ಲಂಡನ್: ಕೋವಿಡ್-19 ಪಾಸಿಟಿವ್ ಆಗಿದ್ದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಜುಲೈ 8ರಂದು ನಡೆಸಿದ್ದ ಕೋವಿಡ್ ಪರೀಕ್ಷೆಯಲ್ಲಿ ಪಂತ್ ಗೆ ಪಾಸಿಟಿವ್ ಆಗಿರುವುದು ದೃಢವಾಗಿತ್ತು.
ಭಾರತದ ತ್ರೋ ಡೌನ್ ಸಿಬ್ಬಂದಿ ದಯಾನಂದ್ ಗರಾನಿಗೂ ಕೋವಿಡ್ ಪಾಸಿಟಿವ್ ಆಗಿದೆ. ದಯಾನಂದ್ ಜೊತೆ ಸಂಪರ್ಕದಲ್ಲಿದ್ದ ಕಾರಣ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕೂಡಾ 10 ದಿನಗಳ ಕಾಲ ಐಸೋಲೇಶನ್ ನಲ್ಲಿರಲಿದ್ದಾರೆ. ದಯಾನಂದ್ ಗೆ ಜುಲೈ 14ರಂದು ನಡೆಸಿದ್ದ ಪರೀಕ್ಷೆಯಲ್ಲಿ ಕೋವಿಡ್ ದೃಢವಾಗಿತ್ತು.
ಭಾರತ ತಂಡ ಇತರ ಯಾರಿಗೂ ಕೋವಿಡ್ ಸೋಂಕು ತಾಗಿಲ್ಲ ಎಂದು ಬಿಸಿಸಿಐ ಖಚಿತ ಪಡಿಸಿದೆ. ಫೈನಲ್ ಬಳಿಕದ ಬ್ರೇಕ್ ಅವಧಿಯಲ್ಲಿ ಪಂತ್ ತಂಡದ ಜೊತೆಗೆ ಲಂಡನ್ ಹೋಟೆಲ್ ನಲ್ಲಿ ಇರಲಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.
ಇದನ್ನೂ ಓದಿ:ಭಾರತದೆದುರಿನ ಅಭ್ಯಾಸಕ್ಕೆ ಕೌಂಟಿ ಇಲೆವೆನ್ ಪ್ರಕಟ
ಪಂತ್ ಅವರಿಗೆ ಕೋವಿಡ್ ಲಕ್ಷಣಗಳಿಲ್ಲ. ಅವರ ಕ್ವಾರಂಟೈನ್ ಅವಧಿ ಮುಗಿಯುತ್ತಾ ಬಂದಿದೆ. ಎರಡು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅವರು ಡರ್ಹಮ್ ನಲ್ಲಿ ತಂಡವನ್ನು ಸೇರಿಕೊಳ್ಳಬಹುದು ಎಂದು ಬಿಸಿಸಿಐ ತಿಳಿಸಿದೆ. ಒಂದು ವೇಳೆ ಪಂತ್ ಮತ್ತು ಸಾಹಾ ಇಬ್ಬರೂ ಅಭ್ಯಾಸ ಪಂದ್ಯ ತಪ್ಪಿಸಿಕೊಂಡರೆ ಆಗ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಬೇಕಾಗುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಬಳಿಕ ಭಾರತ ತಂಡದ ಸದಸ್ಯರಿಗೆ 21 ದಿನದ ಬ್ರೇಕ್ ನೀಡಲಾಗಿತ್ತು. ಅವರುಗಳು ಬಯೋ ಬಬಲ್ ನಿಂದ ಹೊರ ಬರಲು ಅವಕಾಶ ನೀಡಲಾಗಿತ್ತು. ರಿಷಭ್ ಪಂತ್, ಆರ್.ಅಶ್ವಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಕೋಚ್ ರವಿ ಶಾಸ್ತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು.