Advertisement

ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

05:04 PM Oct 30, 2024 | Team Udayavani |

■ ಉದಯವಾಣಿ ಸಮಾಚಾರ
ಶಿರಸಿ: ನಗರದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶಾಸಕ ಭೀಮಣ್ಣ ನಾಯ್ಕ ನಗರದ ಆಡಳಿತ ಸೌಧದ ಮುಂಭಾಗದಲ್ಲಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಶಿರಸಿಯಲ್ಲಿ 24ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ತಿರ್ಮಾನಿಸಲಾಗಿದೆ. ಮೊದಲ ಹಂತವಾಗಿ ಲಾಂಛನ ಬಿಡುಗಡೆ ಮಾಡಲಾಗಿದೆ. ಪ್ರತಿಯೊಬ್ಬರೂ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.

Advertisement

ತಹಶೀಲ್ದಾರ್‌ ಶ್ರೀಧರ ಮುಂದಲಮನಿ, ಡಿ.3 ಮತ್ತು 4 ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಶಿರಸಿಯಲ್ಲಿ ನಡೆಯಲಿದೆ. ಅದರ ತಯಾರಿಗಾಗಿ ಅತೀ ಶೀಘ್ರದಲ್ಲಿ ಉಪಸಮಿತಿಗಳನ್ನು ರಚಿಸಬೇಕಿದೆ. ಆರ್ಥಿಕವಾಗಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಮಿತಿ ರಚಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲೂ ಹೆಚ್ಚಿನ ಪ್ರಚಾರ ಮಾಡಬೇಕಿದೆ. ಬಸ್‌ಗಳಲ್ಲಿ ಕರಪತ್ರ ಹಂಚುವ ಮೂಲಕ ಪ್ರಚಾರ ಕಾರ್ಯ ಮಾಡಲಾಗುತ್ತದೆ ಎಂದರು.

ಜಿಲ್ಲಾಧ್ಯಕ್ಷ ಬಿ.ಎನ್‌. ವಾಸನೆ, ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್‌.ಡಿ. ಹೆಗಡೆ ಆಲ್ಮನೆ ಆಯ್ಕೆಯಾಗಿದ್ದಾರೆ. ಶಾಸಕರು ಲಾಂಛನ ಸಹ ಬಿಡುಗಡೆ ಮಾಡಿದ್ದಾರೆ. ಇಂದಿನಿಂದ ಕಾರ್ಯಕ್ರಮದ ತಯಾರಿ ಭರದಿಂದ ಸಾಗಲಿದೆ. 5 ರಿಂದ 6 ಸಾವಿರ ಆಜೀವ ಸದಸ್ಯರಿದ್ದಾರೆ. ಅವರೆಲ್ಲರಿಗೂ ಆಮಂತ್ರಣ ಪತ್ರಿಕೆ ಕಳುಹಿಸಲಾಗುತ್ತದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಜಿ. ಸುಬ್ರಾಯ ಭಟ್‌ ಬಕ್ಕಳ, ಜಿಲ್ಲಾಧ್ಯಕ್ಷರ ಒಪ್ಪಿಗೆ ಮೇರೆಗೆ ಹಲವು  ಸಮಿತಿಗಳನ್ನು ರಚಿಸಲಾಗುತ್ತದೆ. ಎಲ್ಲರ ಸಹಕಾರದೊಂದಿಗೆ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಸಲು ಶ್ರಮಿಸುತ್ತಿದ್ದೇವೆ. ಈ ಹಿಂದೆ ನಡೆದ ಎಲ್ಲಾ ಸಮ್ಮೇಳನಕ್ಕಿಂತ ಶಿರಸಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸಾಹಿತ್ಯ ಸಮ್ಮೇಳನಕ್ಕೆ ನಗರಸಭೆ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. ತಹಶೀಲ್ದಾರ್‌ ಶ್ರೀಧರ ಮುಂದಲಮನಿ, ಹಿರಿಯ ಸಾಹಿತಿ ಭಾಗೀರಥಿ ಹೆಗಡೆ, ನಗರಸಭೆ ಪೌರಾಯುಕ್ತ ಕಾಂತರಾಜ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ್‌ ಗೌಡ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್‌, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ತಾಪಂ ಮುಖ್ಯ ಕಾರ್ಯನಿರ್ವಾಹಕ ಸತೀಶ ಹೆಗಡೆ, ಸಿಪಿಐ ಶಶಿಕಾಂತ ವರ್ಮಾ ಹಾಗೂ ಕಸಾಪ ಪದಾಧಿಕಾರಿಗಳು, ಎಸ್‌.ಕೆ. ಭಾಗವತ ಹಾಗೂ ಸಾರ್ವಜನಿಕರು ಇದ್ದರು.

Advertisement

ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳು ಹಾಗೂ ಬನವಾಸಿ, ಶಿರಸಿಯ ಪ್ರಸಿದ್ಧ ಸ್ಥಳಗಳ ಚಿತ್ರಗಳನ್ನು ಲಾಂಛನದಲ್ಲಿ
ಬಳಸಿಕೊಳ್ಳಲಾಗಿದೆ. ಯಕ್ಷಗಾನ, ಶಿರಸಿ ಬೇಡರ ವೇಷ, ಕರಾವಳಿ, ಮಲೆನಾಡು, ಮಾರಿಕಾಂಬೆ, ಯಾಣ, ಅಡಕೆ, ಭತ್ತ ಎಲ್ಲವೂ ಒಳಗೊಂಡ ಆಕರ್ಷಕ ಲಂಛನ ಇದಾಗಿದೆ. ಎಲ್ಲರ ಸಹಕಾರ, ಸಹಾಯ ಪಡೆದು ಸಮ್ಮೇಳನ ಯಶಸ್ವಿಗೊಳಿಸಬೇಕಿದೆ. ಇಲಾಖೆಗಳು, ಸಾಹಿತ್ಯ ಪರಿಷತ್‌ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದೆ.
●ಬಿ.ಎನ್‌. ವಾಸರೆ, ಅಧ್ಯಕ್ಷರು,
ಜಿಲ್ಲಾ ಕಸಾಪ, ಉತ್ತರ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next