ಬೆಂಗಳೂರು: ‘ಮೇಲ್ವರ್ಗಗಳಿಗೆ ಶೇ.10 ಮೀಸಲಾತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಸಂವಿಧಾನದ 103ನೇ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸಂವಿಧಾನದ ಅಡಿಯಲ್ಲೇ ಸಂವಿಧಾನಕ್ಕೆ ಮಾಡಿರುವ ಅಪಚಾರ’ ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರು.
ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆ ಶುಕ್ರವಾರ ನಗರದ ಜೈ ಭೀಮ್ ಭವನದಲ್ಲಿ ‘ಮೇಲುವರ್ಗಗಳಿಗೆ ನೀಡಲಾದ ಶೇ.10 ರಷ್ಟು ಮೀಸಲಾತಿ ಸಂಬಂಧಿತ ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ ಕುರಿತ ಚರ್ಚೆ’ ಯಲ್ಲಿ ಪಾಲ್ಗೊಂಡು ಮಾತನಾಡಿದರು. ತಿದ್ದುಪಡಿ ಬಗ್ಗೆ ಯಾವುದೇ ರೀತಿ ಚರ್ಚೆ ನಡೆಸದೇ ಅಂಗೀಕಾರ ಮಾಡಿರುವುದು ಒಂದು ವರ್ಗದ ಹಿತಕಾಯುವ ಕುತಂತ್ರವಾಗಿದೆ’ ಎಂದು ದೂರಿದರು.
‘ಆರ್ಥಿಕ ಪ್ರಗತಿ ಹೆಸರಿನಲ್ಲಿ ಮೇಲುವರ್ಗಗಳಿಗೆ ಮೀಸಲಾತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಮೀಸಲಾತಿ ಪಡೆಯುವ ಸಂಬಂಧ ನೀಡಲಾಗಿರುವ ಷರತ್ತುಗಳು ಕೂಡ ಸಾಮಾಜಿಕವಾಗಿ ಕೆಳ ಸ್ಥರದ ಜನರ ಹಿತಕಾಯುವಂತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾ.ಪಂ ನಲ್ಲೂ ಮೀಸಲಾತಿ ?: ‘ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರ ಸಂವಿಧಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ರಾಜಕೀಯ ಲಾಭದ ಲೆಕ್ಕಾಚಾರ ಇದರಲ್ಲಿ ಅಡಗಿದೆ. ಇದು ಪ್ರಾಥಮಿಕ ಪ್ರಯೋಗ ಅಷ್ಟೇ, ಮುಂದಿನ ದಿನಗಳಲ್ಲಿ ಶೇ.10 ಇದದ್ದು 20 ಆಗಬಹುದು. ಜತಗೆ ಗ್ರಾಪಂ, ತಾಪಂ, ಜಿಪಂ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಮೀಸಲಾತಿಯನ್ನು ಕೇಳುವ ಕಾಲ ದೂರವಿಲ್ಲ ಎಂದರು.
ಹೈಕೋರ್ಟ್ ನ್ಯಾಯವಾದಿ ಮನೋರಂಜನಿ ಮಾತನಾಡಿ, ‘ರಾಷ್ಟ್ರಪತಿ ಭವನ, ಪ್ರಧಾನಿ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದಲ್ಲಿ ಅಧಿಕ ಸಂಖ್ಯೆಯಲ್ಲಿ ಮೇಲು ವರ್ಗದವರೇ ಕಾರ್ಯನಿರ್ವ ಹಿಸುತ್ತಿದ್ದಾರೆ. ಪ್ರಧಾನಿ ಸಚಿವಾಲಯದಲ್ಲಿ 35 ಹುದ್ದೆಗಳಲ್ಲಿ 31 ಜನರು ಮೇಲ್ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಾದರೇ ಸಾಮಾಜಿಕ ನ್ಯಾಯ ಎಲ್ಲಿ,’ ಎಂದರು.ನಿವೃತ್ತ ಡಿಡಿಪಿಐ ದೊರೆರಾಜ್, ದಲಿತ ಮುಖಂಡ ಎನ್.ವೆಂಕಟೇಶ್, ಗುರುಪ್ರಸಾದ್ ಕೆರೆಗೋಡು ಉಪಸ್ಥಿತರಿದ್ದರು.