ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುವ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ, ಮಂಗಳೂರಿನಲ್ಲಿ ರಸ್ತೆ ತಡೆ ಮಾಡಿ ಜನರಿಗೆ ತೊಂದರೆ ಮಾಡುವ ಬದಲು ಬಾಂಗ್ಲಾದ ದೂತಾವಾಸದ ಎದುರು ಪ್ರತಿಭಟನೆ ನಡೆಸಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡನೀಯ. ಆದರೆ ಅದಕ್ಕೆ ಪ್ರತಿಭಟನೆ ಎಲ್ಲಿ ಮಾಡಬೇಕೋ ಅಲ್ಲಿ ಮಾಡಲಿ. ಮಂಗಳೂರಿನಲ್ಲಿ ರಸ್ತೆಬಂದ್ ಮಾಡಿ ಪ್ರತಿಭಟಿಸುವ ಮೂಲಕ ಬಿಜೆಪಿ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದೆ ಎಂದರು.
ಯಾವುದೇ ದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಹಿತ ಕಾಯುವುದು ಆ ದೇಶದ ಆಡಳಿತ ಕರ್ತವ್ಯ. ಯಾವುದೇ ದೇಶದ ಸರಕಾರ ರಾಜ ಧರ್ಮ ನಿರ್ವಹಣೆಯಲ್ಲಿ ವಿಫಲವಾ ದಾಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅದನ್ನು ಪ್ರಶ್ನಿಸಬೇಕು ಎಂದರು.
ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೆ ಎಫ್ಐಆರ್ ದಾಖಲಿಸಿರುವ ಕುರಿತಂತೆ ಎಡಪಕ್ಷಗಳ ಅಭಿಯಾನದ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಇಲಾಖೆ ಒಂದು ಕಡೆ ಪ್ರತಿಭಟನೆಗೆ ಅವಕಾಶ ನೀಡಿ, ಇನ್ನೊಂದು ಕಡೆ ಅವಕಾಶ ನೀಡದಿರುವುದು ಸರಿಯಲ್ಲ. ಸಂದರ್ಭ ಬಂದಾಗ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರ ಜತೆ ಚರ್ಚಿಸುವುದಾಗಿ ಹೇಳಿದರು.
ಪೊಲೀಸ್ ಆಯುಕ್ತರ ವರ್ಗಾವಣೆ ಒತ್ತಡ ಕುರಿತ ಪ್ರಶ್ನೆಗೆ, ವರ್ಗಾವಣೆ ಪ್ರಕ್ರಿಯೆ ಸರಕಾರ ನಡೆಸುವಂತದ್ದು. ಅದರಲ್ಲಿ ಮೂಗು ತೂರಿಸುವುದಿಲ್ಲ ಎಂದರು.
ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಾಯಕರ ನಡುವಿನ ಹೊಡೆದಾಟದ ಕುರಿತಂತೆ ಪ್ರತಿಕ್ರಿಯಿಸಿ, 45 ವರ್ಷದ ರಾಜಕೀಯ ಜೀವನದ ಅನುಭವ ಇದೆ. ಇಂತಹ ಸಣ್ಣ ಪುಟ್ಟ ಘಟನೆಗಳು ಸಾಮಾನ್ಯ. ಕಪಾಳ ಮೋಕ್ಷ ಆದ ಬಗ್ಗೆ ನನಗೆ ಅರಿವಿಲ್ಲ. ನಾನು ಸ್ಥಳದಲ್ಲಿ ಇರಲಿಲ್ಲ ಎಂದರು.ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.