Advertisement
ಆ ವಯಸ್ಸಲ್ಲೂ ತನ್ನ ಮೊದಲ ಪ್ರೇಯಸಿಯನ್ನು ಬಯಸಿ ಹೊರಡಲು ಕಾರಣವೇನು? ಇಷ್ಟು ಹೇಳಿದ ಮೇಲೆ ಕುತೂಹಲ ಸಹಜ. ಆ ಕುತೂಹಲ ತಣಿಯಬೇಕಾದರೆ ಚಿತ್ರ ನೋಡಬೇಕು. ಇಲ್ಲಿ ಸ್ಟಾರ್ ನಟರಿದ್ದಾರೆ ಎನ್ನುವುದಕ್ಕಿಂತ ಸ್ಟಾರ್ ಎನ್ನುವ ಕಥೆ ಇದೆ. ಅದೇ ಚಿತ್ರದ ಜೀವಾಳ. ಅದಕ್ಕೆ ತಕ್ಕಂತಿರುವ ಚಿತ್ರಕಥೆ ಚಿತ್ರದ ವೇಗಕ್ಕೊಂದು ಹೆಗಲು ಕೊಟ್ಟಂತಿದೆ. ಇವೆಲ್ಲದರ ನಡುವೆ ಸುಮ್ಮನೆ ನೋಡಿಸಿಕೊಂಡು ಹೋಗುವ “ಅಂಬಿ’, ಯಾವ ನಂಬಿಕೆಗೂ ಧಕ್ಕೆ ತಂದಿಲ್ಲ. ಚಿತ್ರದ ಮೊದಲರ್ಧ ಮನರಂಜನೆಯ ಹೂರಣ.
Related Articles
Advertisement
ಒಟ್ಟಾರೆ “ಮಂಡ್ಯ ಗೌಡ್ರು’ ನಡಿಗೆ ಸೂಪರ್ ಎನಿಸುವಷ್ಟರ ಮಟ್ಟಿಗೆ ಚಿತ್ರ ಹತ್ತಿರವಾಗುತ್ತದೆ. ಇದು ತಮಿಳಿನ “ಪವರ್ ಪಾಂಡಿ’ ಚಿತ್ರದ ರಿಮೇಕ್. ಹಾಗಂತ ಆ ಚಿತ್ರದ ಹೆಸರಷ್ಟೇ ಕೇಳಬಹುದು ವಿನಃ, ಇಲ್ಲಿ ಸಾಕಷ್ಟು ಹೊಸತನ ತುಂಬಿದೆ. ದೇಸೀತನವಿದೆ. ನೆಲದ ಮಣ್ಣಿನ ವಾಸನೆಯೂ ಇದೆ. ತಾತ ಎನಿಸಿಕೊಂಡರೂ ಅಂಬಿಯ ಫಿಗರ್ರು, ಖದರ್ರು, ಪವರ್ರು, ತುಂಟಾಟಗಳೆಲ್ಲವೂ ನೈಜತೆಗೆ ಹತ್ತಿರವೆನಿಸುತ್ತದೆ. ರೆಬೆಲ್ ವ್ಯಕ್ತಿಯ ಕಲರ್‌ಫುಲ್ ಚಿತ್ರಣದಲ್ಲಿ ಒಂದೊಳ್ಳೆಯ ಭಾವನಾತ್ಮಕ ಸಂದೇಶವಿದೆ. ಅದೇ ಚಿತ್ರದ ಜೀವಾಳ.
ಮೂಲ ಚಿತ್ರ ನೋಡಿದವರಿಗೆ ಇದು ಅಷ್ಟಾಗಿ ರುಚಿಸದೇ ಇರಬಹುದು. ಆದರೆ, ಮೊದಲ ಸಲ ನೋಡುಗರಿಗಂತೂ “ಅಂಬಿ’ ಕಬ್ಬಿನ ಹಾಲು. ಅಂಬಿ (ಅಂಬರೀಶ್) ಒಬ್ಬ ಸೀನಿಯರ್ ಫೈಟ್ ಮಾಸ್ಟರ್. ನಿವೃತ್ತಿಯಲ್ಲೂ ರೆಬೆಲ್ ನಂಟು ಬಿಡದ ವ್ಯಕ್ತಿತ್ವ. ತಪ್ಪು ಕಂಡರೆ ತಿದ್ದುವ, ದುಷ್ಟರನ್ನು ಸದೆಬಡಿಯುವ ವ್ಯಕ್ತಿ. ಒಂದಿಲ್ಲೊಂದು ಕಾರಣಕ್ಕೆ ಆಗಾಗ ಪೊಲೀಸ್ ಮೆಟ್ಟಿಲು ತುಳಿಯುವ ಪರಿಸ್ಥಿತಿ. ಅತ್ತ, ನಿತ್ಯವೂ ಮಗನ ಬೈಗುಳ. ಇದರಿಂದ ಬೇಸರಗೊಳ್ಳುವ ಅಂಬಿ, “ಮಕ್ಕಳ ಜೀವನದಲ್ಲಿ ನಾನಿದ್ದೇನೆ.
