Advertisement
ಕೋವಿಡ್ ಸೋಂಕು ಸೃಷ್ಟಿಸಿರುವ ಆರ್ಥಿಕ ಸಂಕಷ್ಟದಿಂದಾಗಿ ಪಾಲಿಕೆ ಮತ್ತು ಸರ್ಕಾರದ ಆದಾಯ ಕುಸಿದಿದ್ದು, ವಿವಿಧ ಆದಾಯ ಮೂಲಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಪಾಲಿಕೆ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶದಲ್ಲಿ ಜಾಹೀರಾತು ನೀಡುವ ಬಗ್ಗೆ ಸಹ ಚರ್ಚೆ ನಡೆದಿದೆ. ಇದೇ ಸಂದರ್ಭದಲ್ಲಿ ಬಿ ಖಾತಾದಿಂದ ಎ ಖಾತಾ ವರ್ಗಾವಣೆಗೆ ಅವಕಾಶ ನೀಡುವ ನಿಟ್ಟಿನಲ್ಲೂ ನಗರಾಭಿವೃದ್ಧಿ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ. ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರೊಂದಿಗೆ ಬಿ ಖಾತಾದಿಂದ ಎ ಖಾತಾ ನೀಡುವ ಬಗ್ಗೆ ವಿಸ್ತೃತವಾದ ಚರ್ಚೆ ಮಾಡಿದ್ದಾರೆ. ಈ ವಿಷಯವನ್ನು ಸರ್ಕಾರ ಈ ಬಾರಿ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು “ಉದಯವಾಣಿಗೆ’ ತಿಳಿಸಿವೆ.
Related Articles
Advertisement
ಏನಿದು ಬಿ ಖಾತಾ? :
ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಹಾಗೂ ನಿರ್ದಿಷ್ಟ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆಯದೆ ಬಡಾವಣೆ ಹಾಗೂ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ನಿರ್ದಿಷ್ಟ ಆಸ್ತಿಯನ್ನು ಬಿ ಖಾತಾ ಎಂದು ಪರಿಗಣಿಸಲಾಗುತ್ತದೆ.
ನಗರದಲ್ಲಿ ಅನುಮತಿ ಇಲ್ಲದೆ ನಿರ್ಮಿಸಲಾದ ಲೇಔಟ್‌ಗಳು, ಕಂದಾಯ ಭೂಮಿ ಹಾಗೂ ಭೂಪರಿವರ್ತನೆಯಾಗದ ಪ್ರದೇಶದಲ್ಲಿ ನಿರ್ಮಿಸಿದ ಕಟ್ಟಡಗಳ ಮಾಹಿತಿಯನ್ನು “ಬಿ’ ರಿಜಿಸ್ಟರ್ ಎಂದುಪ್ರತ್ಯೇಕಿಸಿ ಮಾಹಿತಿ ದಾಖಲಿಸಲಾಗುತ್ತಿದೆ. ತೆರಿಗೆಸಂಗ್ರಹ ಮಾಡುವ ಉದ್ದೇಶದಿಂದ ಈ ಪದ್ಧತಿ ಜಾರಿ ಮಾಡಲಾಗಿದ್ದು, ಕಾನೂನಿನಲ್ಲಿ ಮಾನ್ಯತೆ ನೀಡಿಲ್ಲ.ಪಾಲಿಕೆಯಿಂದ “ಬಿ’ ಖಾತಾ ಸ್ವತ್ತುಗಳಿಗೆ “ಎ’ ಖಾತೆ ನೀಡಿದರೆ, ಮಾಲೀಕರು ಪಾಲಿಕೆಗೆ ಸುಧಾರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಪಾಲಿಕೆಯ ಆದಾಯ ಮೂಲ ಹೆಚ್ಚಾಗಲು ಸಹಕಾರಿ ಆಗಲಿದೆ. 2018ರ ಆ.ನಲ್ಲಿ ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ “ಎ’ ಖಾತೆ ನೀಡುವ ಸಂಬಂಧ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಪಾಲಿಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಕಾನೂನಿನಲ್ಲಿ “ಬಿ’ ಖಾತಾವನ್ನು “ಎ’ ಖಾತಾವನ್ನಾಗಿ ಪರಿವರ್ತಿಸಲು ಅವಕಾಶವಿಲ್ಲ.
ಹೀಗಾಗಿ, ಸುಧಾರಣಾ ಶುಲ್ಕ ಕಟ್ಟಿಸಿಕೊಂಡು “ಎ’ ಖಾತೆ ನೀಡಲು ನಿಯಮಗಳನ್ನು ರೂಪಿಸಬೇಕು ಎನ್ನುವ ವಿಷಯ ಹಲವು ವರ್ಷಗಳಿಂದ ಚರ್ಚೆ ಆಗುತ್ತಿದೆ. ನಗರದಲ್ಲಿ ಅಂದಾಜು 3.80ರಿಂದ 4 ಲಕ್ಷದ ವರೆಗೆ ಬಿ ಖಾತಾ ಹೊಂದಿರುವ ಸ್ವತ್ತುಗಳಿದ್ದು, ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳು, ಅನಧಿಕೃತ ಬಡಾವಣೆಗಳಲ್ಲಿರುವ ನಿವೇಶನಗಳು, ಸಿಸಿ, ಒಸಿ ಪಡೆಯದ ಕಟ್ಟಡಗಳು ಮತ್ತು ವಸತಿ ಸಮುಚ್ಛಯಗಳಲ್ಲಿನ ಮನೆಗಳಿಗೆ “ಬಿ’ ಖಾತಾ ನೀಡಲಾಗಿದೆ. ಇದೀಗ ಬಿ ಖಾತಾಗಳಿಗೆ ಎ ಖಾತಾ ನೀಡುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಬಿ ಖಾತಾ ಆಸ್ತಿಗಳನ್ನು ಎ ಖಾತಾ ಮಾಡುವ ಪ್ರಸ್ತಾವನೆ ಸಂಬಂಧ ಸರ್ಕಾರದ ಕಂದಾಯ ಇಲಾಖೆ ಸಚಿವರು ಸಭೆ ನಡೆಸಿದ್ದು, ಪ್ರಸ್ತಾವನೆ ಬಗ್ಗೆ ಹಲವು ಸುತ್ತಿನ ಸಭೆ ನಡೆದಿದೆ. ಈ ಬಾರಿ ಖಾತಾ ಪ್ರಸ್ತಾವನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು. -ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