Advertisement

UV Fusion: ಕಥೆಯ ಹಿಂದಿನ ಸಾವಿರ ಕಥೆಗಳು!

11:49 AM Dec 14, 2024 | Team Udayavani |

ಎಲ್ಲವೂ ಕಥೆಗಳೇ. ನಡೆದದ್ದಷ್ಟೇ ಕಥೆಗಳಲ್ಲ. ನಡೆಯುವುದೂ ಕಥೆಗಳೇ, ನಡೆಯಬಹುದೆನ್ನುವುದೂ ಸಹ…

Advertisement

ಎಲ್ಲೋ ಗೌಪ್ಯವಾಗಿ ತಯಾರಾದ ಒಂದು ಬುಲೆಟ್‌ ಹುಟ್ಟಿದ್ದೇ ಒಂದು ಕಥೆಯಾದರೆ, ತರುವಾಯ ಮತ್ತೂಂದು ಕಥೆ. ಬುಲೆಟನ್ನು ಬಂದೂಕಿಗೆ ತುರುಕಿ ಕೈಯಲ್ಲಿ ಹಿಡಿದುಕೊಂಡು ಏನೂ ಮಾಡದೆ ಸಾವಿರ ಕಥೆಗಳನ್ನು ಸೃಷ್ಟಿಸಬಹುದು. ಹಾಗೆ ಸೃಷ್ಟಿಸಿದ ಕಥೆಗಳ ಪೈಕಿ ಯಾವುದೋ ಒಂದು ನಿಜವಾಗಲೂಬಹುದು. ಕೊಂದವನೂ ಕಥೆ, ಕೊಲೆಯಾದವನೂ ಕಥೆ. ನೋಡಿದವರ ಕಣ್ಣುಗಳು ಮಾತಿಗಿಳಿದಾಗ ಸಾವಿರ ಕಥೆಗಳು. ಒಂದಲ್ಲ ಒಂದು ರೂಪದಲ್ಲಿ, ಕಥೆಗಳು ಸಾವಿರಾರು ವರ್ಷಗಳಿಂದ ಮಾನವ ಸಂಸ್ಕೃತಿ ಮತ್ತು ಸಮಾಜದ ಒಂದು ಭಾಗವಾಗಿದೆ. ಬಹುಶಃ ಮನುಷ್ಯ ಅಸ್ತಿತ್ವದಲ್ಲಿದ್ದಾಗಲೇ.

ಪ್ರತಿಯೊಂದು ಪ್ರದೇಶ, ಭಾಷೆ, ಸಂಸ್ಕೃತಿ, ಧರ್ಮ ಮತ್ತು ಜನಾಂಗೀಯತೆಯ ಜನರ ಹಿಂದಿನ ಮತ್ತು ಪ್ರಸ್ತುತದಲ್ಲಿ ಕಥಾನಕಗಳು ಕಾಣಸಿಗುತ್ತವೆ. ಆದ್ದರಿಂದ, ಎಲ್ಲವನ್ನೂ ಪರಿಗಣಿಸಿದರೆ, ಕಥೆಯ ಪರಿಕಲ್ಪನೆಯು ಸಂಪೂರ್ಣವಾಗಿ ಕೇಂದ್ರೀಕರಿಸಿ ವಿವರಿಸಲು ಸ್ವಲ್ಪ ಕಷ್ಟ. ಜೀವನವು ಅಂತ್ಯವಿಲ್ಲದ ಕಥೆಗಳ ಸರಣಿಯಿಂದ ಮಾಡಲ್ಪಟ್ಟಿದೆ ಎಂದು ಕೆಲವರು ಹೇಳುತ್ತಾರೆ. ಸಾಮಾನ್ಯವಾಗಿ ಹೇಳುವುದಾದರೆ ಒಂದು ವ್ಯಕ್ತಿ ಅಥವಾ ವಸ್ತು ಹುಟ್ಟುವ ಮೂದಲು ಹಾಗೂ ಸತ್ತ ನಂತರ ಎಲ್ಲವೂ ಕಥೆಗಳೇ.

ಬಾಲ್ಯದ ದಿನಗಳಲ್ಲಿ ಮಂತ್ರಾಲಯಕ್ಕೆ ಬಸ್ಸಿನಲ್ಲಿ ಹೋಗುವಾಗ, ಅಮ್ಮ ರಾಯರ ಕಥೆ ಹೇಳುತ್ತಿದ್ದರು. ಅವರು ಅದನ್ನ ರೇಡಿಯೋದಲ್ಲೋ ಸಿನಿಮಾದಲ್ಲೋ ಅಥವಾ ಯಾರೋ ಹೇಳಿ ತಿಳಿದುಕೊಂಡಿರಬಹುದು. ಆದರೆ ಹಾಗೆ ಕೇಳಿದ ಕಥೆಯನ್ನು ನನ್ನ ಎಳೆಯ ಚಿತ್ತಕ್ಕರ್ಥವಾಗುವಂತೆ ಮನಸ್ಸಿನಲ್ಲಿಯೇ ಕಟ್ಟಿ ಯಾವ ಸನ್ನಿವೇಶದಿಂದ ಶುರು ಮಾಡಿ ಹೇಗೆ ಮುಗಿಸಬೇಕೆನ್ನುವುದು ಏನನ್ನು ಓದದ ನನ್ನಮ್ಮನಿಗೆ ಹೇಗೆ ತಿಳಿಯಿತು. ಬಹುಶಃ ಅಮ್ಮ ಅದು ನನ್ನನ್ನು ರಂಜಿಸಲು ಅಥವಾ ಭಕ್ತಿಯ ಭಾವದಲಿ ಪ್ರಭಾವಿಸಲು ಹೇಳಿರಬಹುದು. ಆದರೆ ಕಥೆ ಕಟ್ಟುವ ಹಾಗೂ ವಿವರಿಸುವ ವೈಖರಿ ಅಸಲಿಗೆ ಮನುಷ್ಯನೊಂದಿಗೆ ಹುಟ್ಟಿರಬಹುದು.

ರಾಜಕೀಯ ನೀತಿ, ಆಧ್ಯಾತ್ಮಿಕ ಪ್ರಗತಿ, ಸಂಧಾನ, ಒಪ್ಪಂದ, ವಿಷಾದ, ಎಲ್ಲವೂ ಏಕಕಾಲದಲ್ಲಿ ಹೆಚ್ಚು ಜನರಿಗೆ ಸುಲಭವಾಗಿ ಅರ್ಥವಾಗಲು ಕಥೆಗಳೇ ರಹದಾರಿ. ಅಂದು, ಇಂದು ಎಂದೆಂದಿಗೂ…

Advertisement

 ದರ್ಶನ್‌ ಕುಮಾರ್‌

ಕೇರಳ ಕೇಂದ್ರೀಯ ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next