“ಸಾಧನೆ’ ಎಂದರೇನು ಎಂಬ ಪ್ರಶ್ನೆಯನ್ನು ಯಾರಿಗಾದರೂ ಕೇಳಿದರೇ ಬರುವ ಉತ್ತರ ಬಹಳ ವಿಭಿನ್ನವಾಗಿರುತ್ತದೆ. ಕೆಲವರಿಗೆ ಕಾರು, ಬಂಗಲೆ ಅಥವಾ ಹಣ ಮಾಡುವುದೇ ಸಾಧನೆಯಾದರೆ, ಹೆಸರು ಹಾಗೂ ಕೀರ್ತಿಗಳಿಸುವುದೇ ಇನ್ನು ಕೆಲವರಿಗೆ ಸಾಧನೆ ಆಗಿರುತ್ತದೆ. ಮತ್ತಷ್ಟು ಕೆದಕಿದರೆ ಅವರಿಂದ ಬರುವ ಉತ್ತರವೇನೆಂದರೆ ಅವರು ಗಳಿಸಿದ ಆ ವಸ್ತುಗಳ ಬಗ್ಗೆ, ಕೀರ್ತಿ ಮತ್ತು ಯಶಸ್ಸಿನ ಕುರಿತು ಸಮಾಜಕ್ಕೆ ತಿಳಿಸಿ, ಅದೇ ಸಮಾಜ ಅವರ ಸ್ಥಾನಮಾನವನ್ನು ಅವರ ಹಣ, ಕಾರು, ಬಂಗಲೆ, ಯಶಸ್ಸು, ಕೀರ್ತಿಯಿಂದ ಅಳೆದು ತೂಗಿ ನೀಡುವ ಪಟ್ಟವೇ ಸಾಧನೆಯಾಗಿರುತ್ತದೆ ಹೊರತು ಅದರಿಂದ ಕಿಂಚಿತ್ತೂ ತೃಪ್ತಿ ಅವರಿಗೆ ಸಿಕ್ಕಿರುವುದಿಲ್ಲ. ಅನಂತರದ ಬದುಕು ಆ ಪಟ್ಟವನ್ನು ಉಳಿಸಿಕೊಳ್ಳುವುದರೊಂದಿಗೆ ಮುಂದುವರೆಯುತ್ತಿರುತ್ತದೆ, ಸಾಧನೆಯ ಹಾದಿ ತಪ್ಪಿ ಹೋಗಿರುತ್ತದೆ.
ನಾವು ಮಾಡುವ ಕೆಲಸದಲ್ಲಿ ಉತ್ತಮ ಸ್ಥಾನ ಗಳಿಸಿದಾಗ ಅಥವಾ ಮಾಡುವ ವ್ಯವಹಾರದಲ್ಲಿ ಅಂದುಕೊಂಡ ಹಾಗೆ ಲಾಭ ಗಳಿಸಿದಾಗ, ನಾವು ಯಶಸ್ಸು ಸಿಕ್ಕಿತೆಂದು ಭಾವಿಸುತ್ತೇವೋ ಇಲ್ಲವೋ, ಆದರೆ ನಮ್ಮನ್ನು ಗಮನಿಸುವ ಸಮಾಜ ಮಾತ್ರ ನಮ್ಮನ್ನು ಅಳೆದು ತೂಗಿ ಅದಕ್ಕೊಂದು ಗೆಲುವು ಅಥವಾ ಸೋಲಿನ ಪಟ್ಟ ಕಟ್ಟಿಬಿಟ್ಟಿರುತ್ತದೆ. ಸಾಮಾನ್ಯವಾಗಿ ನಿಮ್ಮನ್ನು ಅಳೆಯುವ ಸಾಧನ ಮಾತ್ರ ನಿಮ್ಮ ಜೀವನ ಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ.
ನಿಮ್ಮಲ್ಲಿ ಹಣವಿರಲಿ ಇಲ್ಲದಿರಲಿ, ನೀವು ವಾಸಿಸುವ ಮನೆ, ವಾಹನ, ಬಟ್ಟೆಯ ತನಕ ಎಲ್ಲವನ್ನು ಗಮನಿಸಿ ನಿಮಗೊಂದು ಸ್ಥಾನ ಕಲ್ಪಿಸಿಕೊಡುತ್ತದೆ ಈ ಸಮಾಜ. ಹಾಗಾಗಿ ನಮಗೆ ಗೊತ್ತಿಲ್ಲದಂತೆ ನಾವು ತೋರಿಕೆಯ ಜೀವನ ಶೈಲಿಯನ್ನು ನಮ್ಮದಾಗಿಸಿಕೊಳ್ಳುತ್ತ ಹೋಗುತ್ತೇವೆ. ಸಮಾಜ ನಿರ್ಧರಿಸುವ ಆ ಒಂದು ಪೊಳ್ಳು ಪಟ್ಟಕ್ಕೆ ನಮ್ಮ ತಲೆ ಕೊಟ್ಟು ಬಿಡುತ್ತೇವೆ. ಸಾಧನೆಯೆಂದರೆ ಸಮಾಜ ತಮ್ಮನ್ನು ಗುರುತಿಸುವುದೇ ಎಂಬ ಭ್ರಮಾ ಲೋಕದೊಳಗೆ ಸಿಲುಕಿಬಿಟ್ಟಿರುತ್ತೇವೆ.
ಇತ್ತೀಚೆಗೆ ಕೊಂಡುಕೊಳ್ಳುವ ಸಣ್ಣ ಪುಟ್ಟ ವಸ್ತುಗಳನ್ನು ಸಹ ಏನನ್ನೋ ಸಾಧಿಸಿದ ಹಾಗೆ ಪ್ರಚಾರ ಕೊಟ್ಟುಕೊಳ್ಳುವ ಚಾಳಿ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೋ ಮೆಚ್ಚಿಸಬೇಕು ಎಂಬ ಹಪಾಹಪಿಯಲ್ಲಿ ಹಾಕುವ ಪೋಸ್ಟ್‌ಗಳನ್ನೂ ನೋಡಿದಾಗ, ತಮ್ಮನ್ನು ಕೆಳ ಹಂತಕ್ಕೆ ಸಮಾಜ ಏನಾದರೂ ನೂಕಿಬಿಟ್ಟರೆ ಏನು ಗತಿ? ಎಂಬ ಭಯದಲ್ಲಿ ಬದುಕುತ್ತಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ಅನಾವಶ್ಯಕ ಆಡಂಬರದ, ಸುಳ್ಳಿನ ಜೀವನ ಶೈಲಿಯನ್ನು ರೂಪಿಸಿಕೊಳ್ಳುತ್ತಿದ್ದೇವೇನೋ ಎಂದು ಅನ್ನಿಸುತ್ತದೆ.
ಯಾವುದೋ ಒಂದು ವಸ್ತು, ಕಾರು, ಬಂಗಲೆ…. ಇತ್ಯಾದಿಗಳನ್ನು ಕೊಂಡುಕೊಳ್ಳುವ ಆಸೆ, ಕನಸು ಪ್ರತಿಯೊಬ್ಬ ಮನುಷ್ಯನಿಗೆ ಇರುತ್ತದೆ. ಆ ಆಸೆಗಳನ್ನು ಅಥವಾ ಕನಸುಗಳನ್ನು ಈಡೇರಿಸಿಕೊಳ್ಳುವುದೇ ಒಂದು ಸಾಧನೆ ಎಂದುಕೊಳ್ಳುವ ಜನ ಈ ಸಮಾಜದಲ್ಲಿ ಅತೀ ಹೆಚ್ಚು ಕಾಣ ಸಿಗುತ್ತಾರೆ. ಆದರೆ ಅವುಗಳಿಂದ ಮತ್ತಷ್ಟು ಕೊಳ್ಳು ಬಾಕತನ ಹೆಚ್ಚುತ್ತದೆಯೇ ಹೊರತು ತೃಪ್ತಿಯ ಭಾವನೆ ಖಂಡಿತ ಸಿಗುವುದಿಲ್ಲ ಎಂಬ ಸತ್ಯ ಅರಿಯುವುದು ಬಹಳ ಅವಶ್ಯಕವಾಗಿದೆ.
ಇಂದಿನ ದಿನಗಳಲ್ಲಿ ಕೇವಲ ವಸ್ತುಗಳಿಗೆ ಸೀಮಿತವಾಗದೆ ಹಬ್ಬ, ಹರಿದಿನಗಳ ಆಚರಣೆಗಳೂ ಕೂಡ ಭಕ್ತಿಯ ಭಾವನೆ ಕಡೆಗಣಿಸಿ ಸಮಾಜ ಜಾಲತಾಣಗಳ ಮೂಲಕ ಪ್ರದರ್ಶನಕ್ಕೆ ಸೀಮಿತವಾಗಿದೆ. ಪೂಜೆ-ಪುನಸ್ಕಾರಗಳು ಮನಸ್ಸಿನ ಶಾಂತಿಗಾಗಿಯೇ ಹೊರತು ಯಾರನ್ನೋ ಮೆಚ್ಚಿಸುವ, ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ಸಿಗುವ ಲೈಕ್ಸ್ ಗಳಿಗಲ್ಲ. ಸಾಧನೆ ಮತ್ತು ಯಶಸ್ಸು ಅಂದರೆ ಕೇವಲ ಹಣ ಎಂಬ ಭಾವನೆ ಅನೇಕರಲ್ಲಿ ಬೇರೂರಿಬಿಟ್ಟಿದೆ.
ವೈಯುಕ್ತಿಕವಾಗಿ ಇಲ್ಲವೇ ವೃತ್ತಿಪರತೆಯಲ್ಲಿ ಸಾಧನೆ ಎಂದರೆ ಅದು ನಿಮಗೆ ಸಿಗುವ ಆತ್ಮ ತೃಪ್ತಿಯ ಭಾವನೆಯೇ ಹೊರತು ಗಳಿಸುವ ಸ್ಥಾನ, ಕೀರ್ತಿ ಅಥವಾ ಹಣವಲ್ಲ ಎಂಬ ಸತ್ಯ ಅರಿಯಬೇಕು. ಸಾಧನೆಯ ಉದ್ದೇಶದಿಂದ ವಿಮುಖರಾಗದೆ ಆ ಸಾಧನೆಯ ಹಾದಿಯಲ್ಲಿ ಸಾಗುವುದು ಬಹಳ ಕಷ್ಟದ ಕೆಲಸ. ವೈಯುಕ್ತಿಕ, ವೃತ್ತಿಪರ ಹಾಗೂ ಸಾಮಾಜಿಕವಾಗಿ ಯಾವುದೋ ಒಂದು ಸದುದ್ದೇಶವಿಟ್ಟುಕೊಂಡು ಸಾಧಿಸಲು ಹೊರಟಾಗ ಸಿಗುವ ಸಣ್ಣ ಮಟ್ಟದ ಯಶಸ್ಸು, ಹೆಸರು, ಕೀರ್ತಿ, ಹಣ ಸಾಧನೆಯ ಉದ್ದೇಶ ಮರೆತು ಸಮಾಜ ನೀಡುವ ಒಂದು ಪಟ್ಟಕ್ಕೆ ತೃಪ್ತಿ ಪಟ್ಟು ಇಷ್ಟೇ ಸಾಕು ಎನ್ನುವ ಭಾವನೆಯಿಂದ ಸಾಧನೆಯ ಹಾದಿ ಬಿಟ್ಟವರು ಅನೇಕ ಜನರ ನಮ್ಮ ಮಧ್ಯೆ ಸಿಗುತ್ತಾರೆ.
ನಾವು ಮಾಡುವ ಸಾಧನೆ ನಮ್ಮ ಮನಸ್ಸಿಗೆ ತೃಪ್ತಿ ತರುವ ಮೂಲಕ ಮತ್ತಷ್ಟು ಸಾಧಿಸುವ ಛಲ ನಮ್ಮಲ್ಲಿ ಹುಟ್ಟಿಸಬೇಕು. ವೈಯುಕ್ತಿಕ, ವೃತ್ತಿ ಹಾಗೂ ಸಾಮಾಜಿಕ ಬದುಕಿನ ಸಾಧನೆ ಎಂಬುದು ಸ್ವಾರ್ಥಕ್ಕೆ ಈಡಾಗದಂತೆ ಎಚ್ಚರ ವಹಿಸುವ ಆವಶ್ಯಕತೆ ತುಂಬಾ ಇದೆ. ಸಾಧನೆಯ ಹಾದಿಯಲ್ಲಿ ಸಿಗುವ ಯಶಸ್ಸು, ಕೀರ್ತಿ ಮತ್ತು ಹಣ ನಿಮ್ಮನ್ನು ಗಮನಿಸುವ ಸಮಾಜಕ್ಕೆ ಅಳತೆಗೋಲುಗಳಾಗುತ್ತವೆಯೋ ಹೊರತು ನಮ್ಮನ್ನು ನೋಡಿಕೊಳ್ಳುವ ಕೈಗನ್ನಡಿಯಂತೂ ಅಲ್ಲವೇ ಅಲ್ಲ. ಸಾಧಿಸಿದ ಸಂತೃಪ್ತಿಯ ಭಾವನೆ ಮಾತ್ರ ನಮ್ಮ ಸಾಧನೆಯ ಅಳತೆ ಗೋಲಾಗಬೇಕು ಎಂಬುದು ನನ್ನ ಅನಿಸಿಕೆ. ಆದರೆ ಈ ಅಳತೆಗೋಲು ನಮ್ಮ ಕೈ ಜಾರಿ ಬೇರೆಯವರ ಕೈ ಸೇರದಿರಲಿ.
*ಶ್ರೀನಾಥ್ ಹರದೂರು ಚಿದಂಬರ, ನೆದರ್‌ಲ್ಯಾಂಡ್ಸ್