ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣ ತೆರವು ಕಾರ್ಯಾ ಚರಣೆ ಮುಂದುವರೆಸಿದೆ. ನಾಗರಬಾವಿಯ 2 ಕಡೆಗ ಳಲ್ಲಿ ಬಿಡಿಎಗೆ ಸೇರಿದ ಸುಮಾರು 460 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಶನಿವಾರ ಜಪ್ತಿ ಮಾಡಿಕೊಂಡಿದೆ. ನಾಗರಬಾವಿ ಸರ್ವೆ ನಂ.78 ಹಾಗೂ ಸರ್ವೆ ನಂ.129ರಲ್ಲಿ ಬಿಡಿಎಗೆ ಸೇರಿದ ಒಟ್ಟು 460 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ವಹಣೆ ಮಾಡುತ್ತಿದ್ದರು. ಈ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆ, ಗ್ಯಾರೇಜ್ ಸೇರಿ ಇನ್ನಿತರ ವಾಣಿಜ್ಯ ವ್ಯವಹಾರಗಳನ್ನು ನಡೆಸಿ ಬಾಡಿಗೆ ಪಡೆಯುತ್ತಿದ್ದರು.
ಈ ವಿಚಾರ ಬಿಡಿಎ ಅಧಿಕಾರಿಗಳ ಗಮನಕ್ಕೆ ಬಂದು ಈ ಜಾಗಗಳನ್ನು ನಿರ್ವಹಣೆ ಮಾಡುತ್ತಿದ್ದರು. ನ್ಯಾಯಾಲಯದಲ್ಲಿ ಈ ಜಾಗದ ಬಗ್ಗೆ ವ್ಯಾಜ್ಯ ನಡೆಯುತ್ತಿತ್ತು. ಇತ್ತೀಚೆಗೆ ಕೋರ್ಟ್‌ನಿಂದ ಬಿಡಿಎ ಪರ ತೀರ್ಪು ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ನಾಗರಬಾವಿ ಗ್ರಾಮದ ಸರ್ವೆ ನಂ.78 ರಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಗೋದಾಮು, ಶೆಡ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ ಪ್ರಾಧಿಕಾರಕ್ಕೆ ಸೇರಿದ 6 ಎಕರೆ ಪ್ರದೇಶದ ಸುಮಾರು 430 ಕೋಟಿ ರೂ.ನ ಆಸ್ತಿಯನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿದೆ.
30 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ: ನಾಗರಭಾವಿಯ ಸರ್ವೆ ನಂ.129 ರಲ್ಲಿನ ನಾಗರಭಾವಿ 1ನೇ ಹಂತ ಬಡಾವಣೆ ರಚನೆಗೆ ಬಿಡಿಎ 1985ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಪಡಿಸಿತ್ತು. ಈ ಸರ್ವೆ ನಂಬರಿನ ಜಮೀನಿನಲ್ಲಿ ರಚಿಸಲಾದ ಪ್ರಾಧಿಕಾರದ ನಿವೇಶನಗಳ ಪೈಕಿ 15+24 ಮೀ. ಅಳತೆಯ ಮೂಲೆ ನಿವೇಶನ ಸಂಖ್ಯೆ: 2, 15, 12ಗಿ18 ಮೀ.
