Advertisement

ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ

01:02 AM Dec 13, 2024 | Team Udayavani |

ಹುಬ್ಬಳ್ಳಿ: ಪಂಚಮಸಾಲಿ ಮೀಸಲಾತಿ ಕಿಚ್ಚು ರಾಜ್ಯಾದ್ಯಂತ ಭುಗಿಲೆದ್ದಿದೆ. 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಮೇಲೆ ಲಾಠಿ ಪ್ರಹಾರ ನಡೆಸಿದ ಸರಕಾರದ ಕ್ರಮವನ್ನು ಖಂಡಿಸಿ ಗುರುವಾರ ಸದನದ ಒಳಗೆ ಮತ್ತು ಹೊರಗೆ ಆಕ್ರೋಶ ಭುಗಿಲೆದ್ದಿದೆ.

Advertisement

ಸುವರ್ಣ ವಿಧಾನಸೌಧದ ಮುಂಭಾಗ ಬಿಜೆಪಿ ಪ್ರತಿಭಟನೆ ನಡೆಸಿದರೆ, ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಗುರುವಾರದ ಪ್ರತಿಭಟನೆಯಲ್ಲಿ ಕೂಡಲ ಸಂಗಮ ಶ್ರೀ ಪಾಲ್ಗೊಂಡು ಸರಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶ್ರೀಗಳ ಕರೆಯ ಮೇರೆಗೆ ಗುರುವಾರ ಉತ್ತರ ಕರ್ನಾಟಕ ಭಾಗದ ಪ್ರತೀ ತಾಲೂಕಿನಲ್ಲೂ ಸರಕಾರದ ವಿರುದ್ಧ ಘೋಷಣೆ ಕೂಗಿ, ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತವಾಗಿದೆ.

ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಪ್ರಹಾರವನ್ನು ಬಿಜೆಪಿಯು ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಪ್ರಸ್ತಾವಿಸಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರೆ, ಸರಕಾರದ ನಡೆಯನ್ನು ಗೃಹ ಸಚಿವ ಪರಮೇಶ್ವರ್‌ ಸಮರ್ಥಿಸಿಕೊಂಡಿದ್ದಾರೆ.

ಕ್ಷಮೆ ಕೇಳಬೇಕು
ಧಾರವಾಡದಲ್ಲಿ ಸ್ವತಃ ಕೂಡಲಸಂಗಮ ಶ್ರೀ ಭಾಗವಹಿಸಿ ಪ್ರತಿಭಟನೆ ಕಾವು ಹೆಚ್ಚಿಸಿದ್ದಾರೆ. ಜತೆಗೆ ಪಂಚ ಪೀಠದ ವಿವಿಧ ಮಠಾಧೀಶರು ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ವಾಪಸ್‌ ಪಡೆಯ ಬೇಕೆಂದು ಆಗ್ರಹಿಸಿದ್ದಾರೆ. ಬಾಗಲಕೋಟೆ ತಾಲೂಕಿನ ಸಂಗಮ ಕ್ರಾಸ್‌ ಬಳಿ ಮಾಜಿ ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸರಕಾರ ಪೊಲೀಸ್‌ ಬಲ ಪ್ರಯೋಗಿಸಿ ಮೀಸಲು ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ. ಕ್ಷಮೆ ಕೇಳದಿದ್ದರೆ ಪಂಚಮಸಾಲಿ ಸಮಾಜದ 84 ಲಕ್ಷ ಜನರು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

Advertisement

ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ ಮತ್ತಿತರ ಕಡೆಗಳಲ್ಲಿಯೂ ಜನರು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ತಡೆದು ಪ್ರತಿಭಟನೆ: ಧಾರವಾಡದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕುಂದಗೋಳದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದರೆ, ಕಲಘಟಗಿ ತಾಲೂಕು ಉಗ್ಗಿನಕೇರಿ ಕ್ರಾಸ್‌ ಬಳಿ ಹುಬ್ಬಳ್ಳಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು.