ನನಗೂ ಒಂದು ಜೀವನ ಇದೆ’ ಅಂದುಕೊಂಡು ರಾತ್ರೋ ರಾತ್ರಿ ತನ್ನ ಬುಲೆಟ್‌ನೊಂದಿಗೆ ಜರ್ನಿ ಶುರು ಮಾಡುತ್ತಾರೆ. ತನ್ನ ಹಳೆಯ ಪ್ರೇಯಸಿ ನಂದಿನಿ (ಸುಹಾಸಿನಿ)ಯನ್ನು ಹುಡುಕಿ ಹೊರಡುತ್ತಾರೆ. ಜರ್ನಿ ನಡುವೆ ಒಂದಷ್ಟು ಫ್ಲ್ಯಾಶ್‌ಬ್ಯಾಕ್‌ಗೆ ಹೋಗುತ್ತಾರೆ. ಆ ಫ್ಲ್ಯಾಶ್‌ಬ್ಯಾಕ್‌ನಲ್ಲೊಂದು ಪ್ರೇಮ ಕಥೆ ತೆರೆದುಕೊಳ್ಳುತ್ತೆ. ಯೌವ್ವನದಲ್ಲಿದ್ದಾಗ ತನ್ನ ಹಳ್ಳಿ ಜಾತ್ರೆಗೆ ಬಂದ ಹುಡುಗಿಯೊಬ್ಬಳಿಗೆ ಮನಸೋತು ಪ್ರೀತಿಸಿದ ಅಂಬಿಗೆ, ಹುಡುಗಿ ಅಪ್ಪನ ಅಡ್ಡಿಯಾಗುತ್ತೆ. ಅಲ್ಲಿಗೆ ಇಬ್ಬರ ಪ್ರೀತಿಗೂ ಬ್ರೇಕ್ ಬೀಳುತ್ತೆ.
ಅಂಬಿಗೆ ವಯಸ್ಸಾದರೂ ಭಾವನೆಗಳಿಗೆ ಕೊನೆಯಿಲ್ಲ. ಆ ಹಂತದಲ್ಲೂ ತನ್ನ ಪ್ರೇಯಸಿ ಹುಡುಕಿ ಹೊರಡುವ ಅಂಬಿಗೆ ಹಳೇ ಹುಡುಗಿ ಸಿಗುತ್ತಾಳಾ, ಇಲ್ಲವಾ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಸಿನಿಮಾ ನೋಡಬಹುದು. ಅಂಬರೀಶ್ ಅವರ ನಟನೆ, ಪಡ್ಡೆಗಳ ಜೊತೆಗಿನ ಡ್ಯಾನ್ಸು, ಪುಡಿರೌಡಿಗಳ ಜೊತೆ ಫೈಟು, ಪಂಚಿಂಗ್ ಡೈಲಾಗು ಎಲ್ಲವನ್ನೂ ನೋಡಿದರೆ, ಅವರಿಗೆ “ವಯಸ್ಸಾಯ್ತು’ ಅಂತ ಹೇಳಿದವರ್ಯಾರು ಎಂಬ ಪ್ರಶ್ನೆ ಬರುತ್ತೆ. ಅಷ್ಟರ ಮಟ್ಟಿಗೆ ಎಂದಿನ ಎನರ್ಜಿ ಪಾತ್ರದಲ್ಲಿದೆ. ಅವರಿಗೆ ವಯಸ್ಸಾಗಿದ್ದರೂ, ಅವರೊಳಗಿನ ಕಲಾವಿದ ಮಾತ್ರ ಹದಿಹರೆಯ.
ತೆರೆಯ ಮೇಲೆ ಕೆಲ ಹೊತ್ತು ಬಂದರೂ ಸುದೀಪ್ ಇಷ್ಟವಾಗುತ್ತಾರೆ. ಹಳ್ಳಿ ಹೈದನಾಗಿ, ಮುಗ್ಧ ಪ್ರೇಮಿಯಾಗಿ ಖುಷಿಕೊಡುತ್ತಾರೆ. ಸುಹಾಸಿನಿ ಅವರದು ನೈಜತೆ ತುಂಬಿದ ಅಭಿನಯ. ಅವರ ಎಂದಿನ ನಗುವೇ ಇಲ್ಲಿ ಹೈಲೆಟ್. ಶ್ರುತಿಹರಿಹರನ್ ಸಿಕ್ಕ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಬಂದು ಹೋಗುವ ಪಾತ್ರಗಳೆಲ್ಲವೂ ನ್ಯಾಯ ಒದಗಿಸಿವೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತಕ್ಕೆ ಕೊಟ್ಟಷ್ಟು ಗಮನವನ್ನು ಹಾಡಿಗೂ ಕೊಡಬಹುದಿತ್ತು. ಜೆಬಿನ್ ಜೇಕಬ್ ಛಾಯಾಗ್ರಹಣದಲ್ಲಿ “ಅಂಬಿ’ಯ ಸೊಗಸಿದೆ. -ಕೊನೇ ಮಾತು, ಅಂಬಿ ಎವರ್‌ಗ್ರೀನ್ ಲವ್‌ಸ್ಟೋರಿಗೆ ಇದೂ ಹೊಸ ಸೇರ್ಪಡೆ.
ಚಿತ್ರ: ಅಂಬಿ ನಿಂಗ್ ವಯಸ್ಸಾಯ್ತೋನಿರ್ಮಾಣ: ಜಾಕ್ ಮಂಜು
ನಿರ್ದೇಶನ: ಗುರುದತ್ತ ಗಾಣಿಗ
ತಾರಾಗಣ: ಅಂಬರೀಶ್, ಸುಹಾಸಿನಿ, ಸುದೀಪ್, ಶ್ರುತಿ ಹರಿಹರನ್, ದಿಲೀಪ್‌ರಾಜ್, ಅವಿನಾಶ್, ಜೈ ಜಗದೀಶ್ ಇತರರು. * ವಿಜಯ್ ಭರಮಸಾಗರ