ಅಳತೆ ಮೂಲೆ ನಿವೇಶನ ಸಂಖ್ಯೆ: 19 ಮತ್ತು 9+12 ಮೀ ಅಳತೆ ಮಧ್ಯಂತರ ನಿವೇಶನ ಸಂಖ್ಯೆ: 1ಎ, 1ಬಿ ಮತ್ತು ಸಿ.ಎ.ನಿವೇಶನದಲ್ಲಿ ಅನಧಿ ಕೃತ ಶೆಡ್, ಗ್ಯಾರೇಜ್ ಮತ್ತು ನರ್ಸರಿ ಗಾರ್ಡನ್ ನಿರ್ಮಾಣ ಮಾಡಿ ಪ್ರಾಧಿಕಾರದ ಜಾಗವನ್ನು ಒತ್ತುವರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆದೇಶದಂತೆ ಅಭಿಯಂತರ ಅಧಿಕಾರಿ-1 ಅವರಿಂದ ತೆರವು ಆದೇಶ ಪಡೆದು ಕಾರ್ಯಚರಣೆ ನಡೆಸಿ ಇಲ್ಲಿನ 30 ಕೋಟಿ ರೂ. ಬೆಲೆಬಾಳುವ ಆಸ್ತಿಗೆ ಫೆನ್ಸಿಂಗ್ ಮತ್ತು ಬಿಡಿಎ ನಾಮಪಲಕ ಅಳವಡಿಸಿ ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಗಿದೆ.
ಅವಕಾಶ ನೀಡದೆ ತೆರವು: ಮಾಲಿಕರ ಅಳಲು ಬಿಡಿಎ ಜಾಗದಲ್ಲಿ ನಿರ್ಮಿಸಿದ್ದ 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳನ್ನು ಬಿಡಿಎ ಜೆಸಿಬಿ ಯಂತ್ರಗಳ ಮೂಲಕ ಕ್ಷಣ ಮಾತ್ರದಲ್ಲಿ ನೆಲಸಮ ಮಾಡಿದೆ. ಬಂಡವಾಳ ಹಾಕಿ ಲಾಭಕಾಗಿ ಕಾಯುತ್ತಿದ್ದ ಅಂಗಡಿ ಮಾಲಿಕರ ಮುಂದೆಯೇ ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ. ಈ ಬಗ್ಗೆ ಬಿಡಿಎ ಅಧಿಕಾರಿಗಳನ್ನು ಸಾರ್ವಜನಿಕರು ಪ್ರಶ್ನಿಸಿದರೆ, ಅಂಗಡಿ ತೆರವು ಮಾಡಲು ಮೊದಲೇ ನೋಟಿಸ್ ಕೊಟ್ಟಿದ್ದೆವು ಎಂದಿದ್ದಾರೆ. ಆದರೆ, ಅಂಗಡಿ ಮಾಲಿಕರು ಮಾತ್ರ, ಬಿಬಿಎಂಪಿ ಪರವಾನಗಿ, ಆಹಾರ ಪರವಾನಗಿಯಂತಹ ದಾಖಲೆಗಳಿದ್ದರೂ ನಮಗೆ ಕೊಟ್ಟಿರುವ ಕಾಲಾವಶಕ್ಕಿಂತ ಮುಂಚಿತವಾಗಿ ಅಂಗಡಿ ಧ್ವಂಸ ಮಾಡಲಾಗಿದೆ.
ಅಂಗಡಿಯಲ್ಲಿದ್ದ ವಸ್ತುಗಳನ್ನು ಸಾಗಿಸುವುದಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕಿತ್ತು. ಇದೀಗ ಅಂಗಡಿಗೆ ಹಾಕಿದ ಬಂಡವಾಳದ ಜೊತೆಗೆ ಅಲ್ಲಿದ್ದ ಸಾವಿರಾರು ರೂ. ಮೌಲ್ಯದ ವಸ್ತುಗಳೂ ನಾಶವಾಗಿವೆ ಎಂಬುದು ಅಂಗಡಿ ಮಾಲಿಕರು ಅಳಲು. ಬಿಡಿಎ ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ಜಗಳ ಅಂತ್ಯಗೊಂಡು ಇದು ಬಿಡಿಎ ಸ್ವತ್ತು ಎಂದಾಗಿರುವುದು ಒಂದು ಕಡೆಯಾದರೆ, ಮತ್ತೂಂದೆಡೆ ಸಾಲ ಸೋಲ ಮಾಡಿ ವ್ಯಾಪಾರಕ್ಕೆ ಬಂಡವಾಳ ಹಾಕಿದ್ದ ಇಲ್ಲಿನ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ.