Advertisement

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

12:26 AM Dec 19, 2024 | Team Udayavani |

ದೇಶದ ಹಲವೆಡೆ ಕಳೆದ ಕೆಲವು ವರ್ಷಗಳಿಂದ ಮೀಸಲಾತಿ ಕುರಿತಾಗಿನ ಚರ್ಚೆ ಮುನ್ನೆಲೆಗೆ ಬಂದಿದ್ದು, ವಿವಿಧ ಜಾತಿ, ವರ್ಗ, ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆಯನ್ನು ಸರಕಾರದ ಮುಂದಿಡುತ್ತಲೇ ಬಂದಿವೆ. ರಾಜ್ಯದಲ್ಲೂ ಈಗ ಮೀಸಲಾತಿಗೆ ಆಗ್ರಹಿಸಿ ವಿವಿಧ ಸಮುದಾಯಗಳು ಹೋರಾಟದ ಹಾದಿ ಹಿಡಿದಿವೆ. ಇನ್ನು ದೇಶದ ವಿವಿಧ ರಾಜ್ಯಗಳಲ್ಲಿ ಜಾತಿಗಣತಿ ವಿಷಯವಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

Advertisement

ಮೀಸಲಾತಿ, ಜಾತಿ ಗಣತಿ ವಿಷಯಗಳನ್ನು ಮುಂದಿಟ್ಟು ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆಯ ಸಮಗ್ರ ಪರಾಮರ್ಶೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ ಹಾಲಿ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಂಸತ್‌ ಮತ್ತು ಸರಕಾರ ವಿಸ್ತೃತ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದವರು ನೀಡಿರುವ ಸಲಹೆ ಚಿಂತನಾರ್ಹ ಮಾತ್ರವಲ್ಲದೆ ಸಮಯೋಚಿತ ಕೂಡ.

ಪ್ರತಿಯೊಂದು ಚುನಾವಣೆ ಎದುರಾದಾಗಲೂ ರಾಜಕೀಯ ಪಕ್ಷಗಳು ವಿವಿಧ ಜಾತಿ, ಸಮುದಾಯಗಳನ್ನು ಓಲೈಸುವ ಭರದಲ್ಲಿ ಮೀಸಲಾತಿಯ ಭರವಸೆಯನ್ನು ನೀಡುತ್ತಲೇ ಬಂದಿವೆ. ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಖಾತರಿ ಪಡಿಸುವ ಸಲುವಾಗಿ ಜಾರಿಗೊಳಿಸಲಾದ ಮೀಸಲಾತಿ ಸೌಲಭ್ಯದ ಪ್ರಯೋಜನವನ್ನು ಅನರ್ಹರೂ ಪಡೆಯುತ್ತಿದ್ದಾರೆ ಎಂಬ ಆರೋಪ ಇಂದು-ನಿನ್ನೆಯದೇನಲ್ಲ. ಇದೇ ವೇಳೆ ಮೀಸಲಾತಿ ಸೌಲಭ್ಯವನ್ನು ಆಯಾ ಸಮುದಾಯಗಳ ಕೆಲವೇ ಕುಟುಂಬಗಳು ನಿರಂತರವಾಗಿ ಪಡೆಯುತ್ತಿದ್ದು ಇದರಿಂದಾಗಿ ಆ ಸಮುದಾಯಗಳ ಭಾರೀ ಸಂಖ್ಯೆಯ ಅರ್ಹರು ಈ ಸೌಲಭ್ಯದಿಂದ ವಂಚಿತರಾಗುತ್ತಿರುವುದು ಕೂಡ ಸುಳ್ಳಲ್ಲ.

ಈ ಎಲ್ಲ ಕಾರಣಗಳಿಂದಾಗಿ ಮೀಸಲಾತಿಯ ರದ್ದತಿ, ಮೀಸಲಾತಿ ನಿಯಮಾವಳಿಗಳ ಮಾರ್ಪಾಡು, ಮಾನದಂಡಗಳ ಪರಿಷ್ಕರಣೆ ಆದಿಯಾಗಿ ಹತ್ತು ಹಲವು ಮನವಿ, ಆಗ್ರಹಗಳು ರಾಜಕೀಯ ಮತ್ತು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಲೇ ಇವೆ. ಇದರ ಹೊರತಾಗಿಯೂ ಮೀಸಲಾತಿ ವಿಷಯವಾಗಿ ಹಲವು ರಾಜ್ಯಗಳಲ್ಲಿ ವಿವಿಧ ಜಾತಿ, ಸಮುದಾಯಗಳ ನಡುವೆ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಬಂದಿವೆ.

ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನು ಹಾಲಿ ಜಾರಿಯಲ್ಲಿರುವ ಜಾತಿ ಆಧರಿತ ಮೀಸಲಾತಿ ರದ್ದತಿಯ ಆಗ್ರಹಕ್ಕೆ ತೀವ್ರತೆರನಾದ ವಿರೋಧವೂ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೀಸಲಾತಿ ಸೌಲಭ್ಯದ ಹೊರತಾಗಿಯೂ ಇಂದಿಗೂ ನೂರಾರು ಸಮುದಾಯಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿಯೇ ಇವೆ. ಹಾಗಾದರೆ ಸರಕಾರದ ಸೌಲಭ್ಯಗಳು ಈ ಸಮುದಾಯಗಳನ್ನು ತಲುಪಿಲ್ಲವೇ ಎಂಬ ಪ್ರಶ್ನೆ ಕಾಡುವುದು ಸಹಜವೇ. ಈ ಎಲ್ಲ ವಿಷಯಗಳ ಬಗೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಸ್ತಾವಿಸಿ, ಇತ್ತ ಸಂಸತ್‌ ಮತ್ತು ಸರಕಾರ ಗಂಭೀರವಾಗಿ ಚಿಂತಿಸಿ, ಸಮಾಲೋಚನೆ ನಡೆಸಿ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಕಿವಿಮಾತು ಹೇಳುವ ಮೂಲಕ ಈ ವಿಷಯದಲ್ಲಿ ಏಕಾಏಕಿ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಮಾಜಿ ಪ್ರಧಾನಿ ಅವರ ಈ ಸಲಹೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ, ರಾಜಕೀಯ ಪ್ರತಿಷ್ಠೆಗಳೆಲ್ಲವನ್ನು ಬದಿಗಿರಿಸಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ದೇಶದ ಹಾಲಿ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗನುಗುಣವಾಗಿ ಮೀಸಲಾತಿ ವಿಷಯದಲ್ಲಿ ದೃಢ ನಿರ್ಧಾರವನ್ನು ಕೈಗೊಂಡು ಅನುಷ್ಠಾನಕ್ಕೆ ತರುವ ನಿಟ್ಟನಲ್ಲಿ ಕೇಂದ್ರ ಸರಕಾರ ಮುಂದಡಿ ಇರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next