ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅವರು ಸರ್ಜರಿಯಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಅಮೆರಿಕದ ಮಿಯಾಮಿ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್ ಸರ್ಜರಿಗೆ ಒಳಗಾಗಿದ್ದರು. ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನು ತೆಗೆಯುವ ಮೂಲಕ ಸರ್ಜರಿ ಮಾಡಲಾಗಿತ್ತು.ಇದೀಗ ಚಿಕಿತ್ಸೆ ಪಡೆದ ಬಳಿಕ ಇದೇ ಮೊದಲ ಬಾರಿ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.
ವಿಡಿಯೋ ಮಾಡಿ ಮಾತನಾಡಿರುವ ಅವರು, “ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ಸ್ವಲ್ಪ ಭಯ ಆಗುತ್ತದೆ ಮಾತನಾಡುವಾಗ ಸ್ವಲ್ಪ ಎಮೋಷನಲ್ ಆಗುತ್ತೇನೆ ಅಂಥ. ಹೊರಡುವಾಗ ಸ್ವಲ್ಪ ಭಾವುಕನಾಗಿದ್ದೆ. ಭಯ ಅನ್ನುವಂಥದ್ದು ಮನುಷ್ಯನಿಗೆ ಇದ್ದೇ ಇರುತ್ತದೆ. ಭಯ ನೀಗಿಸಲು ಕೆಲ ಅಭಿಮಾನಿಗಳು ಇದ್ದೇ ಇರುತ್ತಾರೆ. ಕೆಲ ಸಹ ಕಲಾವಿದರು ಇರುತ್ತಾರೆ. ಕೆಲ ಸ್ನೇಹಿತರು ಇರುತ್ತಾರೆ. ಸಂಬಂಧಿಕರು ಇರುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ವೈದ್ಯರು ಇರುತ್ತಾರೆ. ಪ್ರತಿಯೊಬ್ಬರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದಿದ್ದಾರೆ.
ʼ45ʼ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಆರಾಮವಾಗಿ ಇರ್ತಾ ಇದ್ದೆ. ಅದು ಯಾವ ಜೋಶೋ ಗೊತ್ತಿಲ್ಲ. 45 ಸಿನಿಮಾದ ಕ್ಲೈಮ್ಯಾಕ್ಸ್ ಇಡೀ ನಾನು ಕಿಮೋಥೆರಪಿಯಲ್ಲೇ ಕಳದೆ. ಹೊರಡುವ ಡೇಟ್ ಹತ್ರ ಬರುತ್ತಿದ್ದಂತೆ ಟೆನ್ಷನ್ ಜಾಸ್ತಿ ಆಗ್ತಾ ಬಂತು. ನನಗೆ ನನ್ನ ಸ್ನೇಹಿತರು, ಪತ್ನಿ, ಮಗಳು ತುಂಬಾ ಸರ್ಪೋರ್ಟ್ ಮಾಡಿದರು. ನಾನು ಯಾರನ್ನು ಮರೆಯಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ನನ್ನನ್ನು ನೋಡಿಕೊಂಡ ವೈದ್ಯರು, ಸ್ಟಾಫ್ ಗಳು ಹಾಗೂ ಸ್ನೇಹಿತರು ನನಗೆ ಇನ್ನೊಂದು ತಾಯಿ ತರಾ. ಇದೆಲ್ಲ ಅಷ್ಟು ಸುಲಭವಲ್ಲ ಮಾಡೋದು. ಇದು ದೊಡ್ಡ ಆಪರೇಷನ್. ಮೂತ್ರಪಿಂಡ ಕಸಿ ಅಂಥ ಎಲ್ಲರೂ ಅಂದುಕೊಂಡಿದ್ದಾರೆ ಅದೆಲ್ಲ ಏನು ಇಲ್ಲ. ಮೂತ್ರಕೋಶ ತೆಗೆದು ಹೊಸ ಮೂತ್ರಕೋಶ ಹಾಕಿದ್ದಾರೆ. ಇದೇ ನಡೆದಿರುವುದು. ಡಿಟೈಲ್ ಎಲ್ಲ ಹೇಳೋಕೆ ಎಲ್ಲ ಗಾಬರಿ ಅಗ್ತಾರೆ. ಗಾಬರಿ ಎಲ್ಲ ನಮಗಿರಲಿ. ನಿಮ್ಮೆಲ್ಲರ ಆರ್ಶೀವಾದ ನನ್ನ ಮೇಲಿರಲಿ. ನಾನು ಮತ್ತೆ ಬರ್ತಿನಿ. ವೈದ್ಯರು ಹೇಳಿದ್ದಾರೆ ಮೊದಲ ಒಂದು ತಿಂಗಳು ಸ್ವಲ್ಪ ನಿಧಾನಕ್ಕೆ ಹೋಗಿ ಅಂಥ. ಮಾರ್ಚ್ ನಲ್ಲಿ ಬರ್ತಿನಿ. ಶಿವಣ್ಣ ಹೇಗೆ ಇದ್ನೋ ಹಾಗೆ ಇರುತ್ತಾನೆ. ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತದೆ. ಡ್ಯಾನ್ಸಿಂಗ್, ಫೈಟಿಂಗ್ ಇರಬಹುದು. ನಿಮ್ಮ ಆರ್ಶೀವಾದ ಇರುವವರೆಗೆ ಖಂಡಿತ ಹಾಗೆಯೇ ಇರುತ್ತೇನೆ. ನಿಮ್ಮ ಪ್ರೀತಿ – ವಿಶ್ವಾಸವನ್ನು ಮರೆಯಲ್ಲ ಎಂದು ಶಿವಣ್ಣ ಹೇಳಿದ್ದಾರೆ.
‘ಶಿವರಾಜ್ ಕುಮಾರ್ ಅವರ ಎಲ್ಲ ವೈದ್ಯಕೀಯ ಪರೀಕ್ಷಾ ವರದಿಗಳು ಬಂದಿದ್ದು, ಎಲ್ಲದರಲ್ಲೂ ನೆಗೆಟಿವ್ ಬಂದಿದೆ. ಶಿವಣ್ಣ ಈಗ ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ವೈದ್ಯರು ಅಧಿಕೃತ ಹೇಳಿಕೆ ನೀಡಿದ್ದು, ಅಭಿಮಾನಿಗಳು, ಗುರು-ಹಿರಿಯರ ಪ್ರಾರ್ಥನೆಯ ಫಲವಾಗಿ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂದ ಗುಣಮುಖರಾಗಿದ್ದಾರೆ. ನಿಮಗೆಲ್ಲರಿಗೂ ಧನ್ಯವಾದ ಎಂದು ಗೀತ ಶಿವರಾಜ್ ಕುಮಾರ್ ಹೇಳಿದ್ದಾರೆ.