ಬೆಂಗಳೂರು: ಅಂತಾರಾಷ್ಟ್ರೀಯ ಕಂಪನಿಯೊಂದರ ಟೀವಿಯ ಪ್ಯಾನಲ್ ವಾರೆಂಟಿ ಅವಧಿಯಲ್ಲಿ ದುರಸ್ತಿ ಗೊಳಿಸಲು ಒಪ್ಪದ ಎಲೆಕ್ಟ್ರಾನಿಕ್ ಸರ್ವೀಸ್ ಸೆಂಟರ್‌ಗೆ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ 12,300 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕನಕಪುರದ 68 ವರ್ಷದ ನಿವಾಸಿ 2017ರಲ್ಲಿ 43 ಇಂಚಿನ ಸೋನಿ ಟೀವಿ, ಎಲ್‌ಜಿ ಫ್ರಿಡ್ಜ್ ಹಾಗೂ ಓವನ್ ಖರೀದಿಗೆ 1.22 ಲಕ್ಷ ರೂ. ಪಾವತಿಸಿದ್ದರು. ಈ ವೇಳೆ ಟೀವಿಗೆ 56,200 ರೂ. ಪಾವತಿಸಿದ್ದರು. 2022ರ ಆಗಸ್ಟ್‌ನಲ್ಲಿ ಟೀವಿ ಪ್ಯಾನಲ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ 7,300 ರೂ. ಪಾವತಿಸಿ ಸರ್ವೀಸ್ ಸೆಂಟರ್‌ನಿಂದ ದುರಸ್ತಿ ಮಾಡಿಸಿದ್ದು, ಇದಕ್ಕೆ 8 ತಿಂಗಳ ವಾರೆಂಟಿಯನ್ನು ಸಹ ನೀಡಿದ್ದರು.
ರಿಪೇರಿ ಬಳಿಕವೂ ಟೀವಿ ಸರಿಯಾಗಿರಲಿಲ್ಲ. ಹೀಗಾಗಿ ಸರ್ವೀಸ್‌ಗೆ ಮತ್ತೆ ಮನವಿ ಮಾಡಿದ್ದರು. ಈ ಕುರಿತು ಹಲವು ಬಾರಿ ಕರೆ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ 2023ರ ಅ.10ರಂದು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ತದನಂತರ ಗ್ರಾಹಕ ನ್ಯಾಯಾಲಯದಲ್ಲಿ ದೂರ ದಾಖಲಿಸಿದ್ದು, ಈ ವೇಳೆ ಹೊಸ ಟೀವಿ ಅಥವಾ 7,300 ರೂ. ಮರುಪಾವತಿಸುವುದು, 15 ಸಾವಿರ ಪರಿಹಾರ, ತಲಾ 5000 ಕೋರ್ಟ್ ಹಾಗೂ ನೋಟಿಸ್ ಬಾಬ್ತು ಸೇರಿದಂತೆ ಒಟ್ಟು 32,300 ರೂ. ಪರಿಹಾರ ಪಾವತಿಸುವಂತೆ ಮನವಿ ಮಾಡಿದ್ದರು.
ಬೆಂಗಳೂರು ನಗರ 2ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯಗಳ ಆಯೋಗದ ಅಧ್ಯಕ್ಷ ವಿಜಯಕುಮಾರ ವಾದವನ್ನು ಪರಿಶೀಲನೆ ಮಾಡಿ, ಗ್ರಾಹಕ ಸೇವೆಯಲ್ಲಿ ವ್ಯತ್ಯಯವಾಗಿರುವುದು ದೃಢವಾಗಿದೆ ಹೀಗಾಗಿ ಗ್ರಾಹಕರಿಗೆ ಟೀವಿ ಪ್ಯಾನಲ್ ಮೊತ್ತ 7,300 ರೂ.ಗೆ ದೂರು ದಾಖಲಾದ ದಿನದಿಂದ ಶೇ.6ರ ಬಡ್ಡಿ ದರದಲ್ಲಿ ಮರುಪಾವತಿ, ಕೋರ್ಟ್ ಬಾಬ್ತು 5 ಸಾವಿರ ಸೇರಿದಂತೆ ಒಟ್ಟು 12,300 ರೂ. ಅ.15ರೊಳಗೆ ಪಾವತಿಸುವವಂತೆ ಆದೇಶಿಸಿದ್ದಾರೆ. ಸಕಾಲದಲ್ಲಿ ಹಣ ಪಾವತಿ ಮಾಡಲು ವಿಫಲವಾದರೆ ಶೇ.8 ಬಡ್ಡಿ ದರದಲ್ಲಿ ಪಾವತಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖೀಸಲಾಗಿದೆ.
ಏನಿದು ಪ್ರಕರಣ? 56 ಸಾವಿರ ನೀಡಿ ಟೀವಿ ಖರೀದಿಸಿದ್ದ ಗ್ರಾಹಕ ಟೀವಿ ಪ್ಯಾನಲ್ ದುರಸ್ತಿಗೂ 7,300 ರೂ. ಪಾವತಿ, ದುರಸ್ತಿ ಬಳಿಕವೂ ಸರಿಯಾಗಿ ಕಾರ್ಯನಿರ್ವಹಿಸದ ಟೀವಿ ಎಲೆಕ್ಟ್ರಾನಿಕ್ ಸರ್ವೀಸ್ ಸೆಂಟರ್ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಕೆ