ಬ್ರಿಸ್ಬೇನ್: ಬಾರ್ಡರ್ ಗಾವಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಗಿದಿದ್ದು, ಸರಣಿ 1-1ರಲ್ಲಿ ಸಮಬಲವಾಗಿದೆ. ನಾಲ್ಕನೇ ಪಂದ್ಯವು ಮೆಲ್ಬೋರ್ನ್ ನಲ್ಲಿ ನಡೆಯಲಿದ್ದು, ಬಾಕ್ಸಿಂಗ್ ಡೇ ಪಂದ್ಯವಾಗಿರಲಿದೆ.
ಈ ಮಧ್ಯೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರು ಆಸ್ಟ್ರೇಲಿಯನ್ ಮಾಧ್ಯಮಗಳ ವಿರುದ್ದ ಗರಂ ಆಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಟಿವಿ ವರದಿಗಾರ್ತಿಯ ಜತೆ ಜಗಳ ಮಾಡಿಕೊಂಡಿದ್ದಾರೆ.
ವೃತ್ತಿಜೀವನದಲ್ಲಿ ಮಾಧ್ಯಮದಿಂದ ತಮ್ಮ ವೈಯಕ್ತಿಕ ಜೀವನವನ್ನು ದೂರವಿರಿಸಲು ಇಷ್ಟಪಡುವ ಕೊಹ್ಲಿ, ವಿಮಾನ ನಿಲ್ದಾಣದಲ್ಲಿ ತಮ್ಮ ಮತ್ತು ಕುಟುಂಬದ ವಿಡಿಯೋ ಮಾಡುವುದನ್ನು ಕಂಡು ಸಿಟ್ಟಾದರು ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಲ್ಲಿ ಕ್ಯಾಮರಾಗಳು ತನ್ನ ಮತ್ತು ಮಕ್ಕಳನ್ನು ಸೆರೆ ಹಿಡಿಯುತ್ತಿರುವುದನ್ನು ನೋಡಿದ ಕೊಹ್ಲಿ, ತಾಳ್ಮೆ ಕಳೆದುಕೊಂಡರು ಎಂದು ವರದಿಯಾಗಿದೆ.
ಚಾನೆಲ್ 7 ವರದಿಯ ಪ್ರಕಾರ, ಕೊಹ್ಲಿ ತಮ್ಮ ಮಕ್ಕಳ ಕಡೆಗಿದ್ದ ವಿಡಿಯೋ ಕ್ಯಾಮೆರಾಗಳನ್ನು ಗುರುತಿಸಿದ ನಂತರ ಆಸ್ಟ್ರೇಲಿಯಾದ ಟಿವಿ ಪತ್ರಕರ್ತರೊಂದಿಗೆ ತೀವ್ರ ವಾಗ್ವಾದ ನಡೆಸಿದರು.
ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಅವರನ್ನು ಕೆಲವು ಪತ್ರಕರ್ತರು ಸಂದರ್ಶಿಸುತ್ತಿದ್ದಾಗ, ಕೊಹ್ಲಿ ಮತ್ತು ಅವರ ಕುಟುಂಬ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿತು ಎಂದು ವರದಿಯಾಗಿದೆ. ಕ್ಯಾಮೆರಾಗಳು ಕೊಹ್ಲಿಯತ್ತ ಫೋಕಸ್ ಮಾಡಿದವು, ಇದನ್ನು ನೋಡಿದ ವಿರಾಟ್ ಅಸಮಾಧಾನಗೊಂಡರು.
“ನನ್ನ ಮಕ್ಕಳೊಂದಿಗೆ ನನಗೆ ಸ್ವಲ್ಪ ಗೌಪ್ಯತೆ ಬೇಕು, ನನ್ನನ್ನು ಕೇಳದೆ ನೀವು ವಿಡಿಯೋ ಮಾಡಲು ಸಾಧ್ಯವಿಲ್ಲ” ಎಂದು ವಿರಾಟ್ ಕೊಹ್ಲಿ ಹೇಳಿದರು.
ಆದರೆ, ತಮ್ಮ ಮಕ್ಕಳನ್ನು ಚಿತ್ರೀಕರಿಸುತ್ತಿಲ್ಲ ಎಂದು ಕೊಹ್ಲಿ ತಿಳಿದಾಗ ವಿಷಯ ತಣ್ಣಗಾಯಿತು. ವರದಿಯೊಂದರ ಪ್ರಕಾರ, ನಂತರ ಕೊಹ್ಲಿ ಚಾನೆಲ್ 7 ಕ್ಯಾಮರಾಮನ್ನ ಕೈ ಕುಲುಕಿದರು.