ಮ್ಯೂನಿಕ್: ಇಲ್ಲಿನ ಭೀಮಾಸ್ ರೆಸ್ಟೋರೆಂಟ್‌ನಲ್ಲಿ ಜು.6 ರಂದು ಅನಿವಾಸಿ ಕನ್ನಡಿಗರೇ ಬರೆದು, ನಟಿಸಿ, ಛಾಯಾಗ್ರಾಹಣ, ನಿರ್ದೇಶಕರಾಗಿ ಕೆಲಸ ಮಾಡಿ, ವಿದೇಶದಲ್ಲೇ ರಚಿಸಿ, ಸಂಗೀತ ಹಾಗೂ ಸ್ವರ ಸಂಯೋಜನೆ ಮಾಡಿ, ಹಾಡಿನ ಚಿತ್ರೀಕರಣಗಳಿಂದ ಮೂಡಿಬಂದ “ಹನಿ ಹನಿ’ ಶೀರ್ಷಿಕೆಯ ಮೊದಲ ಕನ್ನಡ ಹಾಡನ್ನು ಔಪಚಾರಿಕವಾಗಿ ಯುಟ್ಯೂಬ್ ಜಾಲತಾಣದಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಪಾಯಿಂಟ್ ಬ್ಲಾನ್ಕ್ ಕ್ರಿಯೆಶನ್ಸ್ ತಂಡದ ರಾಘವ್ ನಾಯ್ಡು, ಗಿರೀಶ್ ಕುಮಾರ್ ತಿವಾರಿ, ಲೋಕೇಶ್ ದೇವರಾಜ್, ವಿಶಾಲ್ ನೈಧ್ರುವ್, ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಾಂಸ್ಕೃತಿಕ ವಿಭಾಗದ ಅಧಿಕಾರಿ ನಿರಂಜನ್, ಸಿರಿಗನ್ನಡ ಕೂಟ ಮ್ಯೂನಿಕ್ e.V. ಅಧ್ಯಕ್ಷ ಶ್ರೀಧರ್ ಲಕ್ಷ್ಮಪುರ ಮತ್ತು ಪದಾಧಿಕಾರಿಗಳು, ಇಂಡೋಯುರೋಪೀಯನ್ ಸಂಸ್ಥೆಯ ಪ್ರಣೀತ್ ನಿಸಂಕರ ಉಪಸ್ಥಿತರಿದ್ದರು.
ಪಾಯಿಂಟ್ ಬ್ಲಾನ್ಕ್ ಕ್ರಿಯೆಶನ್ಸ್ ಮ್ಯೂನಿಕ್‌ನ ರಾಘವ್ ನಾಯ್ಡು ಹಾಡನ್ನು ರಚಿಸಿ, ನಿರ್ದೇಶನ ಮಾಡಿದ್ದು, ವಿಶಾಲ್ ನೈಧೃವ್, ರೋಹಿತ್ ಹಳ್ಳಿಖೇಡೆ ಹಾಗೂ ಸುನಿಧಿ ಗಣೇಶ್ ಅವರ ಸುಮಧುರ ಕಂಠದಲ್ಲಿ ಹಾಡು ಮೂಡಿಬಂದಿದೆ. ರಾಕಿ ಸುರೇಶ್, ಅನಾಮಿಕ ಸ್ಟಾರ್ಕ್ ದತ್ತ , ಅಮೃತ ಮಂಡಲ್ ಅವರು ಅಭಿನಯಿಸಿದ್ದಾರೆ. ನೃತ್ಯ ನಿರ್ದೇಶನ ಬರ್ಲಿನ್‌ನ ಚೆಲಿ, ಸಂಕಲನ ಕಾರ್ತಿಕೇಯ್ ಖಟ್ಟರ್ ಅವರಿಂದ. ಛಾಯಾಗ್ರಹಣ ಮಾಡಿದವರು ತೇಜಸ್ ಅಹೋಬಲ ಹಾಗೂ ಆಲ್ಬರ್ಟ್ ಜೊಸ್, ಜರ್ಮನಿಯ ವಿವಿಧ ಸ್ಥಳಗಳಲ್ಲಿ ಮನಸೆಳೆಯುವ ರೀತಿಯಲ್ಲಿ ಚಿತ್ರಿಕರಿಸಿದ್ದಾರೆ.
ಕಲಾವಿದರಿಗೆ ತಮ್ಮ ಕನಸುಗಳನ್ನು ಈ ರೀತಿಯಲ್ಲಿ ನನಸಾಗಿಸಕೊಳ್ಳಲು ಮ್ಯೂನಿಕ್‌ನ ಸಿರಿಗನ್ನಡಕೂಟ e.V. ಪ್ರೋತ್ಸಾಹ ನೀಡಿದೆ. ಪಾಯಿಂಟ್ ಬ್ಲಾನ್ಕ್ ಕ್ರಿಯೇಷನ್ಸ್ ಈ ಹಿಂದೆ ನಿನ್ನ ಗುಂಗಲ್ಲಿ ಶೀರ್ಷಿಕೆಯ ಹಾಡನ್ನು ಯುರೋಪ್‌ನಲ್ಲಿ ಮರುಚಿತ್ರೀಕರಣ ಮಾಡಿ ಬಿಡುಗಡೆ ಮಾಡಿದ್ದರು, ಜರ್ಮನಿ ಸುತ್ತಮುತ್ತಲಿನ ಸ್ಥಳೀಯ ಕನ್ನಡ ಕಲಾವಿದರಿಗೆ ಪ್ರೋತ್ಸಾಹ ನೀಡಿ ಮುಂದೆ ಇನ್ನಿತರ ಹಾಡುಗಳನ್ನು ಚಿತ್ರೀಕರಿಸಿ ಬಿಡುಗಡೆ ಮಾಡುವ ಧ್ಯೇಯ ಹೊತ್ತು ಪ್ರಾರಂಭಿಸಿದ ಈ ಸಂಸ್ಥೆ ಹೀಗೆ ಮುಂದುವರೆದು ಒಳ್ಳೆಯ ಹೆಸರು ಗಳಿಸಲಿ ಎಂದು ಆಗಮಿಸಿದ್ದ ಅತಿಥಿಗಳು ಶುಭ ಹಾರೈಸಿದರು.
ವರದಿ: ಅರವಿಂದ ಸುಬ್ರಹ್ಮಣ್ಯ, ಮ್ಯೂನಿಕ್