ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆ ( ಮಂಡ್ಯ):ಗಂಡ ಗದ್ಯ. ಹೆಂಡತಿ ಪದ್ಯ ಮಕ್ಕಳು ರಗಳೆ. ಈ ಸಂಸಾರದ ಜಂಜಡದ ನಡುವೆ ನಗುವೇ ಔಷಧಿ. ಮನುಷ್ಯ ಮನುಷ್ಯರನಡುವಿನ ಸಂಬಂಧ ಗಟ್ಟಿಗೊಳಿಸುವಲ್ಲಿ ಹಾಸ್ಯ ಪ್ರಮುಖವಾದ ಕೆಲಸ ಮಾಡುತ್ತದೆ ಎಂದು ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ಅಭಿಪ್ರಾಯಪಟ್ಟರು.
ಸಮಾನಾಂತರ ವೇದಿಕೆ-1ರಲ್ಲಿ ನಡೆದ ಸಂಕೀರ್ಣ ನೆಲೆಗಳು ಕುರಿತ ಗೋಷ್ಟಿಯಲ್ಲಿ ಹಾಸ್ಯಸಾಹಿತ್ಯ ಕುರಿತು ವಿಚಾರಮಂಡಣೆ
ಮಾಡಿದ ಅವರು,ಹಾಸ್ಯ ಸಾಹಿತ್ಯ ಬುದ್ದಿಗೆ ಪ್ರೇರಣೆ ನೀಡುವ ಜೊತೆಗೆ ಮನಸ್ಸಿಗೆ ರಂಜನೆಯನ್ನೂ ನೀಡುತ್ತದೆ. ಸಮಾಜ ಸುಧಾರಣೆಯ ಕೆಲಸವನ್ನೂ ಮಾಡುತ್ತದೆ ಹಾಸ್ಯ ಬದುಕಿನಲ್ಲಿ, ಸಾಹಿತ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು
ತಿಳಿಸಿದರು.
ಗೋಷ್ಟಿಯಲ್ಲಿ ಆಶಯ ನುಡಿಗಳನ್ನಾಡಿದ ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪಮಾಳಗಿ, ಜಾಗತೀಕರಣದ ಯುಗದಲ್ಲಿ ಅನುವಾದ ಸಾಹಿತ್ಯ ಮತ್ತು ವಿಮರ್ಶೆ ಸಾಹಿತ್ಯ ಸಮಕಾಲೀನ ವೈವಿಧ್ಯಮಯವಾಗಿ ನಡೆಯುತ್ತಿದೆ. ಸಾಹಿತ್ಯದ ವಿಸ್ತೀರ್ಣತೆಯೇ ಸಾಹಿತ್ಯದ ಸಂಕೀರ್ಣತೆಯೂ ಹೌದಾಗಿದೆ. ವಿಮರ್ಶೆ ಎಂಬುದು ಎಲ್ಲಾ ಕಾಲಕ್ಕೂ ಪ್ರಸ್ತುತ ಮತ್ತು ಸಾರ್ವಕಾಲಿಕವಾಗಿದೆ ಮತ್ತು ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಒಂದು ಔಷಧೀಯಾಗಿದೆ ಎಂದು ಬಣ್ಣಿಸಿದರು.
ಮೂಲಕ್ಕೆ ಧಕ್ಕೆಯಾಗದಂತೆ ಅನುವಾದಿಸಬೇಕು: ಭಾಷೆಯ ಬೆಳವಣಿಗೆಯಲ್ಲಿ ಅನುವಾದ ಸಾಹಿತ್ಯ ಪ್ರಮುಖವಾಗಿದೆ. ಕಥೆ, ಕವಿತೆಗಳನ್ನು ಅನುವಾದ ಮಾಡುವಾಗ ಕೃತಿ ಮತ್ತು ಕರ್ತೃವಿನ ಮೂಲ ಆಶಯಗಳಲ್ಲಿ ಧಕ್ಕೆ ಬರದ ಹಾಗೆ ದ್ವಿಭಾಷಾ ಜ್ಞಾನ ಪಡೆದುಕೊಂಡ ಅನುವಾದ ಮಾಡಬೇಕು ಎಂದು ಅನುವಾದ ಸಾಹಿತಿ ಡಾ. ಕೆ. ಮಲರ್ ವಿಳಿ ತಿಳಿಸಿದರು. ಸಾಹಿತ್ಯ ವಿಮರ್ಶೆಯ ದಿಕ್ಕಿನ ಬಗ್ಗೆ ಡಾ.ಶಿವಾನಂದ ವಿರಕ್ತಮಠ ಮಾತನಾಡಿದರು.