ಬೆಳಗಾವಿ: ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೆಧೀಯೊಂದಿಗೆ ವಿಲೀನಗೊಳಿಸಲು ನಮ್ಮ ಸಹಮತವಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರಕ್ಕೆ ನಮ್ಮ ನಿಲುವು ತಿಳಿಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯ ಗಮನಸೆಳೆಯುವ ಸೂಚನೆಗಳಡಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮತ್ತು ವಿ. ಸುನಿಲ್ ಕುಮಾರ್ ಅವರ ಗಮನಸೆಳೆಯುವ ಸೂಚನೆಗೆ ಸಚಿವ ಕೆ.ಜೆ. ಜಾರ್ಜ್ ಉತ್ತರಿಸಿದರು.
ಸುನಿಲ್ ಕುಮಾರ್ ವಿಷಯ ಪ್ರಸ್ತಾವಿಸಿ, ಕೊಂಕಣ ರೈಲ್ವೇ ಈ ಹಿಂದೆಯೇ ಭಾರತೀಯ ರೈಲ್ವೇಯೊಂದಿಗೆ ವಿಲೀನವಾಗಬೇಕಿತ್ತು. ಆದರೆ ನಷ್ಟದಲ್ಲಿ ನಡೆಯುತ್ತಿರುವ ಕಾರಣ ಈ ಭಾಗದ ಯಾವುದೇ ರೈಲು ನಿಲ್ದಾಣಗಳು ಕೂಡ ಅಭಿವೃದ್ಧಿಯಾಗಲಿಲ್ಲ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಈಗಾಗಲೇ ತಮ್ಮ ಪಾಲನ್ನು ಬಿಟ್ಟು ಕೊಟ್ಟಿವೆ. ಹಾಗೆಯೇ ಕರ್ನಾಟಕ ತನ್ನ ಪಾಲಿನ 270 ಕೋಟಿ ರೂ.ಗಳ ಷೇರು ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಷೇರು ಮೊತ್ತ ಹೊಂದಾಣಿಕೆಯ ಬಗ್ಗೆ ಈಗಾಗಲೇ ನಾವು ರೈಲ್ವೇ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದೇವೆ. ಭಾರತೀಯ ರೈಲ್ವೇಯೊಂದಿಗೆ ವಿಲೀನವಾದಲ್ಲಿ ಹೊಸ ರೈಲುಗಳು ಕೂಡ ಬರಲಿದ್ದು, ರೈಲು ನಿಲ್ದಾಣಗಳು ಕೂಡ ಸುಧಾರಣೆ ಕಾಣಲಿವೆ ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ವಿಲೀನ ಪ್ರಕ್ರಿಯೆ ಬಗ್ಗೆ ರಾಜ್ಯ ಸರಕಾರ ಕೊಂಕಣ ರೈಲ್ವೇಗೆ ಪತ್ರ ವ್ಯವಹಾರ ಮಾಡಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಈ ಬಗ್ಗೆ ಸ್ಪೀಕರ್ ಖಾದರ್ ನೇತೃತ್ವದಲ್ಲಿ ನಿಯೋಗ ರಚಿಸಿ ನಾವು ಕೇಂದ್ರ ಸರಕಾರದ ಅಧಿಕಾರಿಗಳನ್ನು ಭೇಟಿಯಾಗೋಣ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಜನಪ್ರತಿನಿಧಿಗಳೆಲ್ಲ ಸಭೆಗೆ ಬರಲು ಸಿದ್ಧರಿದ್ದೇವೆ ಎಂದು ಹೇಳಿದರು. ಈ ಸಲಹೆಗೆ ಸ್ಪೀಕರ್ ಮತ್ತು ಸರಕಾರದಿಂದ ಸಹಮತ ವ್ಯಕ್ತವಾಯಿತು.