ಬೆಂಗಳೂರು: ಹಳೇ ದ್ವೇಷಕ್ಕೆ ರೌಡಿಶೀಟರ್‌ನನ್ನು ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಶೇಷಾದ್ರಿಪುರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.
ರಿಸಲ್ದಾರ್ ಸ್ಟ್ರೀಟ್ ನಿವಾಸಿ ಅಜಿತ್(27) ಕೊಲೆಯಾದ ರೌಡಿಶೀಟರ್. ಕೃತ್ಯ ಎಸಗಿದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದ್ದು, ಅದಕ್ಕಾಗಿ 2 ವಿಶೇಷ ತಂಡ ರಚಿಸಲಾಗಿದೆ. ಬ್ಲಿಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್, ಮನೆಯಲ್ಲಿ ಊಟ ಮುಗಿಸಿ ಗುರುವಾರ ಸಂಜೆ 4.15ರ ಸುಮಾರಿಗೆ ಹೊರಗಡೆ ಬಂದು, ಮನೆಯಿಂದ 500 ಮೀಟರ್ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಬಂದಿರುವ ನಾಲ್ಕೈದು ಹಂತರು, ಏಕಾಏಕಿ ಅಜಿತ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ತಲೆ, ಎದೆ, ಬೆನ್ನಿನ ಭಾಗದಲ್ಲಿ ತೀವ್ರ ರಕ್ತಸ್ರಾವದಿಂದ ಅಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪೋಷಕರ ಆಕ್ರಂದನ: ಮನೆ ಸಮೀಪದಲ್ಲೇ ಪುತ್ರನ ಹತ್ಯೆ ವಿಚಾರ ತಿಳಿದ ಅಜಿತ್ ಪೋಷಕರು ಹಾಗೂ ಸಂಬಂಧಿಕರು ಘಟನಾ ಸ್ಥಳಕ್ಕೆ ಆಗಮಿಸಿ ಭೀಕರವಾಗಿ ಹತ್ಯೆ ಕಂಡು ಗೋಳಾಡಿದರು.
ರೌಡಿಶೀಟರ್ ಆಗಿದ್ದ ಅಜಿತ್: 2022ರಲ್ಲಿ ನಡೆದಿದ್ದ ಗಣೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಅಜಿತ್, ಕೆಲ ತಿಂಗಳ ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ನಂತರ ಏರಿಯಾದಲ್ಲೇ ತಾನೇ ಡಾನ್ ಆಗಬೇಕೆಂದು ಪ್ರಾಬಲ್ಯ ಸಾಧಿಸಲು ಮುಂದಾಗಿದ್ದ. ಅಲ್ಲದೆ, ಕೆಲ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರ ಭಾಗಿಯಾಗುತ್ತಿದ್ದ. ಈ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ಈತನ ವಿರುದ್ಧ ರೌಡಿಪಟ್ಟಿ ತೆರೆದಿದ್ದರು. ಹೀಗಾಗಿ ಹಳೇ ದ್ವೇಷದ ಹಿನ್ನೆಲೆಯಲ್ಲೇ ಹತ್ಯೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಶೇಖರ್, ಕೊಲೆಯಾದ ಅಜಿತ್ 2022ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಇದೇ ಕಾರಣಕ್ಕೆ ಹಳೇ ದ್ವೇಷದಿಂದಲೇ ಕೊಲೆ ನಡೆದಿರುವ ಸಾಧ್ಯತೆಯಿದೆ. ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದರು.