Advertisement
ಬಾಲಗೋಪಾಲರಾಗಿ ಆದಿಶೇಷ, ಸಂವಿದ್, ಮನಸ್ ಪುಟ್ಟ ಕೃಷ್ಣ , ರಂಗ, ಕೇಶವನಂತೆಯೇ ತಮ್ಮ ಹೆಜ್ಜೆಯ ಗೆಜ್ಜೆನಾದದಲ್ಲಿ ತಲ್ಲೀನಗೊಳಿಸಿದರು. ಪೂರ್ವರಂಗ ಪೀಠಿಕೆ ಸ್ತ್ರೀವೇಷ ಪ್ರಾತ್ಯಕ್ಷಿಕೆಯಲ್ಲಿ ಶ್ರೀದೇವಿಯವರು ತಮ್ಮ ಮೃದು ಹಾವಭಾವದಿಂದ ಮಾರ ಸುಂದರನ ಕರೆತಂದರು. ಹಿಮ್ಮೇಳದಲ್ಲಿ ಸ್ವಾತಿಯವರ ಗಾನ, ಅಜಿತ್‌ರವರ ಮೃದಂಗ ನೆರೆದವರ ಮನವನ್ನು ತಣಿಸಿತು. ಬಡಗುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ತೆರೆ ಒಡ್ಡೋಲಗ ಪ್ರಾತ್ಯಕ್ಷಿಕೆಯನ್ನು ಯಕ್ಷಗಾನ ಗುರು ಹಾಗೂ ಚಿಣ್ಣರು ಲಯಬದ್ಧವಾಗಿ ನಡೆಸಿಕೊಟ್ಟರು.
Related Articles
ಕಳೆದ ಒಂದು ವರ್ಷದಿಂದ ಯಕ್ಷಗಾನ ಗುರು ಅಜಿತ್ ಪ್ರಭುರವರು ಜರ್ಮನಿಯಲ್ಲಿನ ಮ್ಯೂನಿಕ್, ಫ್ರಾಂಕ್‌ಫರ್ಟ್, ನ್ಯೂರೆನºರ್ಗ್ ಮತ್ತು ಬೆಲ್ಜಿಯಂನ ಬ್ರುಸೆಲ್ಸ್ ನಗರಗಳಲ್ಲಿನ ಹಲವಾರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿದ್ದು , ಈ ವಿದ್ಯಾರ್ಥಿಗಳಿಂದ ಕೋಟ ಶಿವರಾಮ ಕಾರಂತರು ಪರಿಚಯಿಸಿದ ಯಕ್ಷಗಾನ ಬ್ಯಾಲೆ ರೂಪದಲ್ಲಿ ಪ್ರದರ್ಶನಗೊಂಡ “ಮಾಯಾಮೃಗ ಯಕ್ಷಗಾನ ರೂಪಕ ಮಕ್ಕಳಿಗೆ ಉತ್ತಮ ವೇದಿಕೆಯೊಂದಿಗೆ ಅವರಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ನಮ್ಮ ಸಾಂಪ್ರದಾಯಿಕ ಕಲೆಯ ಬಗೆಗೆ ಪ್ರೀತಿ ಇಮ್ಮಡಿಗೊಳಿಸಿದೆ.
Advertisement
ಅಜಿತ್‌ರವರು ಗುರುವಾಗಿ ಮಾಡಿದ ತಮ್ಮ ಜ್ಞಾನ, ಅನುಭವ, ಪರಿಶ್ರಮ, ಗಲಿಕೆ ಹಾಗೂ ಸಮಯದ ಹೂಡಿಕೆ ಸಾರ್ಥಕತೆ ಪಡೆದಿದೆ. ರಾಮನಾಗಿ – ಸಂವಿದ್, ಲಕ್ಷಣನಾಗಿ – ಆದಿಶೇಷ, ಸೀತೆಯಾಗಿ – ಸ್ನಿಗ್ಮಾ, ಜಟಾಯುವಾಗಿ – ಅರ್ನವ್, ಸನ್ಯಾಸಿ ರಾವಣನಾಗಿ – ಅಥರ್ವ್, ರಾವಣನಾಗಿ – ಅರವಿಂದ್, ಶೂರ್ಪನಖೀಯಾಗಿ – ಶ್ರೀಧರ್, ಮಾರೀಚನಾಗಿ – ಕಾರ್ತಿಕ್, ಮಿಂಚಿ ಮರೆಯಾಗುವ ಮಾಯಾಮೃಗವಾಗಿ – ಖುಷಿ ಯಕ್ಷಗಾನದ ಸಾಂಪ್ರದಾಯಿಕ ವೇಷಭೂಷಣ ತೊಟ್ಟು, ಭಾವಕ್ಕೆ ತಕ್ಕ ಅಭಿವ್ಯಕ್ತಿ , ಗಾನಕ್ಕೆ ತಕ್ಕ ನಾಟ್ಯದೊಂದಿಗೆ ನೋಡುಗರ ಹೃನ್ಮನಗಳಿಗೆ ರಸಧಾರೆ ಹರಿಸಿದ್ದಾರೆ. ಹೊನ್ನ ಜಿಂಕೆಯ ಮೋಹಕ್ಕೆ ಒಳಗಾಗಿ ಬೇಕೆಂದು ಹಠ ಹಿಡಿದ ಸೀತೆ ರಾಮನನ್ನು ಅದನ್ನು ಹಿಡಿದು ತರುವಂತೆ ಕಳುಹಿಸಿ, ಲಕ್ಷ್ಮಣನ ರಕ್ಷಾರೇಖೆಯನ್ನೂ ದಾಟಿ, ರಾವಣನ ಕಪಟತನಕ್ಕೆ ಬಲಿಯಾಗಿ ಅಪಹರಣವಾಗುವ ಕಥಾಹಂದರವುಳ್ಳ ಮಾಯಾಮೃಗ ಬ್ಯಾಲೆ ಗುರುವಿನ ಮಾರ್ಗದರ್ಶನ ಮತ್ತು ಮಕ್ಕಳ ಅಭ್ಯಾಸದ ಸಮ್ಮಿಳಿತವಾಗಿ ಅದ್ಭುತವಾಗಿ ಮೂಡಿಬಂತು.
ಮುಖ್ಯ ಅತಿಥಿ, ಭಾರತೀಯ ರಾಯಭಾರ ಕಚೇರಿಯ ಸಾಂಸ್ಕೃತಿಕ ಅಧಿಕಾರಿ ರಾಜೀವ್ ಚಿತ್ಕರ್‌ರವರು ದೀಪ ಬೆಳಗಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕದ ಉದ್ಘಾಟನೆ ಮಾಡಿದರು. ಯಕ್ಷಗಾನ ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ ಇಂತಹ ಪ್ರಾಚೀನ ಕಲೆಯನ್ನು ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿ ಈ ಯಕ್ಷಧ್ರುವ ಸಂಸ್ಥೆಯು ಯಶಸ್ವಿಯಾಗಲೆಂದು ಅಶಿಸಿದರು.
ಮುಖ್ಯ ಅಭ್ಯಾಗತರಾಗಿದ್ದ ಮ್ಯೂನಿಕ್ ನಗರದ ಎಲ್‌ಎಮ್‌ಯೂ ವಿಶ್ವವಿದ್ಯಾನಿಲಯ ಇಂಡಲಾಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ| ರೋಬೀಬ್ ಝೈಡೇನೊಸ್‌ರವರು ಮೂಲತಃ ಜರ್ಮನ್ ಭಾಷಿಗರಾಗಿದ್ದರೂ, ಅಚ್ಚ ಕನ್ನಡದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅವರು ಶಿವಮೊಗ್ಗದ ಒಂದು ಸಣ್ಣ ಹಳ್ಳಿಯಲ್ಲಿ ಬಯಲಿನಲ್ಲಿ ಕೂತು ಯಕ್ಷಗಾನ ನೋಡಿ ಪರಮಾಶ್ಚರ್ಯವಾಗಿತ್ತು ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.