೆ ಕಡಿಮೆಯಾಗುತ್ತಿದೆ. ಹಾಗಾಗಿ, ಕುಟುಂಬ ಸಮೇತ ನೋಡುವ ಸಿನಿಮಾಗಳತ್ತ ಹೆಚ್ಚು ಗಮನಹರಿಸಬೇಕು. ಆಗ ಮಾತ್ರ ಫ್ಯಾಮಿಲಿ ಸೆಳೆಯಲು ಸಾಧ್ಯ. ಒಂದು ಸಿನಿಮಾದ ಗೆಲುವಿನಲ್ಲಿ ನಮ್ಮಂತಹ ಈ ವರ್ಗದ ಪ್ರೇಕ್ಷಕರ ಪಾಲು ದೊಡ್ಡದಿದೆ. ಈ ನಿಟ್ಟಿನಲ್ಲಿ ಸಿನಿಮಾ ಮಂದಿ ಗಮನ ಹರಿಸಬೇಕು.-  ಮಂಜುಳಾ, ಗೃಹಿಣಿ

Advertisement

ಹಾರರ್‌ ಅಂದ್ರೆ ಕೇವಲ ಸೌಂಡ್‌ ಎಫೆಕ್ಟ್ ಅಲ್ಲ..

ನನಗೆ ಹಾರರ್‌ ಸಿನಿಮಾಗಳೆಂದರೆ ಇಷ್ಟ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಹಾರರ್‌ ಸಿನಿಮಾಗಳು ನನ್ನ ನಿರೀಕ್ಷೆಯ ಮಟ್ಟ ತಲುಪಲೇ ಇಲ್ಲ. ಹಾರರ್‌ ಎಂದರೆ ಜೋರಾಗಿ ಗಾಳಿ ಬೀಸುವುದು, ಕಿಟಕಿ, ಬಾಗಿಲುಗಳು ಜೋರಾಗಿ ಬೀಳುವುದು, ಯಾರೋ ಓಡಾಡಿದಂತೆ, ಕಿರುಚಿದಂತೆ ಭಾಸವಾಗುವುದು.. ಇಷ್ಟಕ್ಕೇ ಹಾರರ್‌ ಸಿನಿಮಾಗಳನ್ನು ಸೀಮಿತ ಮಾಡುತ್ತಿದ್ದಾರೇನೋ ಅನಿಸಿತು. ಹಾರರ್‌ ಸಿನಿಮಾದಲ್ಲಿ ಕಥೆ ಇಲ್ಲದೇ ಬೇರೆ ಏನೇನೋ ಸೌಂಡ್‌ ಎಫೆಕ್ಟ್$Õ ಕೊಡುವುದರಲ್ಲೇ ಹಾರರ್‌ ಸಿನಿಮಾ ಮುಗಿಸುತ್ತಿದ್ದಾರೆ. ಇವತ್ತಿಗೂ “ನಾ ನಿನ್ನ ಬಿಡಲಾರೆ’ ಸೇರಿದಂತೆ ಒಂದಷ್ಟು ಹಾರರ್‌ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಆ ಸಿನಿಮಾಗಳಲ್ಲಿ ಇದ್ದ ಗಟ್ಟಿ ಕಥೆ. ಹಾಗಾಗಿ, ಹೊಸದಾಗಿ ಹಾರರ್‌ ಸಿನಿಮಾ ಮಾಡುವವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. -ಚಿರಾಗ್‌, ಅಕೌಂಟೆಂಟ್‌

