ಮಂಗಳೂರು: ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯು ವಿನಾ ಕಾರಣ ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಕೇಳುವ ಮೂಲಕ ಕಾಂಗ್ರೆಸ್‌ನ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಕೇಂದ್ರದ ಕೆಲವು ಸಚಿವರ ವಿರುದ್ಧವೂ ಎಫ್‌ಐಆರ್ ದಾಖಲಾದ್ದು, ಅವರು ಸಚಿವರ ಸ್ಥಾನದಲ್ಲಿ ಮುಂದುವರಿದಿರುವಾಗ ಬಿಜೆಪಿಗೆ ಜಾರ್ಜ್ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು, ಗಣಪತಿ ಸಾವಿನ ಕುರಿತು ಸಿಒಡಿ ತನಿಖೆಯ ವೇಳೆ ರಾಜೀನಾಮೆ ನೀಡಿದ್ದ ಜಾರ್ಜ್ ಅವರು, ತಪ್ಪಿತಸ್ಥರು ಅಲ್ಲ ಎಂದು ವರದಿ ಬಂದ ಬಳಿಕ ಮತ್ತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಈಗ ಸಿಬಿಐ ಎಫ್‌ಐಆರ್ ದಾಖಲಿಸಿದ ತತ್‌ಕ್ಷಣ ರಾಜೀನಾಮೆ ಕೊಡಬೇಕೆಂದಿಲ್ಲ ಎಂದರು.
ಹಿಂದೆ ಸಿಬಿಐ ಮೇಲೆ ಬಿಜೆಪಿಗೆ ನಂಬಿಕೆ ಇರಲಿಲ್ಲ. ಈಗ ಕಾಂಗ್ರೆಸ್ ಸಚಿವರ ವಿರುದ್ಧ ಆದಾಯ ತೆರಿಗೆ ದಾಳಿಯಂತಹ ತಂತ್ರಗಾರಿಕೆ ಮೂಲಕ ಅಧಿಕಾರ ದುರುಪಯೋಗ ಮಾಡುತ್ತಿದೆ. ಬಳ್ಳಾರಿಯಲ್ಲಿ ಶೇ. 60 ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ್ದ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳನ್ನು ಈಗ ಸಡಿಲಿಕೆ ಮಾಡಲಾಗಿದೆ. ಈ ಕುರಿತು ಬುದ್ಧಿವಂತ ಜನತೆ ತಿಳಿದುಕೊಳ್ಳಬೇಕು ಎಂದು ರೈ ಹೇಳಿದರು.
ಬಿಜೆಪಿಯಿಂದ ಸಾವಿರ ಸುಳ್ಳು
ಪ್ರಸ್ತುತ ಜಿಎಸ್‌ಟಿ ಜಾರಿಯಲ್ಲಿ ತೊಂದರೆ ಇದೆ ಎಂದು ತಿಳಿದಾಗ ಅದರಲ್ಲಿ ಕಾಂಗ್ರೆಸ್‌ನ ಪಾತ್ರವೂ ಇದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಹಿಂದೆ ಕಾಂಗ್ರೆಸ್ ಜಿಎಸ್‌ಟಿ ಯಲ್ಲಿ ಶೇ. 18 ತೆರಿಗೆ ವಿಧಿಸಲು ನಿರ್ಧರಿಸಿದ್ದು, ಪ್ರಸ್ತುತ ಅದನ್ನು ಶೇ. 28ಕ್ಕೆ ಏರಿಸಲಾಗಿದೆ. ಪ್ರಜಾತಾಂತ್ರಿಕ ವ್ಯವಸ್ಥೆ ಮೂಲಕ ಗೆಲ್ಲಲು ಸಾಧ್ಯವಾಗದ ಬಿಜೆಪಿ ಪ್ರಸ್ತುತ ಸಾವಿರ ಸುಳ್ಳು ಹೇಳಿ ಪಕ್ಷ ಕಟ್ಟುವ ಪ್ರಯತ್ನ ಮಾಡುತ್ತಿದೆ.
ಕಲ್ಲಡ್ಕದ ಶಾಲೆಯು ಅನುದಾನಿತ ಶಾಲೆಯಾಗಿದ್ದು, ಅದಕ್ಕೆ ಬಿಸಿಯೂಟ ಯೋಜನೆ ನೀಡಲು ಅವಕಾಶವಿದೆ. ದೇವಸ್ಥಾನದ ಪರಿಸರದ ಶಾಲೆಗಳಿಗೆ ಊಟ ನೀಡು ವುದು ಸರಿಯಾದ ಕ್ರಮ. ಆದರೆ 150 ಕಿ.ಮೀ. ದೂರದ ದೇವಸ್ಥಾನದಿಂದ ಊಟಕ್ಕೆ ಅನುದಾನ ನೀಡು ವುದು ಅಧಿಕಾರದ ದುರುಪಯೋಗವಾಗಿದೆ. ಟಿಪ್ಪು ಜಯಂತಿ ಯಲ್ಲಿ ಭಾಗವಹಿಸಲು ಇಷ್ಟವಿಲ್ಲದವರು ದೂರ ನಿಲ್ಲಲಿ. ಅದನ್ನು ಬಿಟ್ಟು ಕೋಮು ಗಲಭೆಯನ್ನು ಸೃಷ್ಟಿಸದಿರಲಿ. ಈ ವೇಳೆ ಅಹಿತಕರ ಘಟನೆಗೆ ಕಾರಣವಾಗುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ರೈ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಬಿ.ಎಚ್. ಖಾದರ್, ಪಿ.ವಿ. ಮೋಹನ್, ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಪ್ರತಿಭಾ ಕುಳಾ, ಶ್ಯಾಲೆಟ್ ಪಿಂಟೊ, ಅಪ್ಪಿ, ಆರ್.ಕೆ. ಪೃಥ್ವಿರಾಜ್, ವಿಶ್ವಾಸ್ ಕುಮಾರ್, ಪುರುಷೋತ್ತಮ ಚಿತ್ರಾಪುರ, ಸಂತೋಷ್ ಕುಮಾರ್ ಶೆಟ್ಟಿ, ಸಲೀಂ ಉಪಸ್ಥಿತರಿದ್ದರು.