Advertisement

ನಿಯಮ ಮೀರಿ ಪ್ರಚಾರ ಸಾಮಗ್ರಿ ಮುದ್ರಿಸಿದರೆ 6 ತಿಂಗಳ ಜೈಲು

03:56 PM Mar 31, 2018 | |

ಯಾದಗಿರಿ: ಮುದ್ರಕರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಬೇಕು. ಇಲ್ಲದಿದ್ದರೆ 2 ಸಾವಿರ ರೂ. ದಂಡ ಕಟ್ಟುವುದರ ಜೊತೆಗೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ನಡೆದ ಪ್ರಿಂಟಿಂಗ್‌ ಪ್ರಸ್‌ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆ ಪ್ರಚಾರದ ಬ್ಯಾನರ್‌, ಫ್ಲೆಕ್ಸ್‌, ಪೋಸ್ಟರ್, ಕರಪತ್ರ, ಪುಸ್ತಕ, ಕಿರುಹೊತ್ತಿಗೆ ಮುಂತಾದವುಗಳನ್ನು ಮುದ್ರಣ ಮಾಡುವ ಮುನ್ನ ಮುದ್ರಕರು ಸಂಬಂಧಿಸಿದ ಕ್ಷೇತ್ರ ಚುನಾವಣಾಧಿಕಾರಿಗಳ ಅನುಮತಿ ಪಡೆದಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಮಾತ್ರ ಮುದ್ರಣ ಮಾಡಬೇಕು ಎಂದು ಸೂಚಿಸಿದರು. 

ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ 127(ಎ)ರನ್ವಯ ಚುನಾವಣಾ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರು, ಪ್ರಕಾಶಕರ ಹೆಸರು, ವಿಳಾಸ ಹಾಗೂ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಜೊತೆಗೆ ಮುದ್ರಣ ಮಾಡುವ ಮುನ್ನ ಪ್ರಕಾಶಕರಿಂದ ಘೋಷಣಾ ಪತ್ರ (ಅನುಬಂಧ-ಎ) ಪಡೆಯಬೇಕು. ಘೋಷಣಾ ಪತ್ರಕ್ಕೆ ಪ್ರಕಾಶಕನನ್ನು ಚೆನ್ನಾಗಿ ಬಲ್ಲ ಇಬ್ಬರು ವ್ಯಕ್ತಿಗಳಿಂದ ದೃಢೀಕರಣ ಪಡೆಯಬೇಕು. ಮುದ್ರಣದ ನಂತರ ಘೋಷಣಾ ಪತ್ರದೊಂದಿಗೆ ಪ್ರಚಾರ ಸಾಮಗ್ರಿಯ ನಾಲ್ಕು ಪ್ರತಿಯನ್ನು
ಮೂರು ದಿನದೊಳಗೆ ಪ್ರಿಂಟಿಂಗ್‌ ಪ್ರಸ್‌ ಮಾಲೀಕರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ ಎಂದು ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.

ರಾಜಕೀಯ ಪಕ್ಷ, ಅಭ್ಯರ್ಥಿ ಅಥವಾ ಇವರ ಪರವಾಗಿ ಬೇರೆ ಯಾರೇ ಪ್ರಕಟಣೆ ಹೊರಡಿಸಲಿ, ಸಾಮಗ್ರಿ ಮುದ್ರಣ ವೆಚ್ಚಕ್ಕೆ ಸಂಬಂಧಿಸಿದ ಬಿಲ್‌ ರಶೀದಿ ಅಥವಾ ಚೆಕ್‌ ( 20 ಸಾವಿರಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಚೆಕ್‌)ಅನ್ನು ಆಯಾ ಕ್ಷೇತ್ರದ ಚುನಾವಣಾಧಿ ಕಾರಿಗೆ ಸಲ್ಲಿಸಬೇಕು. ಬಳಿಕ, ಅವರು ಪರಿಶೀಲನೆಗೆ ಖರ್ಚು-ವೆಚ್ಚ ಸಮಿತಿ ( ಕ್ಷೇತ್ರ)ಗೆ ಕಳುಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಲರ್‌ ಝೆರಾಕ್ಸ್‌ ಸೆಂಟರ್‌ ಸೇರಿದಂತೆ ಚುನಾವಣಾ ಪ್ರಚಾರ ಸಾಮಾಗ್ರಿ ಮುದ್ರಿಸುವ ಎಲ್ಲರೂ ಈ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ಅವರು ತಾಕೀತು ಮಾಡಿದರು.

Advertisement

ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆ ಮುಂತಾದವುಗಳ ಬಗ್ಗೆ ಪ್ರಚೋದನಾತ್ಮಕ ವಿಷಯಗಳನ್ನು ಪ್ರಕಟಿಸಕೂಡದು. ಒಂದು ವೇಳೆ, ಪ್ರಕಟಿಸಿ, ಸಮಾಜದ ಶಾಂತಿಗೆ ಭಂಗ ಉಂಟು ಮಾಡಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹೈದ್ರಾಬಾದ್‌ ಮುಂತಾದೆಡೆ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಿಕೊಂಡು ಬಂದು, ಅವುಗಳಲ್ಲಿ ಸ್ಥಳೀಯ ಪ್ರಿಂಟಿಂಗ್‌ ಪ್ರಸ್‌ ಹೆಸರು ಹಾಕಿರುವುದು ಈ ಹಿಂದೆ ಕಂಡು ಬಂದಿದೆ ಎಂದು ಪ್ರಿಂಟಿಂಗ್‌ ಪ್ರಸ್‌ ಮಾಲೀಕರು ಈ ಸಂದರ್ಭದಲ್ಲಿ ಗೋಳು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಗಡಿಭಾಗಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ತಪಾಸಣೆ ನಡೆಯುತ್ತದೆ. ಆದಾಗ್ಯೂ ಇಂತಹ ಪ್ರಕರಣಗಳು ಕಂಡು ಬಂದಲ್ಲಿ, ಮಾಹಿತಿ ನೀಡಿ ಎಂದು ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿ ಕಾರಿ ಪ್ರಕಾಶ್‌ ಜಿ. ರಜಪೂತ ಸೇರಿದಂತೆ ಪ್ರಿಂಟಿಂಗ್‌ ಪ್ರಸ್‌ ಮಾಲೀಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next