ಪ್ಯಾನ್‌ ಮಟ್ಟದಲ್ಲಿ ಕಳೆದುಹೋಗಬೇಡಿ

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಪ್ಯಾನ್‌ ಇಂಡಿಯಾ ಕ್ರೇಜ್‌ ಹೆಚ್ಚಿದೆ. ಅದೇ ಕಾರಣದಿಂದ ನಮ್ಮ ಕನ್ನಡದ ನೇಟಿವಿಟಿ ಕಡಿಮೆಯಾಗುತ್ತಿದೆ. ನನ್ನ ಪ್ರಕಾರ, ಸಿನಿಮಾವೊಂದು ಪ್ಯಾನ್‌ ಇಂಡಿಯಾ ಆಗಬೇಕೇ ಹೊರತು ಬಲವಂತವಾಗಿ ನಾವು ಮಾಡುವುದಲ್ಲ. ಇದಕ್ಕೆ ಒಳ್ಳೆಯ ಉದಾಹರಣೆ “ಕಾಂತಾರ’. ಆದರೆ, ಇತ್ತೀಚೆಗೆ ಪ್ಯಾನ್‌ ಇಂಡಿಯಾ ಅಮಲಿನಲ್ಲಿ ಕಂಟೆಂಟ್‌ ಮರೆಯುತ್ತಿದ್ದಾರೆ. ಎಲ್ಲಾ ಭಾಷೆಗೆ ಸಲ್ಲಬೇಕು ಎಂಬ ಅತ್ಯುತ್ಸಹಾಯದಲ್ಲಿ ಮೂಲ ಕಂಟೆಂಟ್‌ನ “ಫೋಕಸ್‌’ ಮಿಸ್‌ ಆಗುತ್ತಿದೆ. ಇದರಿಂದ ಸ್ಯಾಂಡಲ್‌ವುಡ್‌ಗೆ ಪ್ಯಾನ್‌ ಇಂಡಿಯಾದಲ್ಲಿ ಸೋಲುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಮೊದಲು ನಮ್ಮ ಮನೆ ದೇವ್ರಿಗೆ ಪೂಜೆ ಮಾಡುವ, ಆ ಬಳಿಕ ಜಾತ್ರೆ ಮಾಡಿದರೆ ಒಳ್ಳೆಯದು ಎನ್ನುವುದು ನನ್ನ ಅನಿಸಿಕೆ.- ನಿಶಾಂತ್‌ ಬಿ.ಆರ್‌. ಸರ್ಕಾರಿ ನೌಕರ

ಫಿಲಾಸಫಿ ಬೇಡ, ಮನರಂಜನೆ ಸಾಕು..

ಪ್ರೇಕ್ಷಕರಾದ ನಾವು ಸಿನಿಮಾಕ್ಕೆ ಬರುವ ಉದ್ದೇಶ ಮನರಂಜನೆ. ನಮ್ಮ ಕಾಸು-ಸಮಯವನ್ನು ಕೊಡುವುದು ನಮ್ಮ ಮನಸ್ಸಿನ ನೆಮ್ಮದಿಗಾಗಿ. ಆದರೆ, ಕೆಲವು ಸಿನಿಮಾಗಳು ಅತಿಯಾದ ಬೋಧನೆ, ಫಿಲಾಸಫಿ ಮೂಲಕ ನಮ್ಮ ಕಾಸು-ಕನಸು ಎರಡನ್ನೂ ಹಾಳು ಮಾಡುತ್ತವೆ. ಬೋಧನೆ, ಬುದ್ಧಿವಾದ, ಫಿಲಾಸಫಿ ಹೇಳಲು, ಕೇಳಲು ಬೇರೆ ಬೇರೆ ಜಾಗಗಳಿವೆ. ನನ್ನ ಪ್ರಕಾರ, ಸಿನಿಮಾ ಎನ್ನುವುದು ಮನರಂಜನೆ. ಮೊದಲು ಅದನ್ನು ನೀಡಲು ಪ್ರಯತ್ನಿಸಿ. ಅದು ಬಿಟ್ಟು ನಿಮ್ಮ ಚಿಂತನೆಗಳನ್ನು ಪ್ರೇಕ್ಷಕರ ಮೇಲೆ ಹೇರಲು ಪ್ರಯತ್ನಿಸಬೇಡಿ. ಅಪ್ಪಟ ಮನರಂಜನೆಗೆ ಮೊದಲ ಆದ್ಯತೆ ಇರಲಿ. – ಸಂತೋಷ್‌, ಆಟೋ ಚಾಲಕ