ಆಡಳಿತ-ವಿಪಕ್ಷ ಗದ್ದಲ
-ಲಾಠಿಪ್ರಹಾರ ವಿಚಾರದಿಂದ ಉಭಯ ಸದನಗಳಲ್ಲಿ ಕೋಲಾಹಲ
-ಲಾಠಿ ಪ್ರಹಾರ ಮಾಡಿದ ನಿಲುವನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸರಕಾರ
-ರಾಜ್ಯ ಸರಕಾರದ ನಡೆ ಖಂಡಿಸಿ ವಿಪಕ್ಷ ಬಿಜೆಪಿ ಸಭಾತ್ಯಾಗ
-ಪ್ರಕರಣ ಹಿಂಪಡೆದು ಸಮುದಾಯದ ಕ್ಷಮೆ ಕೇಳಲು ವಿಪಕ್ಷ ಪಟ್ಟು
-ಅಧಿಕಾರಿ ವಿರುದ್ಧ ಕ್ರಮಕ್ಕೆ, ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹ

ಸ್ಪೀಕರ್‌ ವಿರುದ್ಧ ರೋಷ
-ವಿಧಾನಸಭೆಯಲ್ಲಿ ಲಾಠಿ ಪ್ರಹಾರಕ್ಕೆ ಸಂಬಂಧಿಸಿ ಸಚಿವ ಪರಮೇಶ್ವರ್‌, ಕೃಷ್ಣ ಬೈರೇಗೌಡ ಉತ್ತರ
-ಕ್ರಿಯಾಲೋಪ ಎತ್ತಿಹಿಡಿದ ಬಿಜೆಪಿ
-ಅವಕಾಶ ಕೊಡದೆ ಸಚಿವರ ಉತ್ತರಕ್ಕೆ ಅವಕಾಶ ನೀಡಿದ ಸ್ಪೀಕರ್‌
-ಸ್ಪೀಕರ್‌ ವಿರುದ್ಧ ವಿಪಕ್ಷ ಬಿಜೆಪಿ ಅಸಮಾಧಾನ, ಸ್ಪೀಕರ್‌ ಖಾದರ್‌ ಕೊಠಡಿಗೆ ಧಾವಿಸಿ ಮೇಜುಕುಟ್ಟಿ ಆಕ್ರೋಶ
-ಮನಸ್ಸಿಗೆ ಬಂದಂತೆ ನಡೆಸಲು ಸದನ ನಿಮ್ಮ ಮನೆ ಅಲ್ಲ: ಸ್ಪೀಕರ್‌ ಖಾದರ್‌ ವಿರುದ್ಧ ಬಿಜೆಪಿ ಸದಸ್ಯರ ಗುಡುಗು

ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ವರ್ಗೀಕರಣ ಪ್ರಕ್ರಿಯೆ ನಡೆಯಿತು. 2002ರಲ್ಲಿ ಮೀಸಲಾತಿಯ ಈಗಿರುವ ವರ್ಗೀಕರಣ ಅಂತಿಮಗೊಂಡಿತು. ಆಗೆಲ್ಲ ಪಂಚಮಸಾಲಿ ಮೀಸಲಾತಿ ಬಗ್ಗೆ ಪ್ರಸ್ತಾವ ಆಗಿರಲಿಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಮೀಸಲಾತಿ ಕೇಳಿದರೆ ಲಾಠಿ ಏಟು ಕೊಟ್ಟಿದ್ದಾರೆ. ಬಸವಣ್ಣನವರ ಸಮಾಜವನ್ನು ಅವಮಾನಿ ಸಿದ್ದಾರೆ. ಪಂಚಮಸಾಲಿ ಸಮಾಜದವರ ಮೇಲೆ ಪೂರ್ವನಿಯೋಜಿತ ಹಲ್ಲೆ ಮಾಡಲಾಗಿದೆ.
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next