ಬೆಂಗಳೂರು: ಮೆಟ್ರೋ ರೈಲಿನಲ್ಲಿ ಮಹಿಳೆಯ ಫೋಟೋ ಮತ್ತು ವಿಡಿಯೋ ಸೆರೆ ಹಿಡಿದ ಆಯುರ್ವೇದ ವೈದ್ಯ ಮಹೇಶ್ ಅಲಿಯಾಸ್ ಮಲ್ಲೇಶ್ ಎಂಬಾತನನ್ನು ಬಿಎಂಆರ್ಸಿಎಲ್ ಭದ್ರತಾ ಸಿಬ್ಬಂದಿ ಥಳಿಸಿ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಡಿ.25ರಂದು ಮೆಟ್ರೊ ರೈಲಿನಲ್ಲಿ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣದಿಂದ ಜೆ.ಪಿ.ನಗರ ನಿಲ್ದಾಣಕ್ಕೆ ಬಂದಿದ್ದ ಆರೋಪಿ, ಮಹಿಳಾ ಟೆಕಿ ಪ್ರಯಾಣಿಸುತ್ತಿದ್ದ ಬೋಗಿಯಲ್ಲೇ ಕುಳಿತಿದ್ದಾನೆ. ಆಗ ಆರೋಪಿ ತನ್ನ ಮೊಬೈಲ್ನಲ್ಲಿ ಟೆಕಿಯ ಫೋಟೊ ತೆಗೆದಿದ್ದಾನೆ. ಅದನ್ನು ಗಮನಿಸಿದ ಮಹಿಳಾ ಟೆಕಿ, ಆರೋಪಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಜಯನಗರ ಮೆಟ್ರೋ ನಿಲ್ದಾಣಕ್ಕೆ ಬಂದಾಗ ಟೆಕಿ ಈ ವಿಚಾರವನ್ನು ನಿಲ್ದಾಣದ ಸೆಕ್ಯೂರಿಟಿ ಗಾರ್ಡ್ಗಳಿಗೆ ತಿಳಿಸಿದ್ದಾರೆ.
ಬಳಿಕ ಸೆಕ್ಯೂರಿಟಿ ಗಾರ್ಡ್ಗಳು ಮಹೇಶ್ನನ್ನು ಹಿಡಿದು ಥಳಿಸಿ, ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ಬಳಿಕ ಜಯನಗರ ನಿಲ್ದಾಣಕ್ಕೆ ಹೋಗಿ ಮಹೇಶ್ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಮಹೇಶ್ನ ಮೊಬೈಲ್ ಪರಿಶೀಲಿಸಿದಾಗ ಟೆಕಿಯ ವಿಡಿಯೋ ಮತ್ತು ಫೋಟೊಗಳು ಪತ್ತೆಯಾಗಿವೆ. ಅಲ್ಲದೆ, ಸಾಕಷ್ಟು ಅಶ್ಲೀಲ ವಿಡಿಯೊಗಳು ಇದ್ದವು. ಅವೆಲ್ಲವನ್ನೂ ಡಿಲೀಟ್ ಮಾಡಿಸಲಾಗಿದೆ.
ದಾವಣಗೆರೆ ಮೂಲದ ಮಹೇಶ್, ನಗರದ ಜೆ.ಪಿ. ನಗರದಲ್ಲಿ ವಾಸವಾಗಿದ್ದಾನೆ. ಆಯುರ್ವೇದ ವೈದ್ಯನಾಗಿದ್ದಾನೆ. ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ದೂರು ಕೊಟ್ಟಿದ್ದು, ಮಹೇಶ್ ವಿರುದ್ಧ ಅಸಂಜ್ಞೆಯ ಪ್ರಕರಣ ದಾಖಲಿಸಿಕೊಂಡು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