ಪಬ್ಲಿಸಿಟಿಯಲ್ಲಿ ಫೇಲಾಗದಿರಿ…

ಸಿನಿಮಾ ಮಾಡುವ ಮೊದಲು ವರ್ಷಗಟ್ಟಲೇ ಕುಳಿತು ಸ್ಕ್ರಿಪ್ಟ್ ಮಾಡುವ, ಚರ್ಚಿಸುವ ಸಿನಿಮಾ ಮಂದಿ ಸಿನಿಮಾ ಬಿಡುಗಡೆ ವೇಳೆಗೆ ಎಡವುತ್ತಾರೆ. ಅದರಲ್ಲೂ ಪ್ರಚಾರದಲ್ಲಿ ತುಂಬಾ ಹಿಂದೆ ಬೀಳುತ್ತಿದ್ದಾರೆ. ಇವತ್ತು ಅನೇಕ ಒಳ್ಳೆಯ ಸಿನಿಮಾಗಳು ಸೋಲಲು ಇದೇ ಕಾರಣ. ಪ್ರಚಾರಕ್ಕೊಂದು ಸೂಕ್ತ ಬಜೆಟ್‌, ಯೋಜನೆ ಇರಲಿ. ಆಟೋ, ಕಾಂಪೌಂಡ್‌ ಮೇಲೆ ಸಿನಿಮಾ ಪೋಸ್ಟರ್‌ ಅಂಟಿಸಿ, ಟೀಸರ್‌, ಟ್ರೇಲರ್‌ ಬಿಟ್ಟರಷ್ಟೇ ಪ್ರಚಾರ ಎಂಬಂತಿದೆ. ಮುಹೂರ್ತದ ವೇಳೆ ಹೀಗೊಂದು ಸಿನಿಮಾ ಬರುತ್ತದೆ ಎಂದು ಕಾಯ್ದುಕೊಂಡಿರುವ ನಾವು ಆ ಸಿನಿಮಾ ಡುಗಡೆಯಾಗಿರುವುದು ಮಾತ್ರ ನಮಗೆ ಗೊತ್ತೇ ಆಗುವುದಿಲ್ಲ. ಈ ತರಹದ ಪ್ರಚಾರದಿಂದ ಸಿನಿಮಾ ಮಂದಿಯ ಕಾಸು-ಕನಸು ಎರಡೂ ವ್ಯರ್ಥ. – ಸುನೀಲ್‌, ಟೆಕ್ಕಿ

ಹೀರೋಗಾಗಿ ಕಥೆ ಬೇಡ

ಮೊದಲೆಲ್ಲ ಸಿನಿಮಾ ಕಥೆಗಳಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಹೀರೋ ನಟಿಸುತ್ತಿದ್ದರು. ಆದರೆ, ಈಗ ಹೀರೋಗಾಗಿಯೇ ಕಥೆ ಬರೆಯುವುದು ಟ್ರೆಂಡ್‌ ಆಗಿದೆ. ಅವರ ಅನವಶ್ಯಕ ಬಿಲ್ಡಪ್‌ಗ್ಳು ಬೇಡ. ಇದರಾಚೆಗೆ ಚಿತ್ರರಂಗ ಯೋಚಿಸಬೇಕು. ಈಗ ಕಥೆ ಅಷ್ಟೇ ಅಲ್ಲ, ಚಿತ್ರಕಥೆ, ನಿರೂಪಣೆ, ತಾಂತ್ರಿಕ ಅಂಶಗಳು ಎಲ್ಲವನ್ನೂ ಜನ ಗಮನಿಸುತ್ತಾರೆ. ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಜತೆಗೆ ನೈಜ ಘಟನೆ, ಕಾದಂಬರಿ ಆಧಾರಿತ ಚಿತ್ರಗಳು ಹೆಚ್ಚಾಗಿ ಬರಬೇಕು.- ಮಲ್ಲಿಕಾರ್ಜುನ ಶಿವಳ್ಳಿ, ರೈತ

ಕಥೆಯಲ್ಲಿ ನೈಜತೆ ಇರಲಿ

ಕಥೆಗಾರರು, ನಿರ್ದೇಶಕರು ತಮ್ಮ ಅನುಭವದ ಆಧಾರದ ಮೇಲೆ ಕಥೆ ಬರೆದಾಗ ನಮಗೂ ಅದು ನಮಗೂ ಕನೆಕ್ಟ್ ಆಗುತ್ತೆ. ನಮ್ಮ ನೆಲದ ಕಥೆಗಳು ಇದ್ದಾಗ, ಅದು ಹೆಚ್ಚು ಜನರಿಗೆ ತಲುಪುತ್ತೆ. ಸಾಹಿತ್ಯ, ಕಾದಂಬರಿಯ ಕಥೆ ಇರುವ, ಸಾಮಾನ್ಯರ ಕಥೆಗಳಿಗೆ, ಅವರ ಮನಸ್ಸಿನಲ್ಲಿರುವ ಭಾವನೆಗಳಿಗೆ ಕನ್ನಡಿ ಹಿಡಿಯುವ ಹಾಗೆ ಕನ್ನಡ ಸಿನಿಮಾಗಳು ಬರಬೇಕು. -ತನ್ಮಯಿ ಪ್ರೇಮಕುಮಾರ್‌, ಲೇಖಕಿ

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next