ಅಹ್ಮದಾಬಾದ್ : ಗುಜರಾತ್‌ನಿಂದ ನಡೆಯುವ ರಾಜ್ಯ ಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಂದು ಶುಕ್ರವಾರ ತಮ್ಮ ನಾಮಪತ್ರ ಸಲ್ಲಿಸಿದರು.
ಶಾ ಅವರು ಪ್ರಕೃತ ಗುಜರಾತ್‌ನಲ್ಲಿ ಓರ್ವ ಶಾಸಕರಾಗಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಉತ್ತಮ ಸಂಖ್ಯಾಬಲ ಹೊಂದಿರುವ ಕಾರಣ ಅಮಿತ್ ಶಾ ಗೆಲವು ಬಹುತೇಕ ಖಚಿತವೇ ಇದೆ. ಒಂದೊಮ್ಮೆ ಅವರು ಚುನಾಯಿತರಾದರೆಂದರೆ ಚೊಚ್ಚಲ ಬಾರಿಗೆ ಅವರು ಸಂಸತ್ತನ್ನು ಪ್ರವೇಶಿಸುವಂತಾಗುತ್ತದೆ.
ಬಿಜೆಪಿ ನಿನ್ನೆ ಗುರುವಾರ ಗುಜರಾತ್‌ನಿಂದ ರಾಜ್ಯಸಭೆಗೆ ಅಮಿತ್ ಶಾ ಮತ್ತು ಕೇಂದ್ರ ಜವುಳಿ ಖಾತೆ ಸಚಿವೆ ಸ್ಮತಿ ಇರಾನಿ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಿತ್ತು.
ಅಮಿತ್ ಶಾ ಅವರು ಗುಜರಾತ್‌ನ ಸರ್‌ಖೇಜ್ ನಿಂದ ನಾಲ್ಕು ಬಾರಿ ನಿರಂತರವಾಗಿ 1997, 1998, 2002 ಮತ್ತು 2007ರಲ್ಲಿ ಶಾಸಕರಾಗಿ ಚುನಾಯಿತರಾಗಿದ್ದಾರೆ. 2014ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಲು ಶಾ ಅವರ ರಣತಂತ್ರವೇ ಕಾರಣವಾಗಿತ್ತು.
ಈ ಮೊದಲು ಗುಜರಾತ್‌ನಿಂದಲೇ ರಾಜ್ಯ ಸಭೆಗೆ ಚುನಾಯಿತರಾಗಿದ್ದ ಸ್ಮತಿ ಇರಾನಿ ಅವರ ಅವರ ಕಾರ್ಯಾವಧಿಯು ಇದೇ ಆಗಸ್ಟ್ 18ಕ್ಕೆ ಕೊನೆಗೊಳ್ಳಲಿದೆ; ಆಕೆ ಮತ್ತೆ ಬಿಜೆಪಿಯಿಂದ ನಾಮಾಂಕಿತರಾಗಿದ್ದಾರೆ.